

ನವದೆಹಲಿ : ದೇಶದ ಮಧ್ಯಮ ವರ್ಗದ ಜನರ ಹೊರೆಯನ್ನು ಕಡಿಮೆ ಮಾಡಲು ಇಂದಿನ ಕೇಂದ್ರದ ಕ್ಯಾಬಿನೆಟ್ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಕೇಂದ್ರ ಸರ್ಕಾರವು ದೇಶದ ತೈಲ ಕಂಪನಿಗಳಿಗೆ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ಇಳಿಸಲು ಅನುಕೂಲವಾಗುವಂತೆ 30 ಸಾವಿರ ಕೋಟಿ ರೂಪಾಯಿ ಸಬ್ಸಿಡಿ ನೀಡಲು ಕ್ಯಾಬಿನೆಟ್ ಸಭೆಯಲ್ಲಿ ಒಪ್ಪಿಗೆ ನೀಡಿದೆ. ದ್ರವೀಕೃತ ಪೆಟ್ರೋಲಿಯಂ ಅನಿಲ (LPG) ವನ್ನು ಗ್ರಾಹಕರಿಗೆ ಹೆಚ್ಚು ಕೈಗೆಟುಕುವಂತೆ ಮಾಡಲು ತೈಲ ಮಾರುಕಟ್ಟೆ ಕಂಪನಿಗಳಿಗೆ (OMCs) ಇಂದು (ಆ.08) ಕೇಂದ್ರ ಸಚಿವ ಸಂಪುಟವು ಗಣನೀಯ 30,000 ಕೋಟಿ ರೂ. ಸಬ್ಸಿಡಿಯನ್ನು ಅನುಮೋದಿಸಿದೆ.
ದೇಶಾದ್ಯಂತ ಇಂಧನ ಸುರಕ್ಷತೆ ಮತ್ತು ಗೃಹಬಳಕೆಯ ಅಡುಗೆ ಇಂಧನಗಳಿಗೆ ನಿರಂತರ ಪ್ರವೇಶವನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಈ ಕ್ರಮ ಹೊಂದಿದೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ಘೋಷಿಸಿದ್ದಾರೆ.
ಕೇಂದ್ರ ಸಚಿವ ಸಂಪುಟವು 2026 ರ ಆರ್ಥಿಕ ವರ್ಷದಲ್ಲಿ ಪ್ರಧಾನಮಂತ್ರಿ ಉಜ್ವಲ ಯೋಜನಾ ಫಲಾನುಭವಿಗಳಿಗೆ 12,060 ಕೋಟಿ ರೂ.ಗಳ ಅನುದಾನವನ್ನು ಅನುಮೋದಿಸಿದೆ. ಇಂದು ಬಿಡುಗಡೆಯಾದ ಅಧಿಕೃತ ಪ್ರಕಟಣೆಯ ಪ್ರಕಾರ, ವರ್ಷಕ್ಕೆ ಒಂಬತ್ತು ರೀಫಿಲ್ಸ್ (ಮತ್ತು 5 ಕೆಜಿ ಸಿಲಿಂಡರ್‌ಗೆ ಅನುಗುಣವಾಗಿ) 14.2 ಕೆಜಿ ಸಿಲಿಂಡರ್‌ಗೆ 300 ರೂ. ನಷ್ಟು ಸಬ್ಸಿಡಿ ನೀಡುವ ಗುರಿಯನ್ನು ಹೊಂದಿದೆ.
(ಏಜೆನ್ಸೀಸ್)
ದೇಶದ ತೈಲ ಕಂಪನಿಗಳಿಗೆ ಎಲ್‌ಪಿಜಿ ಸಿಲಿಂಡರ್ ಮಾರಾಟದಿಂದ ಆಗಿರುವ ನಷ್ಟ ಭರಿಸಲು ಇದು ಅನುಕೂಲವಾಗಲಿದೆ. ಜಾಗತಿಕ ಮಟ್ಟದ ಯುದ್ಧ, ಅನಿಶ್ಚಿತತೆಯ ಕಾರಣದಿಂದ ಭಾರತದ ತೈಲ ಕಂಪನಿಗಳು ನಷ್ಟದಲ್ಲಿ ಮುಳುಗಿವೆ. ಜಾಗತಿಕ ಮಟ್ಟದಲ್ಲಿ ರಷ್ಯಾ- ಉಕ್ರೇನ್ ಯುದ್ಧ, ಇಸ್ರೇಲ್- ಗಾಜಾ, ಪ್ಯಾಲೆಸ್ಟೈನ್ ಯುದ್ಧ, ಇಸ್ರೇಲ್- ಇರಾನ್ ಯುದ್ಧಗಳಿಂದಾಗಿ ಗ್ಯಾಸ್ ಬೆಲೆ ಏರಿಳಿತವಾಗುತ್ತಿದೆ. ಭಾರತವು ರಷ್ಯಾದಿಂದ ಕಡಿಮೆ ಬೆಲೆಗೆ ಗ್ಯಾಸ್ ಅನ್ನು ಖರೀದಿಸುತ್ತಿದೆ. ಭಾರತದ ತೈಲ ಕಂಪನಿಗಳು ಆರ್ಥಿಕವಾಗಿ ನಷ್ಟದಲ್ಲೇ ಇವೆಯಂತೆ. ಈಗ ಕೇಂದ್ರ ಸರ್ಕಾರವು 30 ಸಾವಿರ ಕೋಟಿ ರೂಪಾಯಿ ಸಬ್ಸಿಡಿ ನೀಡುವುದರಿಂದ ನಷ್ಟವನ್ನು ಸರಿದೂಗಿಸಿಕೊಳ್ಳಲು ಸಾಧ್ಯವಾಗುತ್ತದೆ. ಬಳಿಕ ಮಧ್ಯಮ ವರ್ಗಕ್ಕೆ ಕಡಿಮೆ ಬೆಲೆಯಲ್ಲಿ ಎಲ್‌ಪಿಜಿ ಸಿಲಿಂಡರ್ಗಳು ಸಿಗಲಿವೆ