ಕನ್ನಡ ಸಾಹಿತ್ಯ ಪರಿಷತ್ ಅಭಿವೃದ್ಧಿಗೆ ಸಹಕಾರ

tke kasapa
ತರೀಕೆರೆ ತಾಪಂ ಸಭಾಂಗಣದಲ್ಲಿ ಏರ್ಪಡಿಸಿದ್ದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ನವೀನ್ ಪೆನ್ನಯ್ಯ ನೂತನ ಅಧ್ಯಕ್ಷ ರವಿ ದಳವಾಯಿಗೆ ಅಧಿಕಾರ ಹಸ್ತಾಂತರಿಸಿದರು. ಜಿ.ಎಚ್.ಶ್ರೀನಿವಾಸ್, ಸೂರಿ ಶ್ರೀನಿವಾಸ್, ಟಿ.ಎಸ್.ಗಣೇಶ್, ಎಚ್.ಪ್ರಶಾಂತ್ ಇತರರಿದ್ದರು.
Published on

ತರೀಕೆರೆ: ಚಿಕ್ಕಮಗಳೂರಿನಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸುವಂತೆ ಸಂಬಂಧಪಟ್ಟವರಿಗೆ ಮನವಿ ಮಾಡಲಾಗಿದೆ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಾಹಿತ್ಯ ಪರಿಷತ್ ಭಾಷೆ ಬೆಳವಣಿಗೆ ಜತೆಗೆ ಕನ್ನಡವನ್ನು ಜಾಗೃತಗೊಳಿಸುವ ಕೆಲಸ ಮಾಡುತ್ತಿದೆ. ಯುವಪೀಳಿಗೆ ಅನ್ಯ ಭಾಷೆಯ ವ್ಯಾಮೋಹಕ್ಕೆ ಬಲಿಯಾಗುತ್ತಿದ್ದು ಹೋಬಳಿ ಮಟ್ಟದಿಂದಲೇ ಕನ್ನಡ ಸಾಹಿತ್ಯ ಪರಿಷತ್‌ನ ಕಾರ್ಯ ಚಟುವಟಿಕೆ ಆರಂಭವಾಗಬೇಕು. ಈ ದಿಸೆಯಲ್ಲಿ ಕಸಾಪಗೆ ಬೇಕಾದ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.
ತಾಪಂ ಇಒ ಟಿ.ಎಸ್.ಗಣೇಶ್ ಮಾತನಾಡಿ, ಎಂತಹ ಸಂದರ್ಭದಲ್ಲೂ ಕನ್ನಡಿಗರಲ್ಲಿ ಭಾಷಾಭಿಮಾನ ಕ್ಷೀಣಿಸಬಾರದು. ಮುಂದಿನ ದಿನಗಳಲ್ಲಿ ಗ್ರಾಪಂ ವ್ಯಾಪ್ತಿಗಳಲ್ಲಿ ನಿರ್ಮಿಸಲು ಉದ್ದೇಶಿಸಿರುವ ಬಡಾವಣೆಗಳಲ್ಲಿ ಸಮುದಾಯಕ್ಕೆ ನಿಗದಿಪಡಿಸುವ ನಿವೇಶನಗಳನ್ನು ಕನ್ನಡ ಸಾಹಿತ್ಯ ಪರಿಷತ್‌ನ ಚಟುವಟಿಕೆಗೆ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಮಾತನಾಡಿ, ಭಾಷೆ ಬೆಳೆದರೆ ಸಂಸ್ಕೃತಿ ತಾನಾಗಿಯೇ ಉಳಿಯಲಿದೆ. ಪ್ರತಿ ಗ್ರಾಪಂಗಳಲ್ಲೂ ಕನ್ನಡ ಕುಟೀರ ನಿರ್ಮಾಣವಾಗಬೇಕು ಎಂದು ಹೇಳಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನಿಕಟ ಪೂರ್ವ ಅಧ್ಯಕ್ಷ ನವೀನ್ ಪೆನ್ನಯ್ಯ ಮಾತನಾಡಿ, ಪಟ್ಟಣದ ದಾನಿ ಶ್ಯಾಮಲ ಮಂಜುನಾಥ್ ಉದಾರತೆ ತೋರಿ ಕನ್ನಡ ಸಾಹಿತ್ಯ ಪರಿಷತ್‌ಗೆ ನಿವೇಶನ ನೀಡಿದ್ದಾರೆ. ಅಲ್ಲಿ ತ್ವರಿತವಾಗಿ ಕಟ್ಟಡ ನಿರ್ಮಿಸಬೇಕಾಗಿದ್ದು ಎಲ್ಲರೂ ಸಮನ್ವಯತೆಯಿಂದ ಈ ಕಾರ್ಯಕ್ಕೆ ಕೈಜೋಡಿಸಬೇಕಿದೆ ಎಂದು ಹೇಳಿದರು.
ನೂತನ ತಾಲೂಕು ಅಧ್ಯಕ್ಷ ರವಿ ದಳವಾಯಿ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ ಬೆಳವಣಿಗೆಗೆ ಅವಿರತವಾಗಿ ಶ್ರಮಿಸಲಾಗುವುದು. ಕ್ರಿಯಾಶೀಲತೆಯಿಂದ ಕಾರ್ಯಕ್ರಮ ರೂಪಿಸಿ ಸಾಹಿತ್ಯಿಕ ಚಟುವಟಿಕೆ ನಿರಂತರಗೊಳಿಸಲಾಗುವುದು ಎಂದರು.
ಪುರಸಭೆ ಮುಖ್ಯಾಧಿಕಾರಿ ಎಚ್.ಪ್ರಶಾಂತ್, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಸಂಚಾಲಕ ಇಮ್ರಾನ್ ಅಹಮದ್ ಬೇಗ್, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಸುನಿತಾ, ಗಾಯಕ ಬಿ.ಎಸ್.ಭಗವಾನ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net