ಪ್ರಧಾನಿ ಮೋದಿ ಪಬ್​ಜಿ ಯಾಕೆ ಬ್ಯಾನ್ ಮಾಡಿಲ್ಲ ಗೊತ್ತಾ?: ಕಾಂಗ್ರೆಸ್​ ವಕ್ತಾರ ಹೇಳ್ತಾರೆ ಕೇಳಿ...​

PubG
Published on

ನವದೆಹಲಿ: ಗಲ್ವಾನ್​ ಸಂಘರ್ಷದ ಬೆನ್ನಲ್ಲೇ ಚೀನಾದ 59 ಆ್ಯಪ್​ ಬ್ಯಾನ್​ ಮಾಡಿದ್ದ ಕೇಂದ್ರ ಸರ್ಕಾರ ಸೋಮವಾರ ಮತ್ತೆ 47 ಆ್ಯಪ್​ಗಳನ್ನು ಬ್ಯಾನ್​ ಮಾಡುವ ಮೂಲಕ ಮತ್ತೊಮ್ಮೆ ಶಾಕ್​ ನೀಡಿದೆ. ಇದರ ಬೆನ್ನಲ್ಲೇ ಟ್ವೀಟ್​ ಮಾಡಿರುವ ಕಾಂಗ್ರೆಸ್​ ವಕ್ತಾರ ಹಾಗೂ ಸುಪ್ರೀಂಕೋರ್ಟ್​ ವಕೀಲ ಅಭಿಷೇಕ್​ ಮನು ಸಿಂಘ್ವಿ ಕೇಂದ್ರ ಸರ್ಕಾರದ ವಿರುದ್ಧ ಕಿಡಕಾರಿದ್ದಾರೆ.

ಮೋದಿ ಅವರು ಪಬ್​ಜಿ ಆ್ಯಪ್​ ಅನ್ನು ಬ್ಯಾನ್​ ಮಾಡಬೇಕೆಂದು ಬಯಸಿದ್ದಾರೆ. ಆದರೆ, ಯುವಕರು ಫ್ಯಾಂಟಸಿ (ಕಲ್ಪನಾ ಲೋಕ)ಯಿಂದ ವಾಸ್ತವ ಲೋಕಕ್ಕೆ ಬಂದು ಉದ್ಯೋಗದ ಬಗ್ಗೆ ಕೇಳಿದರೆ, ಮುಂದೆ ಇದೇ ಸಮಸ್ಯೆಯಾಗಲಿದೆ ಎಂದರಿತು ಪಬ್​ಜಿ ಬ್ಯಾನ್​ ಮಾಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ಸಿಂಘ್ವಿ ಟ್ವೀಟ್​ ಮೂಲಕ ಕಾಲೆಳೆದಿದ್ದಾರೆ.

ಚೀನಾ ಸಂಬಂಧಿತ 47 ಆ್ಯಪ್​ಗಳನ್ನು ಬ್ಯಾನ್​ ಮಾಡುತ್ತಿರುವುದಾಗಿ ಕೇಂದ್ರ ಸರ್ಕಾರ ಸೋಮವಾರ ಹೇಳಿತ್ತು. ಕಳೆದ ತಿಂಗಳು ಟಿಕ್​ಟಾಕ್​ ಸೇರಿದಂತೆ 59 ಆ್ಯಪ್​ಗಳನ್ನು ಸರ್ಕಾರ ನಿರ್ಬಂಧಿಸಿತ್ತು. ಇದೀಗ ಪಬ್​ಜಿ ಸೇರಿದಂತೆ ಒಟ್ಟು 250 ಆ್ಯಪ್​ಗಳ ಪಟ್ಟಿ ತಯಾರಿಸಿದ್ದು ಅವುಗಳ ಮೇಲೆ ಕೇಂದ್ರ ಸರ್ಕಾರ ಕಣ್ಣಿಟ್ಟಿದೆ.

ಇನ್ನು ಪಬ್​ಜಿ ಆ್ಯಪ್​ ಗೇಮ್​ಗೆ ಸಂಬಂಧಿಸಿದ್ದು, ಇದನ್ನು ದಕ್ಷಿಣ ಕೊರಿಯಾ ಕಂಪನಿ ಅಭಿವೃದ್ಧಿ ಪಡಿಸಿದ್ದರೂ, ಬಂಡವಾಳ ಹೂಡಿರುವುದು ಮಾತ್ರ ಚೀನಾದ ಟೆನ್ಸೆಂಟ್​ ಕಂಪನಿ. ಭಾರತದಲ್ಲಿ ಹೆಚ್ಚು ಬಳಕೆಯಲ್ಲಿ ಪಬ್​ಜಿ ಆ್ಯಪ್​ ಚೀನಾಗೂ ಲಿಂಕ್​ ಇರುವುದರಿಂದ ಇದೀಗ ಅದರ ಮೇಲೂ ಕೇಂದ್ರ ಸರ್ಕಾರ ತನ್ನ ದೃಷ್ಟಿ ನೆಟ್ಟಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net