ಅಡಕೆ ಬೆಳೆಯ ಭವಿಷ್ಯ ಆತಂಕದಲ್ಲಿ

araga road work
ಕೋಣಂದೂರಿನ ಮಕ್ಕಿಬೈಲಿನಲ್ಲಿ 35 ಲಕ್ಷ ರೂ. ರಸ್ತೆ ಕಾಮಗಾರಿಗೆ ಆರಗ ಜ್ಞಾನೇಂದ್ರ ಶಂಕುಸ್ಥಾಪನೆ ನೆರವೇರಿಸಿದರು. ಅನ್ನಪೂರ್ಣ ವಾಸುದೇವ್, ಅಪೂರ್ವಾ ಶರಧಿ, ಸುಧಾಕರ್ ಇದ್ದರು.
Published on

ತೀರ್ಥಹಳ್ಳಿ: ಅಡಕೆ ಬೆಳೆಗೆ ಉತ್ತಮ ಧಾರಣೆ ಬಂದಿರುವುದೇ ಪಾರಂಪರಿಕ ಬೆಳೆಗಾರರಿಗೆ ಶಾಪವಾಗಿದೆಯೇನೋ ಎಂಬ ಭಾವನೆ ಮೂಡಿದೆ. ಬಯಲುಸೀಮೆ ಭಾಗದಲ್ಲಿ ಅಡಕೆ ಬೆಳೆಯುವ ಪ್ರದೇಶ ವಿಸ್ತಾರಗೊಳ್ಳುತ್ತಿರುವುದರಿಂದ ಅಡಕೆಗೆ ಹೆಚ್ಚು ಭವಿಷ್ಯ ಇದೆ ಅನ್ನಿಸುತ್ತಿಲ್ಲ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ಕೋಣಂದೂರಿನ ಮಕ್ಕಿಬೈಲಿನಲ್ಲಿ 35 ಲಕ್ಷ ರೂ. ಮತ್ತು ಬನಶಂಕರಿ ದೇವಸ್ಥಾನದ 7 ಲಕ್ಷ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಮಂಗಳವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ಬಯಲುಸೀಮೆಯಲ್ಲಿ ಈ ಬೆಳೆ ವ್ಯಾಪಿಸುತ್ತಿರುವುದನ್ನು ಗಮನಿಸಿದರೆ ಭಯವಾಗುತ್ತಿದ್ದು ಈ ಬೆಳೆಯನ್ನೇ ಅವಲಂಬಿಸಿರುವ ಈ ಭಾಗದ ಪಾರಂಪರಿಕ ಬೆಳೆಗಾರರು ಆತಂಕಪಡುವಂತಾಗಿದೆ ಎಂದರು.
ಮಲೆನಾಡ ರೈತರಿಗೆ ಅಡಕೆ ಬೆಳೆ ಅನಿವಾರ್ಯ. ಒಂದೆರಡು ಎಕರೆ ಇದ್ದವನೂ ಶ್ರೀಮಂತ ಬೆಳೆಗಾರ ಎಂಬ ಭಾವನೆ ಇದೆ. ಆದರೆ ಬಯಲುನಾಡಿನಲ್ಲಿ ಒಬ್ಬೊಬ್ಬ ರೈತ ನೂರಾರು ಎಕರೆ ಪ್ರದೇಶದಲ್ಲಿ ಅಡಕೆ ಬೆಳೆಯುತ್ತಿದ್ದು ಈ ಮಟ್ಟದಲ್ಲಿ ಬೆಳೆಯುವ ಅಡಕೆಯನ್ನು ತಿನ್ನುವವರು ಯಾರು ಎಂಬ ಪ್ರಶ್ನೆಯೂ ಮೂಡುತ್ತಿದೆ. ಅಡಕೆ ಬೆಳೆ ಭವಿಷ್ಯದ ಬಗ್ಗೆ ಆತಂಕ ಶುರುವಾಗಿದೆ ಎಂದು ಹೇಳಿದರು.
ಕಾನೂನು ಬಾಹಿರವಾಗಿ ದೇಶಕ್ಕೆ ಬರುತ್ತಿರುವ ಅಡಕೆಯನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಈಗಾಗಲೇ ಕ್ರಮ ಕೈಗೊಂಡಿದ್ದು ಈ ಬಗ್ಗೆ ಅಡಕೆ ಬೆಳೆಗಾರರು ಆತಂಕಪಡುವ ಅಗತ್ಯವಿಲ್ಲ. ಧಾರಣೆ ಸ್ವಲ್ಪಮಟ್ಟಿಗೆ ಕುಸಿದಿದೆಯಾದರೂ ಬಹಳ ಕಡಿಮೆಯಾಗಿಲ್ಲ ಎಂಬುದನ್ನು ನಾವು ಗಮನಿಸಬೇಕಿದೆ ಎಂದರು.
ರಾಜ್ಯದಲ್ಲಿ ನಮ್ಮ ಸರ್ಕಾರದ ಆಡಳಿತಾವಧಿಯಲ್ಲಿ ಕ್ಷೇತ್ರಕ್ಕೆ 3,200 ಕೋಟಿ ರೂ. ಅನುದಾನ ಹರಿದು ಬಂದಿತ್ತು. ಅಭಿವೃದ್ಧಿ ಕಾಮಗಾರಿಗಳು ಸಾಕಾರಗೊಂಡಾಗ ಮಾತ್ರ ಸಂತೋಷವಾಗುತ್ತದೆ. ಆದರೆ ಈಗಿನ ಸರ್ಕಾರದಲ್ಲಿ ಕಳೆದ 9 ತಿಂಗಳಿಂದ ಅನುದಾನವೇ ಬರುತ್ತಿಲ್ಲ. ಮತದಾರರ ನಿರೀಕ್ಷೆಗೆ ಅನುಗುಣವಾಗಿ ಮುಂದೆ ಹೇಗೆ ಕೆಲಸ ಮಾಡಬೇಕೆಂಬುದೇ ತಿಳಿಯುತ್ತಿಲ್ಲ ಎಂದು ಹೇಳಿದರು.
ಕೋಣಂದೂರು ಗ್ರಾಪಂ ಅಧ್ಯಕ್ಷೆ ಅನ್ನಪೂರ್ಣ ವಾಸುದೇವ್, ಜಿಪಂ ಮಾಜಿ ಸದಸ್ಯೆ ಅಪೂರ್ವ ಶರಧಿ, ಸುಧಾಕರ್, ಪೂರ್ಣೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net