ಜೀವಜಲ ಬಳಕೆ ಮಿತ ಬೇಸಿಗೆ ಜೀವನಕ್ಕೆ ಹಿತ!

ವಿಜಯವಾಣಿ (5)
Published on

ಬೆಂಗಳೂರು: ಚಳಿಗಾಲ ಮುಗಿಯುವ ಮೊದಲೇ ರಾಜ್ಯದಲ್ಲಿ ದಿನೇದಿನೆ ಹೆಚ್ಚುತ್ತಿರುವ ಬಿಸಿಲು ಜನರ ನೆಮ್ಮದಿ ಕೆಡಿಸಿದೆ. ಉಷ್ಣಾಂಶ ಏರಿಕೆಯಿಂದಾಗಿ ಜಲಾಶಯಗಳಲ್ಲಿನ ನೀರಿನ ಸಂಗ್ರಹ ಇಳಿಕೆ ಆಗುತ್ತಿದ್ದು, ಅಂತರ್ಜಲ ಕೂಡ ಕುಸಿಯಲಾರಂಭಿಸಿದೆ. ಸದ್ಯದ ಪರಿಸ್ಥಿತಿಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಎನ್ನುವಷ್ಟು ಸಮಸ್ಯೆ ಗಂಭೀರವಾಗಿಲ್ಲವಾದರೂ ನೀರಿನ ಬಳಕೆಯಲ್ಲಿ ಮಿತವ್ಯಯ ಸಾಧಿಸದಿದ್ದರೆ ಮಾರ್ಚ್ ಮಧ್ಯಭಾಗದಲ್ಲಿ ಸಮಸ್ಯೆ ನಿಶ್ಚಿತ ಎಂಬ ಅಂಶ ವಿಜಯವಾಣಿ ರಿಯಾಲಿಟಿ ಚೆಕ್​ನಲ್ಲಿ ಬೆಳಕಿಗೆ ಬಂದಿದೆ. ಕಳೆದ ವರ್ಷ ಉತ್ತಮ ಮಳೆಯಾಗಿದ್ದರಿಂದ ಜಲಾಶಯ, ಕೆರೆಗಳಲ್ಲಿನ ನೀರಿನ ಸಂಗ್ರಹ, ಕೊಳವೆಬಾವಿಗಳಲ್ಲಿ ಅಂತರ್ಜಲ ಉತ್ತಮವಾಗಿದೆ. ಕೆಲ ಜಿಲ್ಲೆ ಹೊರತುಪಡಿಸಿ ಬಹುತೇಕ ಕಡೆ ನೀರಿನ ಲಭ್ಯತೆ ಇದೆ.

ಬೇಸಿಗೆ ಎದುರಿಸಲು ಸಿದ್ಧತೆ

ಕಳೆದ ವರ್ಷ ಉತ್ತಮ ಮಳೆ ಕಾರಣಕ್ಕೆ ಅಂತರ್ಜಲದ ಪ್ರಮಾಣ ರಾಜ್ಯದ ಯಾವ ಜಿಲ್ಲೆಯಲ್ಲಿಯೂ ತೀರಾ ಕುಸಿದಿಲ್ಲ. ಅಂತೆಯೇ ಕೆರೆಗಳಲ್ಲಿಯೂ ನೀರಿನ ಲಭ್ಯತೆ ಇರುವುದ ರಿಂದ ಜಾನುವಾರುಗಳಿಗೂ ಸಮಸ್ಯೆ ಸದ್ಯಕ್ಕಿಲ್ಲ. ಒಂದು ವೇಳೆ ಕೆಲವೆಡೆ ನೀರಿನ ಸಮಸ್ಯೆ ಎದುರಾದರೆ ಟ್ಯಾಂಕರ್, ಖಾಸಗಿ ಬೋರ್​ವೆಲ್ ಬಳಕೆಗೆ ಕ್ರಮ ವಹಿಸಲು ಜಿಲ್ಲಾಡಳಿತ ಸಿದ್ಧತೆ ನಡೆಸಿವೆ.

ಎಲ್ಲಿ, ಏನಿದೆ ಪರಿಸ್ಥಿತಿ?

ತುಂಗಾ ಜಲಾಶಯ: ಶಿವಮೊಗ್ಗ ನಗರಕ್ಕೆ ಕುಡಿವ ನೀರು ಒದಗಿಸುವ ಜಲಾಶಯದಲ್ಲಿ ಸದ್ಯ 588.24 ಮೀಟರ್ ನೀರಿದೆ.

ಭದ್ರಾ ಜಲಾಶಯ: ಬಯಲುಸೀಮೆ ಜೀವ ನಾಡಿ ಭದ್ರಾ ಜಲಾಶಯದಲ್ಲಿ 171 ಅಡಿ ನೀರಿದೆ.

ಲಿಂಗನಮಕ್ಕಿ: ಲಿಂಗನಮಕ್ಕಿ ಡ್ಯಾಂನಲ್ಲಿ 1,796.45 ಅಡಿ ನೀರಿದೆ

ತುಂಗಭದ್ರಾ ಜಲಾಶಯ: 40.512 ಟಿಎಂಸಿ ನೀರಿದ್ದು, ಕುಡಿಯುವ ಉದ್ದೇಶಕ್ಕೆ ಕೊರತೆ ಇಲ್ಲ

ಕೆಆರ್​ಎಸ್ ಡ್ಯಾಂ: 124.80 ಅಡಿ ಜಲಾಶಯದಲ್ಲಿ ಸದ್ಯ 115.56 ಅಡಿ ನೀರಿದೆ

ಹೇಮಾವತಿ ಡ್ಯಾಂ: 37 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ 20 ಟಿಎಂಸಿ ನೀರಿದೆ

ಹಾರಂಗಿ ಜಲಾಶಯ: 2837 ಅಡಿ ನೀರಿನ ಸಂಗ್ರಹವಿದ್ದು, ಕುಡಿವ ಉದ್ದೇಶಕ್ಕೆ ಸಮಸ್ಯೆ ಇಲ್ಲ

ಕಬಿನಿ ಜಲಾಶಯ: 2284 ಅಡಿ ಸಾಮರ್ಥ್ಯದ ಡ್ಯಾಂನಲ್ಲಿ 2276.28 ಅಡಿ ನೀರಿದೆ.

ಎಲೆಲ್ಲಿ ಸಮಸ್ಯೆ ಆತಂಕ?

ಬೆಳಗಾವಿ ಮಹಾನಗರ ಸೇರಿ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಪಂ ವ್ಯಾಪ್ತಿಯ ಪ್ರದೇಶಗಳಲ್ಲಿ ಈಗಲೇ ನಾಲ್ಕು ದಿನಕ್ಕೊಮ್ಮೆ, ಇಲ್ಲವೇ ವಾರಕ್ಕೊಮ್ಮೆ ನೀರು ಪೂರೈಸಲಾಗುತ್ತಿದೆ. ಈ ಭಾಗಕ್ಕೆ ನೀರು ಪೂರೈಸುವ ಜಲಾಶಯದಲ್ಲಿ ಸಂಗ್ರಹ ಮಟ್ಟ ಕಡಿಮೆಯಾಗುತ್ತಿದ್ದು, ಮಾರ್ಚ್ ವೇಳೆಗೆ ಅಭಾವ ಹೆಚ್ಚಲಿದೆ. ದಾವಣಗೆರೆ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಕುಸಿಯಲು ಆರಂಭವಾಗಿದೆ. ಆನಗೋಡು ಭಾಗದಲ್ಲಿ ಡಿಸೆಂಬರ್​ನಲ್ಲಿ 12.10 ಮೀಟರ್ ಇದ್ದ ಅಂತರ್ಜಲ ಮಟ್ಟ ಜನವರಿಯಲ್ಲಿ 17.10 ಮೀಟರ್​ಗೆ ಕುಸಿದಿದೆ.

ವಿಜಯನಗರ ಜಿಲ್ಲೆಯ ಹರಪನಹಳ್ಳಿಯ ಕೆಲ ಗ್ರಾಮಗಳಲ್ಲಿ ಈಗಲೇ ನೀರಿನ ಅಭಾವ ಎದುರಾಗಿದೆ. ಹಾವೇರಿ ಜಿಲ್ಲೆಯಲ್ಲಿ ತುಂಗಭದ್ರಾ, ವರದಾ, ಧರ್ವ ಹಾಗೂ ಕುಮದ್ವತಿ ನದಿಗಳಲ್ಲಿ ಸದ್ಯಕ್ಕೆ ನೀರಿನ ಹರಿವು ಇದೆ. ಪ್ರಸ್ತುತ ನೀರಿನ ಕೊರತೆ ಕಾಡುತ್ತಿಲ್ಲವಾದರೂ, ಬಿಸಿಲು ಹೀಗೆಯೇ ಮುಂದುವರಿದರೆ ಏಪ್ರಿಲ್ ನಂತರ ನೀರಿನ ಅಭಾವ ಉಂಟಾಗುವ ಸಾಧ್ಯತೆ ಇದೆ. ಕಲಬುರಗಿ ಜಿಲ್ಲೆಯಲ್ಲಿ ಮಾರ್ಚ್​ನಲ್ಲಿ 194 ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಎದುರಾಗಬಹುದು ಎಂದು ಅಂದಾಜಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net