

ಬೆಂಗಳೂರು: ಬಿಎಂಟಿಸಿ ಬಸ್‌ಗಳಲ್ಲಿ ಪ್ರಯಾಣಿಕರ ಸೋಗಿನಲ್ಲಿ ಮೊಬೈಲ್ ಕಳ್ಳತನ ಮಾಡುತ್ತಿದ್ದ ಆಂಧ್ರಪ್ರದೇಶ ಮೂಲದ ಮೂವರನ್ನು ಉಪ್ಪಾರಪೇಟೆ ಪೊಲೀಸರು ಬಂಧಿಸಿದ್ದಾರೆ.
ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ನಾಗನೂರಿ ಕುಮಾರ್ (23), ಅನಂತಪುರ ಜಿಲ್ಲೆಯ ಪರಶುರಾಮ್ ಅಲಿಯಾಸ್ ಅಭಿ (21), ಮತ್ತೊಬ್ಬ ಅಪ್ರಾಪ್ತ ಬಂಧಿತರು. ಆರೋಪಿಗಳಿಂದ 22.40 ಲಕ್ಷ ರೂ. ಮೌಲ್ಯದ 176 ಮೊಬೈಲ್, 1 ಕಾರು ವಶಕ್ಕೆ ಪಡೆಯಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ತಿಳಿಸಿದ್ದಾರೆ.
ಮೊಬೈಲ್ ಕಳ್ಳತನವನ್ನೇ ವೃತ್ತಿ ಮಾಡಿಕೊಂಡಿದ್ದ ಆರೋಪಿಗಳು, ಕಾರಿನಲ್ಲಿ ಆಂಧ್ರಪ್ರದೇಶದಿಂದ ಬೆಂಗಳೂರಿನ ಹೊರವಲಯಕ್ಕೆ ಬಂದು ರಸ್ತೆಬದಿ ನಿಲ್ಲಿಸುತ್ತಿದ್ದರು. ಅಲ್ಲಿಂದ ಬಿಎಂಟಿಸಿ ಬಸ್‌ನಲ್ಲಿ ಮೆಜೆಸ್ಟಿಕ್‌ಗೆ ಬಂದು ನೂಕುನುಗ್ಗಲು ಇರುವ ಬಸ್‌ಗಳಿಗೆ ಪ್ರಯಾಣಿಕರ ಸೋಗಿನಲ್ಲಿ ಏರಿ ಜನರ ಗಮನಬೇರೆಡೆ ಸೆಳೆದು ಜೇಬಿನಿಂದ ಮೊಬೈಲ್ ಕಳವು ಮಾಡುತ್ತಿದ್ದರು.
ಸಂಜೆವರೆಗೂ ಮೊಬೈಲ್‌ಗಳನ್ನು ಕದ್ದು ವಾಪಸ್ ಕಾರಿನಲ್ಲಿ ಆಂಧ್ರಪ್ರದೇಶಕ್ಕೆ ಹೋಗಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದರು. ಇತ್ತೀಚೆಗೆ ಶಿವಮೊಗ್ಗದಿಂದ ಬಂದಿದ್ದ ವ್ಯಕ್ತಿಯೊಬ್ಬರು ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಮೊಬೈಲ್ ಕಳೆದುಕೊಂಡಿದ್ದರು. ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ವಿವರಿಸಿದ್ದಾರೆ.