ಅಗ್ನಿಶಾಮಕ ಸಿಬ್ಬಂದಿಯ ಹರಸಾಹಸ ಯಾವುದಕ್ಕೆಂದು ತಿಳಿದ್ರೆ ಅಚ್ಚರಿ ಖಂಡಿತ..!

Police
Published on

ಕೊಟ್ಟಾಯಂ: ಆಕಸ್ಮಿಕವಾಗಿ ಚರಂಡಿಗೆ ಬಿದ್ದ ಮೊಬೈಲ್ ಫೋನ್ ಹೊರತೆಗೆಯಲು ಅಗ್ನಿಶಾಮಕ ಸಿಬ್ಬಂದಿ ಸುಮಾರು 3 ಗಂಟೆಗಳ ಕಾಲ ಹರಸಾಹಸಪಟ್ಟ ಘಟನೆ ಕೊಟ್ಟಾಯಂನ ನಗರದ ಕೇಂದ್ರ ಭಾಗದಲ್ಲಿ ನಡೆದಿದೆ.

ಸೋಮವಾರ ಮಧ್ಯಾಹ್ನ ಪುಲಿಮೂಡು ಜಂಕ್ಸನ್​ ಬಳಿ ಘಟನೆ ನಡೆದಿದ್ದು, ಚರಂಡಿಗೆ ಬಿದ್ದಿದ್ದ ಅಲಪುಜ್ಜ ಚಂಬಕುಲಂ ನಿವಾಸಿ ಅಲಿಸ್​ ಜೋಸ್​ ಅವರ ಮೊಬೈಲ್​ ಅನ್ನು ಯಶಸ್ವಿಯಾಗಿ ಹೊರತೆಗೆಯಲಾಗಿದೆ.

ಘಟನೆಯ ವಿವರಣೆಗೆ ಬರುವುದಾದರೆ, ಅಲಿಸ್​ ಅವರು ಸೈಡ್​ ವಾಕ್​ ಮೂಲಕ ಹಾದು ಹೋಗುತ್ತಿದ್ದರು. ಈ ವೇಳೆ ತಮ್ಮ ಬ್ಯಾಗ್​ಬಿಂದ ಛತ್ರಿಯನ್ನು ಹೊರತೆಗೆಯುವಾಗ ಆಕಸ್ಮಿಕವಾಗಿ ಮೊಬೈಲ್​ ಕೈನಿಂದ ಜಾರಿ ಚರಂಡಿಯೊಳಗೆ ಬಿದ್ದಿದೆ. ಮೊಬೈಲ್​ ಕವರ್​ ಒಳಗೆ ಹಣ ಇಟ್ಟಿದ್ದರಿಂದ ಗಾಬರಿಗೊಂಡ ಅಲಿಸ್​ ಹತ್ತಿರದ ಅಂಗಡಿಯವರ ನೆರವು ಕೇಳಿದ್ದಾರೆ.

ಚರಂಡಿ ಮೇಲೆ ಹಾಕಲಾಗಿದ್ದ ಸ್ಲ್ಯಾಬ್​ ಅನ್ನು ತೆಗೆಯಲಾಗದೇ ಸ್ಥಳೀಯರು ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಸ್ಲ್ಯಾಬ್​ ಅನ್ನು ಸುಲಭವಾಗಿ ತೆಗೆಯಬಹುದು ಅಂದುಕೊಂಡಿದ್ದರು. ಆದರೆ, ಸ್ಲ್ಯಾಬ್​ 9 ಇಂಚು ದಪ್ಪವಿದ್ದುದ್ದರಿಂದ ಸಿಬ್ಬಂದಿಯು ಸಹ ಹರಸಾಹಸ ಪಡಬೇಕಾಯಿತು.

ಕೊನೆಗೆ ಸ್ಲ್ಯಾಬ್​ ಮೇಲೆ ರಂಧ್ರವನ್ನು ಕೊರೆದು ಟಾರ್ಚ್​ಲೈಟ್​ ಮೂಲಕ ಮೊಬೈಲ್​ ಪತ್ತೆ ಹಚ್ಚಿ ಹೊರತೆಗೆದರು. ಈ ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಧನೇಶ್​, ರೋಷನ್​, ಶೆಫೀಕ್​, ಅಜಿತ್​, ರೆಜಿ ಕುರಿಯಾಕೊಸೆ ಮತ್ತು ಶೈಜು ತೊಡಗಿಕೊಂಡಿದ್ದರು. ಮೊಬೈಲ್​ ಮರಳಿ ಪಡೆದ ಅಲಿಸ್​ ಸಿಬ್ಬಂದಿಗೆ ಧನ್ಯವಾದ ತಿಳಿಸಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net