ಮಳೆಗಾಲದ ಅನಾಹುತ ತಡೆಗೆ ಸಿದ್ಧತೆ

mdg nayana motama
ಮೂಡಿಗೆರೆ ತಾಲೂಕಿನ ಜಿ.ಹೊಸಹಳ್ಳಿ ಲಕ್ಷ್ಮಮ್ಮ ಎಂಬುವರ ಕುಸಿದ ಮನೆಯನ್ನು ಶಾಸಕಿ ನಯನಾ ಮೋಟಮ್ಮ ವೀಕ್ಷಿಸಿದರು. ಜಿ.ಎಸ್.ದಿನೇಶ್, ದೀಪಕ್, ದಯಾವತಿ, ಡಿ.ಟಿ.ಮಾಲಾ, ಚಂದ್ರಶೇಖರ್, ಸಚಿನ್ ಇತರರಿದ್ದರು.
Published on

ಮೂಡಿಗೆರೆ: ಮಳೆಯಿಂದ ಮನೆ, ಜಾನುವಾರು ಕೊಟ್ಟಿಗೆ ಕುಸಿತ, ಜಮೀನು ಹಾನಿಯಾದ ಗೋಣಿಬೀಡು, ಬಣಕಲ್, ಅಂಬಳೆ, ಆವುತಿ, ಆಲ್ದೂರು ಮತ್ತು ಕಳಸ ತಾಲೂಕಿನಲ್ಲಿ ಶಾಸಕಿ ನಯನಾ ಮೋಟಮ್ಮ ಬುಧವಾರ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು.
ಬಂಕೇನಹಳ್ಳಿ ಗ್ರಾಮದ ಪ್ರೇಮಾ, ಹೊಸಕೆರೆ ಗ್ರಾಮದ ಸುಮಿತ್ರಾಚಾರ್, ಕಣಚೂರು ಗ್ರಾಮದ ಸುವಾಸಿನಿ, ಜಿ.ಹೊಸಹಳ್ಳಿ ಲಕ್ಷ್ಮಮ್ಮ ಎಂಬುವರ ಮನೆಗಳು ಕುಸಿದಿರುವುದನ್ನು ವೀಕ್ಷಿಸಿದರು. ಮೂಡಿಗೆರೆ ಮತ್ತು ಕಳಸ ತಾಲೂಕಿನಲ್ಲಿ ಮಳೆಯಿಂದ ಹಾನಿಗೊಳಗಾದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿದರು.
ನಂತರ ನಯನಾ ಮೋಟಮ್ಮ ಸುದ್ದಿಗಾರರೊಂದಿಗೆ ಮಾತನಾಡಿ, ಬೇಸಿಗೆಯಲ್ಲಿ ಹಿಂದೆಂದೂ ಕಾಣದಂಥ ರಣಬಿಸಿಲಿನಿಂದ ಜನ ಕಂಗೆಟ್ಟಿದ್ದರು. ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿತ್ತು. ನದಿ, ಕೆರೆ, ಬಾವಿಗಳೆಲ್ಲವೂ ಬತ್ತಿದ್ದವು. ಕುಡಿಯುವ ನೀರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳುವಂತೆ ಚುನಾವಣೆ ಘೋಷಣೆಗಿಂತ ಮೊದಲೇ ಅಧಿಕಾರಿಗಳ ಸಭೆ ನಡೆಸಿ ಸೂಚನೆ ನೀಡಲಾಗಿತ್ತು. ಅದರಂತೆ ಅಧಿಕಾರಿಗಳು ನಡೆದುಕೊಂಡಿದ್ದರಿಂದ ಅಧಿಕಾರಿಗಳು ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಈಗ ಎಲ್ಲೆಡೆ ಮಳೆಯಾಗಿದ್ದರಿಂದ ನದಿ, ಕೆರೆ, ಬಾವಿಗಳಲ್ಲಿ ನೀರು ಹಿಂದಿನಂತೆ ಇದೆ ಎಂದು ತಿಳಿಸಿದರು.
ಕೆಲ ದಿನಗಳಲ್ಲಿ ಮಳೆಗಾಲ ಆರಂಭವಾಗಲಿದೆ. ಮಳೆಯಿಂದ ಸಂಭವಿಸುವ ಹಾನಿ ಮಾಹಿತಿ ಪಡೆಯಲು ಟಾಸ್ಕ್‌ಫೋರ್ಸ್ ರಚಿಸಲಾಗಿದೆ. ಚುನಾವಣಾ ನೀತಿ ಸಂಹಿತೆ ಮುಗಿದ ಬಳಿಕ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅತಿವೃಷ್ಟಿ ಪರಿಸ್ಥಿತಿ ನಿಭಾಯಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಈಗಾಗಲೆ ಸುರಿದ ಮಳೆಯಿಂದ ಆದ ಹಾನಿ ಮತ್ತು ಮುಂದೆ ಹಾನಿ ಸಂಭವಿಸಿದರೆ ವಾಸ್ತವ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. 2020ರಿಂದ ನಿರಂತರ ಅತಿವೃಷ್ಟಿ ಸಂಭವಿಸಿದ್ದು ಅಪಾರ ಆಸ್ತಿಪಾಸ್ತಿ ಹಾನಿಗೊಳಗಾಗಿದೆ. ಈ ಬಾರಿ ಅಂಥ ಹಾನಿ ಸಂಭವಿಸದಂತೆ ಕಟ್ಟೆಚ್ಚರ ವಹಿಸಲಾಗುವುದು. ಅಲ್ಲಲ್ಲಿ ಅಧಿಕಾರಿಗಳ ತಂಡ ಸಜ್ಜುಗೊಳಿಸಲಾಗುವುದು. ಸೇರಿದಂತೆ ತಾಲೂಕಿನಾದ್ಯಂತ ವಿದ್ಯುತ್ ಸಮಸ್ಯೆ ಮಿತಿಮೀರಿದೆ. ಮಳೆಗಾಲದಲ್ಲಿ ವಿದ್ಯುತ್ ಸಮಸ್ಯೆ ಉಂಟಾಗದಂತೆ ಎಚ್ಚರ ವಹಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮೆಸ್ಕಾಂನಿಂದ ಹೆಚ್ಚುವರಿ ಸಿಬ್ಬಂದಿ ನಿಯೋಜಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಮಾಹಿತಿ ನೀಡಿದರು.
ಗೋಣಿಬೀಡು ಗ್ರಾಪಂ ಅಧ್ಯಕ್ಷ ಜಿ.ಎಸ್.ದಿನೇಶ್, ಸದಸ್ಯ ದೀಪಕ್, ತಾಪಂ ಇಒ ದಯಾವತಿ, ಕಂದಾಯ ಅಧಿಕಾರಿಗಳಾದ ಡಿ.ಟಿ.ಮಾಲಾ, ಚಂದ್ರಶೇಖರ್, ಮಂಜುನಾಥ್, ಸಚಿನ್, ಅನಿಸಾ ಬಾನು, ಪಿಡಿಒ ಸಿಂಚನಾ, ಸುಬ್ರಹ್ಮಣ್ಯ, ಎ.ಜಿ.ಸುಬ್ರಾಯಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net