

Kantara : ಖ್ಯಾತ ನಟ ರಿಷಬ್ಶೆಟ್ಟಿ ನಿರ್ದೇಶನದ ಬಹುನಿರೀಕ್ಷಿತ ಕನ್ನಡದ ಸಿನಿಮಾ 'ಕಾಂತಾರ ಅಧ್ಯಾಯ-1' ಇದೇ ವರ್ಷದ ಅಕ್ಟೋಬರ್ 2ಕ್ಕೆ ಬಿಡುಗಡೆಗೊಳ್ಳಲಿದ್ದು, ಶುಕ್ರವಾರ ಚಿತ್ರತಂಡ ಚಿತ್ರದ ನಾಯಕಿ ಕನಕವತಿಯನ್ನು ಪರಿಚಯಿಸಿದೆ.
ಈ ಚಿತ್ರದಲ್ಲಿ ನಟಿ ರುಕ್ಮಿಣಿ ವಸಂತ್ ʻಕನಕವತಿʼ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವರಮಹಾಲಕ್ಷ್ಮಿ ಹಬ್ಬದ ಶುಭ ಸಂದರ್ಭದಲ್ಲಿ ʻಕನಕವತಿʼಯ ಫಸ್ಟ್ ಲುಕ್ ಅನ್ನು ಹೊಂಬಾಳೆ ಫಿಲ್ಮಸ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದೆ.
ಇದೀಗ 'ಕನಕವತಿ'ಯ ಪಾತ್ರದ ಪರಿಚಯ, ಚಿತ್ರದ ಕುರಿತಾದ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ. ರುಕ್ಮಿಣಿ ವಸಂತ್ ಅವರ ಪೋಸ್ಟರ್ ಇದೀಗ ಎಲ್ಲೆಡೆ ಭಾರೀ ವೈರಲ್ ಆಗಿದೆ.
ಚಿತ್ರಕ್ಕೆ ಅರವಿಂದ್ ಎಸ್. ಕಶ್ಯಪ್ ಅವರ ಛಾಯಾಗ್ರಹಣ, ಬಿ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಇದೆ. ಹೊಂಬಾಳೆ ಫಿಲ್ಮ್ಸ್ ಅಡಿಯಲ್ಲಿ ವಿಜಯ್ ಕಿರಗಂದೂರು ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
ಅಕ್ಟೋಬರ್ 2ರಂದು ಈ ಸಿನಿಮಾ ಕನ್ನಡ, ತೆಲುಗು, ಹಿಂದಿ, ತಮಿಳು, ಮಲಯಾಳಂ, ಬಂಗಾಳಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ವಿಶ್ವಾದ್ಯಂತ ಬಿಡುಗಡೆಯಾಗಲಿದೆ.
ಈ ಚಿತ್ರವು 2022ರಲ್ಲಿ ಬಿಡುಗಡೆಯಾಗಿ ಜಾಗತಿಕ ಮಟ್ಟದಲ್ಲಿ ಪ್ರಶಂಸೆ ಗಳಿಸಿದ್ದ 'ಕಾಂತಾರ' ಚಿತ್ರದ ಕಥೆಗೆ ಮತ್ತಷ್ಟು ಆಳವಾದ ಹಿನ್ನೆಲೆಯನ್ನು ನೀಡುವ ಕಥಾಹಂದರವಾಗಿದೆ.(ಏಜೆನ್ಸೀಸ್)