ನಟ ಮಿಥುನ್ ಚಕ್ರವರ್ತಿ ಅವರ ಮೊದಲ ಪತ್ನಿ ಹೆಲೆನಾ ಲ್ಯೂಕ್ ನಿಧನ | Helena Luke

Untitled design - 2024-11-04T154624.508
Published on

ಮುಂಬೈ: ಇತ್ತೀಚೆಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನರಾದ ಬಾಲಿವುಡ್ ನಟ ಮಿಥುನ್ ಚಕ್ರವರ್ತಿ ಅವರ ಮೊದಲ ಪತ್ನಿ ಹೆಲೆನಾ ಲ್ಯೂಕ್(68)(Helena Luke) ಇಹಲೋಕ ತ್ಯಜಿಸಿದ್ದಾರೆ. ಹೆಲೆನಾ ಲ್ಯೂಕ್​​​​ ಭಾನುವಾರ (ನವೆಂಬರ್ 3) ಮೃತಪಟ್ಟಿರುವುದಾಗಿ ಖ್ಯಾತ ನೃತ್ಯಗಾರ್ತಿ ಮತ್ತು ನಟಿ ಕಲ್ಪನಾ ಅಯ್ಯರ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಹೆಲೆನಾ ಅಮೆರಿಕದಲ್ಲಿ ವಾಸಿಸುತ್ತಿದ್ದರು. ಕಳೆದ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಲಿಲ್ಲ ಎಂದು ಹೇಳಲಾಗುತ್ತಿದೆ. ಅವರ ಕೊನೆಯ ಕ್ಷಣಗಳಲ್ಲಿ ಅವರ ಜತೆಗಿದ್ದವರು ಯಾರು, ಅವರನ್ನು ನೋಡಿಕೊಳ್ಳುತ್ತಿದ್ದವರು ಯಾರು ಎಂಬ ಬಗ್ಗೆ ಮಾಹಿತಿ ಇಲ್ಲ.

ಹೆಲೆನಾ ಲ್ಯೂಕ್ ಮಾಡೆಲ್ ಮತ್ತು ನಟಿ. ಮಿಥುನ್ ಚಕ್ರವರ್ತಿ ಅವರು ನಟಿ ಸಾರಿಕಾ ಅವರೊಂದಿಗೆ ಬೇರ್ಪಟ್ಟ ಬಳಿಕ ಹೆಲೆನಾ ಲ್ಯೂಕ್ ಅವರ ಪರಿಚಯವಾಗಿದೆ. ಇಬ್ಬರೂ ಮೊದಲ ನೋಟದಲ್ಲೇ ಪ್ರೀತಿಸಿ 1979ರಲ್ಲಿ ವಿವಾಹವಾದರು. ಆದರೆ ಮದುವೆಯಾದ 4 ತಿಂಗಳಿಗೆ (1979)ವಿಚ್ಛೇದನ ಪಡೆದುಕೊಂಡಿದ್ದಾಗಿ ಹೆಲೆನಾ ಲ್ಯೂಕ್​​ ಅವರು ತಮ್ಮ ಹಳೆಯ ಸಂದರ್ಶವೊಂದರಲ್ಲಿ ತಿಳಿಸಿದ್ದರು.

ಹೆಲೆನಾ ಲ್ಯೂಕ್ ತನ್ನ ನಟನಾ ವೃತ್ತಿಜೀವನದಲ್ಲಿ 9 ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಮಿತಾಭ್​​ ಬಚ್ಚನ್ ಅವರೊಂದಿಗೆ 'ಮರ್ದ್'ನಲ್ಲಿ ಕಾಣಿಸಿಕೊಂಡರು. ಅಮಿತಾಭ್ ಅಭಿನಯದ 'ಮರ್ದ್' ಚಿತ್ರದಲ್ಲಿ ಬ್ರಿಟಿಷ್ ರಾಣಿಯ ಪಾತ್ರದಿಂದ ಅವರು ಹೆಚ್ಚು ಜನಪ್ರಿಯರಾದರು. ಇದಲ್ಲದೇ ಹೆಲೆನಾ 'ಭಾಯ್ ಅಖೀರ್ ಭಾಯ್ ಹೋತಾ ಹೈ', 'ಯೇ ನಜಾರಿಯಾನ್', 'ರೊಮ್ಯಾನ್ಸ್', 'ಸಾಥ್ ಸಾಥ್', 'ಜುದಾಯಿ', 'ಏಕ್ ನಯಾ ರಿಶ್ತಾ', 'ಆವೋ ಪ್ಯಾರ್ ಕರೇನ್' ಮತ್ತು 'ದೋ ಗುಲಾಬ್' ಚಿತ್ರಗಳಲ್ಲಿ ನಟಿಸಿದ್ದಾರೆ. ಅದೇ ಸಮಯದಲ್ಲಿ ಚಿತ್ರರಂಗವನ್ನು ತೊರೆದು ಅಮೆರಿಕಾಕ್ಕೆ ತೆರಳಿದ ಅವರು ಡೆಲ್ಟಾ ಏರ್​ಲೈನ್ಸ್​ನಲ್ಲಿ ಅಟೆಂಡೆಟ್​ ಆಗಿ ಕೆಲಸ ಮಾಡಲು ಪ್ರಾರಂಭಿಸಿದರು ಎಂದು ಮೂಲಗಳು ತಿಳಿಸಿವೆ. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net