ಶೃಂಗೇರಿಯಲ್ಲಿ 100 ಕೋಟಿ ರೂ.ಗೂ ಅಧಿಕ ನಷ್ಟ

6 nrp 2 rain damage
ಕಡಹಿನಬೈಲು ಗ್ರಾಪಂ ವ್ಯಾಪ್ತಿಯಲ್ಲಿ ಮಳೆಯಿಂದ ಹಾನಿಗೊಳಗಾದ ಜನತಾ ಕಾಲನಿ ಚನ್ನಮಣಿ ಸೇತುವೆಯನ್ನು ಶಾಸಕ ಟಿ.ಡಿ.ರಾಜೇಗೌಡ ವೀಕ್ಷಿಸಿದರು. ಡಾ. ಕೆ.ಪಿ.ಅಂಶುಮಂತ್, ಗೇರ್‌ಬೈಲ್ ನಟರಾಜ್, ಇ.ಸಿ.ಜೋಯಿ, ಶೈಲಾ, ಸುನೀಲ್‌ಕುಮಾರ್, ಉಪೇಂದ್ರ, ಎ.ಬಿ.ಮಂಜುನಾಥ್, ಚಂದ್ರಶೇಖರ್, ವಾಣಿ ಇತರರಿದ್ದರು.
Published on

ಎನ್.ಆರ್.ಪುರ: ಭಾರಿ ಮಳೆ, ಗಾಳಿಗೆ ಶೃಂಗೇರಿ ಕ್ಷೇತ್ರ ವ್ಯಾಪ್ತಿಯಲ್ಲಿ 100 ಕೋಟಿ ರೂಪಾಯಿಗೂ ಅಧಿಕ ನಷ್ಟ ಸಂಭವಿಸಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.
ಕಡಹಿನಬೈಲು ಗ್ರಾಪಂ ವ್ಯಾಪ್ತಿಯಲ್ಲಿ ಮಳೆಯಿಂದ ಹಾನಿಗೊಳಗಾದ ಜನತಾ ಕಾಲನಿ ಚನ್ನಮಣಿ ಸಂಪರ್ಕ ಸೇತುವೆ ಹಾಗೂ ಆಲಂದೂರು ಗ್ರಾಮದ ಸೇತುವೆಯನ್ನು ಮಂಗಳವಾರ ವೀಕ್ಷಿಸಿ ಮಾತನಾಡಿದರು.
ಆರೇಳು ವಷರ್ಗಳಿಂದ ಶೃಂಗೇರಿ, ಕೊಪ್ಪ, ಬಾಳೆಹೊನ್ನೂರು, ಮಾಗುಂಡಿ ಹಾಗೂ ಎನ್.ಆರ್.ಪುರ ಭಾಗದಲ್ಲಿ ಮಳೆಯಿಂದ ಸಾಕಷ್ಟು ಹಾನಿಯಾಗಿದೆ. ತಾಲೂಕಿನ ಕಟ್ಟಿನಮನೆ ಭಾಗದಲ್ಲಿ ಮರ ಬಿದ್ದು ಸಾವನ್ನಪ್ಪಿದವರ ಕುಟುಂಬಗಳಿಗೆ ಪರಿಹಾರ ವಿತರಿಸಲಾಗಿದೆ. ಮಳೆಯಿಂದ ಹಲವು ಸೇತುವೆಗಳು ಶಿಥಿಲಾವಸ್ಥೆಗೆ ತಲುಪಿವೆ. ರಸ್ತೆಗಳಲ್ಲಿ ಗುಂಡಿ ಬಿದ್ದಿದ್ದು ಹಲವು ಕಡೆ ಧರೆಕುಸಿತವಾಗಿದೆ ಎಂದರು.
ಹಳ್ಳಗಳು ಉಕ್ಕಿಹರಿದ ಪರಿಣಾಮ ನಾಟಿ ಮಾಡಿದ್ದ ಗದ್ದೆಗಳಿಗೆ ಮಣ್ಣು ಮತ್ತು ಮರಳು ನುಗ್ಗಿ ಬೆಳೆ ಕೊಳೆತು ಹೋಗಿದೆ. ಶಾಲಾ ಕಟ್ಟಡಗಳು, ತೂಗುಸೇತುವೆಗಳಿಗೆ ಹಾನಿ ಹಾಗೂ ಮನೆಗಳು ಕುಸಿದಿವೆ. ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಹಾಗೂ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಅತಿಯಾದ ಹಾನಿಯಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿಸಿದರು.
ಈ ಹಿಂದೆ ಮಳೆಯಿಂದ ಹಾನಿಗೊಳಗಾಗಿದ್ದ ಕೊಗ್ರೆ ಸೇತುವೆ ನಿರ್ಮಿಸಲಾಗಿದೆ. ಬೇಗಾರು ಸೇತುವೆಯನ್ನು ಪುನಃ ನಿರ್ಮಿಸಲಾಗಿದೆ. ಇಡೀ ಕ್ಷೇತ್ರದಲ್ಲಿ ಗುಂಡಿ ಬಿದ್ದಿದ್ದ ರಸ್ತೆಗಳನ್ನು ಗುಣಮಟ್ಟದ ಕಾಮಗಾರಿ ಕೈಗೊಂಡು ಮುಚ್ಚುವ ಕೆಲಸ ಮಾಡಲಾಗಿದೆ. ಬಂದ ಅನುದಾನವನ್ನು ಸಾಧ್ಯವಾದಷ್ಟು ಸಮರ್ಪಕವಾಗಿ ಬಳಸಲಾಗಿದೆ. ಪ್ರಸ್ತುತ ಹಾನಿಗೀಡಾದ ಪ್ರದೇಶಗಳಲ್ಲಿ ಕಾಮಗಾರಿ ಕೈಗೊಳ್ಳಲು ಸರ್ಕಾರ ಅನುದಾನ ಬಿಡುಗಡೆ ಮಾಡಿದ ಕೂಡಲೇ ತುರ್ತು ಕಾಮಗಾರಿಗಳನ್ನು ಆಯಾ ಭಾಗದ ಜನರೊಂದಿಗೆ, ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ಆದ್ಯತೆ ಮೇಲೆ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ಪಿ.ಅಂಶುಮಂತ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೇರ್‌ಬೈಲ್ ನಟರಾಜ್, ಕಡಹಿನಬೈಲು ಗ್ರಾಪಂ ಅಧ್ಯಕ್ಷೆ ಶೈಲಾ ಮಹೇಶ್, ಉಪಾಧ್ಯಕ್ಷ ಸುನಿಲ್‌ಕುಮಾರ್, ಸದಸ್ಯರಾದ ಎ.ಬಿ.ಮಂಜುನಾಥ್, ಚಂದ್ರಶೇಖರ್, ವಾಣಿ ನರೇಂದ್ರ, ಲಿಲ್ಲಿ ಮ್ಯಾಥ್ಯೂ, ಇ.ಸಿ.ಜೋಯಿ, ಉಪೇಂದ್ರ, ನರೇಂದ್ರ, ಸುಂದರೇಶ್, ಸದಾಶಿವ, ಎಸ್.ಡಿ.ರಾಜೇಂದ್ರ, ಮನು, ರವಿಶಂಕರ್, ಎ.ಬಿ.ಪ್ರಶಾಂತ್, ನಂದೀಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net