

| ಶ್ರೀಕಾಂತ್ ಶೇಷಾದ್ರಿ ಬೆಂಗಳೂರು
ರಾಜ್ಯದಲ್ಲಿ ‘ಗುಜರಾತ್ ಮಾದರಿ’ ಮುಂದಿಟ್ಟುಕೊಂಡು ಕಾಂಗ್ರೆಸನ್ನು ಗೋಳಾಡಿಸಿದ್ದ ಬಿಜೆಪಿಗೆ ಎದಿರೇಟು ನೀಡಲು ಕೈ ಪಾಳಯ ಈಗ ರಾಜಸ್ಥಾನ ಹಾಗೂ ಛತ್ತೀಸ್ಗಢದ ‘ಮಾಡಲ್’ಯನ್ನು ಪರಿಚಯಿಸಲು ಮುಂದಾಗಿದೆ. ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ ಇನ್ನೊಂದು ವರ್ಷ ಬಾಕಿ ಇರುವಂತೆಯೇ ಎರಡೂ ರಾಷ್ಟ್ರೀಯ ಪಕ್ಷಗಳು ಜನರನ್ನು ತಮ್ಮತ್ತ ಸೆಳೆದುಕೊಳ್ಳಲು ಪ್ರಯತ್ನ ನಡೆಸುತ್ತಿವೆ. ಇದರಲ್ಲಿ ಅನ್ಯ ರಾಜ್ಯದಲ್ಲಿನ ತಮ್ಮ ಪಕ್ಷದ ಸಾಧನೆಗಳನ್ನು ಇಲ್ಲಿ ಪ್ರಚಾರ ಮಾಡಿ ಪಕ್ಷದ ಇಮೇಜ್ ಹೆಚ್ಚಿಸಿಕೊಳ್ಳುವ ಇರಾದೆ ಹೊಂದಿವೆ. ವಿಶೇಷವೆಂದರೆ ತಮ್ಮದೇ ಪಕ್ಷದ ಹಿಂದಿನ ಸರ್ಕಾರದ ಜನಪ್ರಿಯ ಯೋಜನೆಗಳನ್ನು ಬಳಸುವುದಕ್ಕಿಂತ ಹೆಚ್ಚು ಅನ್ಯರಾಜ್ಯದ ನಿರ್ಣಯಗಳನ್ನೇ ಫೋಕಸ್ ಮಾಡಿ ಜನರನ್ನು ತಲುಪಲು ಯತ್ನಿಸಿವೆ.
ಗುಜರಾತ್ ರೀತಿ ಕರ್ನಾಟಕವನ್ನೂ ಅಭಿವೃದ್ಧಿಮಾಡುತ್ತೇವೆಂದು ಬಿಜೆಪಿ ನಾಯಕರು ಹೇಳಿಕೊಂಡು ಬಂದಿದ್ದರು. ಗುಜರಾತ್ ಅಭಿವೃದ್ಧಿಯನ್ನು ದೇಶದಲ್ಲಿ ನಂಬರ್ ಒನ್ ರಾಜ್ಯ ಎಂದೇ ಬಿಂಬಿಸಿದ್ದರು. ಆದರೀಗ ಬಿಜೆಪಿ ನಾಯಕರ ಬಾಯಲ್ಲಿ ಗುಜರಾತ್ ಮಾಡೆಲ್ ಪ್ರಸ್ತಾಪವಾಗದೇ ಬಹಳ ತಿಂಗಳುಗಳೇ ಉರುಳಿದೆ. ಸದ್ಯ ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಸುಗಮಗೊಳಿಸಲು ಕೈಗೊಂಡ ಕಠಿಣ ಹೆಜ್ಜೆಯ ವಿಚಾರ, ಅಲ್ಲಿನ ಮೂಲಸೌಕರ್ಯ ಅಭಿವೃದ್ಧಿಯ ವಿಚಾರ ಜಪಿಸಲು ಪ್ರಾರಂಭಿಸಿದ್ದಾರೆ. ಇದೇ ವೇಳೆ ಬಿಜೆಪಿಯ ತಂತ್ರಕ್ಕೆ ಪ್ರತಿಯಾಗಿ ಕಾಂಗ್ರೆಸ್ ಹೈಕಮಾಂಡ್ ತನ್ನ ಸರ್ಕಾರ ಇರುವ ಎರಡು ರಾಜ್ಯಗಳ ಕಾರ್ಯಕ್ರಮವನ್ನು ಕರ್ನಾಟಕದಲ್ಲಿ ಪ್ರಚಾರ ಮಾಡಲು ಆರಂಭಿಸಿದೆ.
2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ‘ನ್ಯಾಯ್’ ಯೋಜನೆ ಪ್ರಸ್ತಾಪ ಮಾಡಿದ್ದರು. ನಮ್ಮ ಸರ್ಕಾರ ಬಂದರೆ ಭೂ ರಹಿತ ಕೃಷಿಕರಿಗೆ ಹಾಗೂ ಆಸರೆ ಇಲ್ಲದ ಜನರಿಗೆ ಆರ್ಥಿಕ ನೆರವು ನೀಡುವುದಾಗಿ ಘೋಷಿಸಿದ್ದರು. ಈಗ ತಮ್ಮ ಆಲೋಚನೆಯನ್ನು ತಮ್ಮ ಪಕ್ಷದ ಸರ್ಕಾರ ಇರುವ ರಾಜ್ಯಗಳಲ್ಲಿ ಜಾರಿಗೆ ತರುವ ಮೂಲಕ ‘ನ್ಯಾಯ್’ ಬಗ್ಗೆ ದೇಶದಲ್ಲಿ ಚರ್ಚೆಯಾಗುವಂತೆ ಮಾಡುವ ಉದ್ದೇಶ ಹೊಂದಿದಂತೆ ಕಾಣುತ್ತದೆ. ಕರ್ನಾಟಕದಲ್ಲಿ ನ್ಯಾಯ್ ಯೋಜನೆಬಗ್ಗೆ ಹೆಚ್ಚು ಚರ್ಚೆಯಾಗಬೇಕೆಂದು ರಾಹುಲ್ ಬಯಸಿದ್ದು, ಇದರ ಮೊಲದ ಹೆಜ್ಜೆಯಾಗಿ ಛತ್ತೀಸ್ಗಢ ಯೋಜನೆಗೆ ಪ್ರಚಾರ ನೀಡಲಾಗಿದೆ. ದೊಡ್ಡ ಸಂಖ್ಯೆಯಲ್ಲಿರುವ ಭೂ ರಹಿತ ಕೃಷಿಕರನ್ನು ನ್ಯಾಯ್ ಯೋಜನೆಯ ಆಸೆ ತೋರಿಸಿ ವಿಶ್ವಾಸಕ್ಕೆ ಪಡೆದುಕೊಂಡರೆ ಚುನಾವಣೆಯಲ್ಲಿ ಲಾಭವಾಗಬಹುದೆಂಬ ಲೆಕ್ಕಾಚಾರವೂ ಅಡಗಿದೆ.
ವಾಸ್ತವವಾಗಿ ಕರ್ನಾಟಕದಲ್ಲಿ ಕೃಷಿಕರಿಗೆ ನೆರವು ನೀಡುವ ಯೋಜನೆ ಜಾರಿಯಿದೆ. ಕೃಷಿ ಕೂಲಿಕಾರರಿಗೆ ಇಲ್ಲ. ಕೇಂದ್ರದ ಕೃಷಿ ಸಮ್ಮಾನ್ ಯೋಜನೆಯಡಿ ಕೇಂದ್ರದಿಂದ ವಾರ್ಷಿಕ 6 ಸಾವಿರ ರೂ. ಹಾಗೂ ರಾಜ್ಯ ಸರ್ಕಾರ 4 ಸಾವಿರ ರೂ. ನೀಡುತ್ತಿದೆ. ಇದೀಗ ಕಾಂಗ್ರೆಸ್ ದೊಡ್ಡ ಸಂಖ್ಯೆಯಲ್ಲಿರುವ ಭೂ ರಹಿತ ಕೃಷಿಕರನ್ನು ಗಮನದಲ್ಲಿಟ್ಟುಕೊಂಡು ನ್ಯಾಯ್ ಯೋಜನೆ ಪ್ರಸ್ತಾಪ ಮಾಡುತ್ತಿದೆ. ಛತ್ತೀಸ್ಗಢದಲ್ಲಿ ಭೂ ರಹಿತ ಕೃಷಿಕರಿಗೆ ಇನ್ನು ಮುಂದೆ ವಾರ್ಷಿಕ 7 ಸಾವಿರ ರೂ. ನೆರವು ನೀಡಲಾಗುತ್ತದೆ. ಛತ್ತೀಸ್ಗಢದಲ್ಲಿ ಜಾರಿ ಮಾಡಿದ ಈ ಯೋಜನೆಯನ್ನು ಕರ್ನಾಟಕದಲ್ಲೂ ಜಾರಿ ಮಾಡಲು ಅವಕಾಶ ಕೊಡಿ ಎಂದು ಹಳ್ಳಿಹಳ್ಳಿಗಳಲ್ಲಿ ಕಾಂಗ್ರೆಸ್ ಪ್ರಚಾರ ಮಾಡುವ ತಯಾರಿಯಲ್ಲಿದೆ. ಹಾಗೆಯೇ, ರಾಜ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ಬರುವ ರಾಹುಲ್ ಗಾಂಧಿ ಈ ಸಂಗತಿಯನ್ನೇ ಹೆಚ್ಚು ಪ್ರಸ್ತಾಪ ಮಾಡುವ ಉದ್ದೇಶವನ್ನೂ ಇಟ್ಟುಕೊಂಡಿದ್ದಾರೆ. ಕಾಂಗ್ರೆಸ್, ಬಿಜೆಪಿ ಹೊರತಾಗಿ ಆಮ್ದಿ್ಮ ಪಕ್ಷವು ದೆಹಲಿ ಮಾಡೆಲ್ ಪ್ರಚಾರ ಮಾಡಲು ಶುರುಮಾಡಿದೆ. ಬೆಂಗಳೂರಿನ ವಿವಿಧ ಗಲ್ಲಿಗಳಲ್ಲಿ ಸಭೆ ನಡೆಸಿ, ದೆಹಲಿಯ ಶಾಲೆ, ಆಸ್ಪತ್ರೆಯಲ್ಲಾದ ಬದಲಾವಣೆ ಇಲ್ಲೂ ಆಗಬೇಕಾ ದರೆ ಒಮ್ಮೆ ಅವಕಾಶ ಕೊಡಿ ಎಂದು ಗಲ್ಲಿ ಸಭೆಗಳಲ್ಲಿ ಪ್ರಚಾರ ಮಾಡುತ್ತಿದೆ.
ಕರ್ನಾಟಕವೇ ಬೆಸ್ಟ್: ದೆಹಲಿ, ರಾಜಸ್ಥಾನ, ಛತ್ತೀಸ್ಗಢ, ಉತ್ತರ ಪ್ರದೇಶಕ್ಕೆ ಹೋಲಿಸಿದರೆ ಕರ್ನಾಟಕವು ವಿವಿಧ ಕ್ಷೇತ್ರಗಳಲ್ಲಿ ಇಂದಿಗೂ ತನ್ನ ಮುಂಚೂಣಿತನ ಕಾಯ್ದುಕೊಂಡಿದೆ. ಜಿಎಸ್ಟಿ ಸಂಗ್ರಹದಲ್ಲಿ ರಾಜ್ಯಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ, ಸ್ಟಾರ್ಟ್ಅಪ್ನಲ್ಲೀ ಈಗಲೇ ಬೆಂಗಳೂರೇ ಬೆಸ್ಟ್, ಇದೀಗ ವಿದೇಶ ನೇರ ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕವೇ ನಂಬರ್ ಒನ್ ಎನಿಸಿಕೊಂಡಿದೆ.