

ಕಡೂರು: ಬಡವರ ಪರವಾಗಿರುವ ಗ್ಯಾರಂಟಿ ಯೋಜನೆಗಳನ್ನು ವಿರೋಧಿಸುವ ಹೊಟ್ಟೆ ತುಂಬಿದ ಜನಗಳಿಗೆ ಲಾನುಭವಿಗಳೇ ಉತ್ತರ ನೀಡಬೇಕು ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.
ಯಗಟಿ ಗ್ರಾಮದಲ್ಲಿ ಬುಧವಾರ ಯಗಟಿ ಹೋಬಳಿ ಮಟ್ಟದ ಗ್ಯಾರಂಟಿ ಯೋಜನೆಗಳ ಜನಸ್ಪಂದನಾ ಕಾರ್ಯಕ್ರಮದಲ್ಲಿ ಮಾತನಾಡಿ, ಗ್ಯಾರಂಟಿ ಯೋಜನೆಗಳ ಸಮಸ್ಯೆಗಳನ್ನು ಬಗೆಹರಿಸಲು ಜನಸ್ಪಂದನಾದಂಥ ಸೂಕ್ತ ವೇದಿಕೆ ಕಲ್ಪಿಸಿಕೊಡಲಾಗಿದೆ. ಐದು ಗ್ಯಾರಂಟಿ ಯೋಜನೆಗಳನ್ನು ಪರಿಣಾಮಕಾರಿ ಅನುಷ್ಠಾನಗೊಳಿಸಿರುವುದು ರಾಜ್ಯದ ಬಡ ಜನತೆ ಆರ್ಥಿಕವಾಗಿ ಅಭಿವೃದ್ಧಿಗೊಳ್ಳಲು ಸಹಕಾರಿಯಾಗಿದೆ ಎಂದರು.
ವಿಪಕ್ಷಗಳ ಟೀಕೆಗೆ ಎದೆಗುಂದದೆ ಸಮರ್ಥವಾಗಿ 9 ತಿಂಗಳಿನಿಂದ ಉತ್ತಮ ಆಡಳಿತ ನೀಡುತ್ತಿದ್ದು, ಜತೆಗೆ ಅಭಿವೃದ್ಧಿ ವಿಚಾರದಲ್ಲಿ ಯಾವುದಕ್ಕೂ ಹಿಂದೆ ಬಿದ್ದಿಲ್ಲ. ಕ್ಷೇತ್ರದಲ್ಲಿ ಬಡ ಜನತೆಯ ಕಷ್ಟಗಳು ಹಾಗೂ ಅವರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿರುವುದು ಆತ್ಮ ತೃಪ್ತಿ ತಂದಿದೆ. ಕ್ಷೇತ್ರದಲ್ಲಿನ ದೇವಾಲಯಗಳ ಅಭಿವೃದ್ಧಿಗಾಗಿ 6 ಕೋಟಿ ರೂ. ಅನುದಾನ ಹಂಚಿಕೆ ಮಾಡಲಾಗಿದೆ ಎಂದು ತಿಳಿಸಿದರು.
ಬಹುತೇಕ ಯೋಜನೆಗಳಿಗೆ ಮೊದಲು ಅರ್ಜಿ ಹಾಕಿರುವವರೇ ಶ್ರೀಮಂತರು. ಆದರೆ ಯೋಜನೆಗಳನ್ನು ವಿರೋಧಿಸುತ್ತಿದ್ದಾರೆ. ಯೋಜನೆಗಳು ನಮಗೆ ಬೇಡ ಅಂತ ಹೇಳಿದರೆ ಬಡ ಕುಟುಂಬದವರಿಗೆ ಅನುಕೂಲವಾಗುತ್ತದೆ. ರಾಜ್ಯ ಸರ್ಕಾರ ಎಲ್ಲರಿಗೂ ಸಮಾನತೆ ಕಲ್ಪಿಸಿ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಯಾವುದಕ್ಕೂ ತಾರತಮ್ಯ ಮಾಡಲಿಲ್ಲ. ಗ್ಯಾರಂಟಿ ಯೋಜನೆಗಳು ಯಾವುದೇ ಕಾರಣಕ್ಕೂ ಸ್ಥಗಿತಗೊಳ್ಳುವುದಿಲ್ಲ. ರಾಜ್ಯದಲ್ಲಿ ಆರ್ಥಿಕ ಸ್ಥಿತಿಗತಿಗಳನ್ನು ಸಮತೋಲನವಾಗಿ ಕಾಪಾಡಿಕೊಂಡು ನಿರಂತರವಾಗಿ ಯೋಜನೆಗಳು ಜಾರಿಯಲ್ಲಿರುತ್ತವೆ ಎಂದರು.
ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿರುವ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಕಾರ್ಮಿಕ ಇಲಾಖೆಯಿಂದ ಸಾಂಕೇತಿಕವಾಗಿ ಲ್ಯಾಪ್‌ಟ್ಯಾಪ್ ವಿತರಿಸಲಾಯಿತು. ಯೋಜನೆಗಳ ಕುರಿತು ಮಹಿಳಾ ಲಾನುಭವಿಗಳು ಅನಿಸಿಕೆ ವ್ಯಕ್ತಪಡಿಸಿದರು. ತಾಪಂ ಇಒ ಸಿ.ಆರ್.ಪ್ರವೀಣ್, ಸಿಡಿಪಿಒ ಶಿವಪ್ರಕಾಶ್, ಟಿಎಂಒ ಡಾ. ರವಿಕುಮಾರ್, ಶಶಿಕಲಾ, ಶಿಲ್ಪಾ, ಯಗಟಿ ಗ್ರಾಪಂ ಅಧ್ಯಕ್ಷೆ ಕಲಾವತಿ, ವಿವಿಧ ಗ್ರಾಪಂಗಳ ಅಧ್ಯಕ್ಷರಾದ ಸುಮಾ ಮಹೇಶ್, ತಮ್ಮಯ್ಯ, ಸ್ನೇಹಾ, ತಿಮ್ಮಪ್ಪ, ಕಮಲಮ್ಮ, ಶರಾವತಿ ಲಿಂಗರಾಜು, ಹರೀಶ್, ಕುಮಾರಪ್ಪ, ಎಸ್.ಡಿ. ಪ್ರೇಮಾವತಿ, ರತ್ನಮ್ಮ, ಪಿಡಿಒಗಳಾದ ನವೀನ್, ರಾಜು, ಸಿ.ಎಂ. ದೊಡ್ಡವೀರಪ್ಪ, ಚಂದ್ರುಶೇಖರ್, ವಸಂತಕುಮಾರ್, ಸುಬ್ಬಲಕ್ಷ್ಮೀ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.