

ಬೆಂಗಳೂರು: ಹೈಕೋರ್ಟ್ ಸೂಚನೆ ಮೇರೆಗೆ ಅಭಿಮಾನ್ ಸ್ಟುಡಿಯೋದಲ್ಲಿದ್ದ ದಿವಂಗತ ನಟ ವಿಷ್ಣುವರ್ಧನ್(Vishnuvardhan) ಅವರ ಸಮಾಧಿಯನ್ನು ರಾತ್ರೋರಾತ್ರಿ ತೆರವುಗೊಳಿಸಲಾಗಿದೆ. ಇದರಿಂದ ಅಘಾತಕ್ಕೊಳಗಾಗಿರುವ ಅಭಿಮಾನಿಗಳು, ಸರ್ಕಾರ, ಪೊಲೀಸ್ ಮತ್ತು ಕನ್ನಡ ಚಲಚಿತ್ರ ಮಂಡಳಿ ವಿರುದ್ಧ ತೀವ್ರ ಆಕ್ರೋಶ ಹೊರ ಹಾಕಿದ್ದಾರೆ.
ಅಭಿಮಾನ್ ಸ್ಟುಡಿಯೋ ಹಾಗೂ ವಿಷ್ಣುವರ್ಧನ್ ಅಭಿಮಾನಿ ಸಂಘದ ನಡುವೆ ಸಮಾಧಿ ಸ್ಥಳದ ಕುರಿತಾಗಿ ವಾದ-ವಿವಾದ ವರ್ಷಗಳಿಂದಲೂ ನಡೆಯುತ್ತಲೇ ಇದೆ. ಸಮಾಧಿ ಸ್ಥಳದಲ್ಲಿಯೇ ಸ್ಮಾರಕ ನಿರ್ಮಾಣ ಮಾಡಬೇಕು ಎಂದು ವರ್ಷಗಳಿಂದಲೂ ವಿಷ್ಣು ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ. ಇದೀಗ, ಹೈಕೋರ್ಟ್ ಸೂಚನೆ ಮೇರೆಗೆ ಸಮಾಧಿಯನ್ನು ತೆರವುಗೊಳಿಸಲಾಗಿದೆ.
ಅಭಿಮಾನಿಗಳ ವಿರೋಧದ ನಡುವೆಯೂ ಡಾ. ವಿಷ್ಣುವರ್ಧನ ಸಮಾಧಿ ತೆರವುಗೊಳಿಸಿದ್ದು, ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ''ನಮ್ಮ ದೇವರ ಗುಡಿಯನ್ನು ಇಂದು ನೆಲಸಮ ಮಾಡಿದ್ದಾರೆ. ಇದು ನಮ್ಮ ಯಜಮಾನರು ಮಲಗಿದ್ದಂತಹ ಜಾಗ. ಅಲ್ಲೊಂದು ಪುಟ್ಟ ಗುಡಿ ಇತ್ತು. ಸಣ್ಣ ಗೋಪುರ ಇತ್ತು. ಆ ಗೋಪುರವನ್ನು ರಾತ್ರೋರಾತ್ರಿ ನೆಲಸಮ ಮಾಡಿದ್ದಾರೆ. ನಮ್ಮ ಯಜಮಾನರನ್ನು ನೋಡಲು ಬಂದರೆ ಗೇಟ್ ಕೂಡ ತೆಗೆಯುತ್ತಿಲ್ಲ. ಪೊಲೀಸರು ಸರ್ಪಗಾವಲು ಹಾಕಿಕೊಂಡು ಕೂತ್ತಿದ್ದಾರೆ'' ಎಂದು ನಿರ್ದೇಶಕ ರವಿ ಶ್ರೀವತ್ಸ ಫೇಸ್ಬುಕ್ ಲೈವ್ನಲ್ಲಿ ಕಣ್ಣಿರಿಟ್ಟಿದ್ದಾರೆ.
ಸರ್ಕಾರ ಮೈಸೂರಿನಲ್ಲಿ 2.75 ಎಕ್ರೆ ಜಾಗದಲ್ಲಿ ವಿಷ್ಣು ಸ್ಮಾರಕ ನಿರ್ಮಾಣ ಮಾಡಿದೆ. ವಿಷ್ಣು ಸಿನಿಮಾದಲ್ಲಿನ ಪ್ರಶಸ್ತಿಗಳೂ ಸ್ಮಾರಕದ ಮ್ಯೂಸಿಯಂನಲ್ಲಿದೆ. ನಟನ ಚಲನಚಿತ್ರ ಪ್ರಯಾಣದ ಗ್ಯಾಲರಿ, ವಿಷ್ಣು ಅವರ ಅಪರೂಪದ 600ಕ್ಕೂ ಹೆಚ್ಚು ಫೋಟೋಗಳು, ವಿಷ್ಣು ಬಳಸುತ್ತಿದ್ದ ವಸ್ತುಗಳು, ಬಟ್ಟೆ ಇಲ್ಲಿ ನೋಡಬಹುದಾಗಿದೆ. ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರು ವಿಷ್ಣುವರ್ಧನ್ ಸ್ಮಾರಕಕ್ಕೆ ಸೆಪ್ಟೆಂಬರ್ 15, 2020 ರಂದು ಶಂಕುಸ್ಥಾಪನೆ ನೆರವೇರಿಸಿದ್ದರು.