ನವಜಾತ ಶಿಶು ತುರ್ತು ಚಿಕಿತ್ಸೆಗೆ ನೂತನ ಆಂಬ್ಯುಲೆನ್ಸ್ ಸೇವೆಗೆ ಚಾಲನೆ

Health department - 2
Published on

ಬೆಂಗಳೂರು: ಶಿಶುಗಳ ಮರಣ ಪ್ರಮಾಣ ಒಂದಂಕಿಗೆ ತಗ್ಗಿಸುವ ಗುರಿ ಸಾಧನೆಗಾಗಿ ಆರೋಗ್ಯ ಇಲಾಖೆಯು ಶಿಶುಗಳಿಗೆ ತುರ್ತು ಆರೋಗ್ಯ ಸೇವೆ ಒದಗಿಸಲು ನಾಲ್ಕು ನವಜಾತ ಶಿಶುಗಳ ಆಂಬುಲೆನ್ಸ್ ಸೇವೆ ಆರಂಭಿಸಿದ್ದು, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಂಗಳವಾರ ಆರೋಗ್ಯ ಸೌಧದಲ್ಲಿ ಚಾಲನೆ ನೀಡಿದರು.

ಅವಧಿಪೂರ್ವ ಜನಿಸಿದ ಶಿಶು ಮತ್ತು ಗಂಭೀರ ಆರೋಗ್ಯ ಸಮಸ್ಯೆಗೆ ಒಳಗಾದ ಶಿಶುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಸುರಕ್ಷಿತವಾಗಿ ಆಸ್ಪತ್ರೆಗೆ ಕರೆದೊಯ್ಯಲು ವೆಂಟಿಲೇಟರ್ ಸೇರಿ ಸುಧಾರಿತ ಜೀವರಕ್ಷಕ ಸೌಲಭ್ಯ ಹೊಂದಿರುವ ಈ ಆಂಬುಲೆನ್ಸ್ ನೆರವಾಗಲಿವೆ. ಶಿಶುಗಳ ಆರೈಕೆ ಮಾಡಲು ಪರಿಣತಿ ಹೊಂದಿರುವ ಶುಶ್ರೂಷಕಿ ಇರಲಿದ್ದಾರೆ. ಸೇವೆ ಅಗತ್ಯತೆ ಸಂದರ್ಭದಲ್ಲಿ ಆರೈಕೆಯ ಅಂತರ ಕಡಿಮೆಯಾಗಲಿದೆ. ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ವಿಶೇಷ ಆರೈಕೆ ಅಗತ್ಯವಿರುವ ಶಿಶುಗಳಿಗೆ ಈ ಸೇವೆ ವರದಾನವಾಗಲಿದೆ.

ಈ ಕುರಿತು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ರಾಜ್ಯದ ನಾಲ್ಕು ವಿಭಾಗಗಳಲ್ಲಿನ ಪ್ರಮುಖ ಆಸ್ಪತ್ರೆಗಳಾದ ಬೆಂಗಳೂರಿನ ವಾಣಿವಿಲಾಸ ಆಸ್ಪತ್ರೆ, ಮೈಸೂರಿನ ಚಲುವಾಂಬ ಆಸ್ಪತ್ರೆ, ರಾಯಚೂರಿನ ವೈದ್ಯಕೀಯ ವಿಜ್ಞಾನ ಸಂಸ್ಥೆ ಮತ್ತು ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ತಲಾ ಒಂದರಂತೆ ಈ ನವಜಾತ ಆಂಬುಲೆನ್ಸ್ ವಿತರಿಸಲಾಗುತ್ತಿದ್ದು, ಮುಂಬರುವ ದಿನಗಳಲ್ಲಿ ರಾಜ್ಯಾದ್ಯಂತ ಸೇವೆ ವಿಸ್ತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

8 ಜಿಲ್ಲಾ ಸಂಚಾರಿ ನೇತ್ರ ಚಿಕಿತ್ಸಾ ಘಟಕ: ಇದೇ ವೇಳೆ ರಾಷ್ಟ್ರೀಯ ಅಂಧತ್ವ ಮತ್ತು ದೃಷ್ಟಿ ಹೀನತೆ ನಿಯಂತ್ರಣ ಕಾರ್ಯಕ್ರಮದಡಿ (ಘೆಇಆ-್ಖಐ) ಎಂಟು ಜಿಲ್ಲಾ ಸಂಚಾರಿ ನೇತ್ರ ಚಿಕಿತ್ಸಾ ಘಟಕಗಳಿಗೆ ಚಾಲನೆ ನೀಡಿದ ಸಚಿವರು, ಈ ಘಟಕಗಳು ದಾವಣಗೆರೆ, ಮಂಡ್ಯ, ಮೈಸೂರು ಸೇರಿ 8 ಜಿಲ್ಲೆಗಳಲ್ಲಿ ಆರೋಗ್ಯ ಸೇವೆಗಳು ಲಭ್ಯವಿಲ್ಲದ ಗ್ರಾಮೀಣ, ಗುಡ್ಡಗಾಡು ಪ್ರದೇಶಗಳ ಜನರಿಗೆ ಕಣ್ಣಿನ ಆರೈಕೆ ಸೇವೆಗ ಒದಗಿಸಲು ನೆರವಾಗಲಿವೆ ಎಂದರು.

ಈ ಘಟಕಗಳ ಕಾರ್ಯಚರಣೆ ಮೂಲಕ ಜಿಲ್ಲಾ ಆಸ್ಪತ್ರೆಗಳಲ್ಲಿ ಕಣ್ಣಿನ ಆರೈಕೆ ಸೇವೆ ಹೆಚ್ಚಿಸಿ, ಕಣ್ಣಿನ ಪೊರೆ, ಡಯಾಬಿಟಿಕ್ ರೆಟಿನೋಪತಿ, ಗ್ಲುಕೋಮಾ, ಕಾರ್ನಿಯ ಅಸ್ಪಷ್ಟತೆ ಮುಂತಾದ ಸಮಸ್ಯೆಗಳ ತಪಾಸಣೆ ಮತ್ತು ಶಾಲೆಗಳಿಗೆ ತೆರಳಿ ವಿದ್ಯಾರ್ಥಿಗಳ, ಶಿಕ್ಷಕರ ಕಣ್ಣಿನ ತಪಾಸಣೆ ನಡೆಸಲಾಗುವುದು. ಅಗತ್ಯ ವೈದ್ಯಕೀಯ ಉಪಕರಣಗಳನ್ನು ಒಳಗೊಂಡಿರುವ ಈ ವಾಹನದಲ್ಲಿ ಓರ್ವ ನೇತ್ರ ತಜ್ಞರು, ಪ್ಯಾರಾ ಮೆಡಿಕಲ್ ನೇತ್ರ ಸಹಾಯಕ, ಬ್ಲಾಕ್ ಹೆಲ್ತ್ ಎಜುಕೇಷನ್ ಆಫೀಸರ್ ಸ್ಟ್ಾ ನರ್ಸ್ ಇರಲಿದ್ದಾರೆ. ಪ್ರತಿ ವಾಹನ 15 ರೋಗಿಗಳನ್ನು ಸಮೀಪದ ಆರೋಗ್ಯ ಕೇಂದ್ರಗಳಿಗೆ ಕರೆದೊಯ್ಯುವ ಸಾಮರ್ಥ್ಯ ಹೊಂದಿವೆ ಎಂದು ಹೇಳಿದರು.

ಈ ವೇಳೆ ಆರೋಗ್ಯ ಇಲಾಖೆ ಆಯುಕ್ತ ಡಿ. ರಂದೀಪ್, ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕ ನವೀನ್ ಭಟ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net