ಭಾರತೀಯ ಸೇನೆಯ ಯೋಧನೋರ್ವ ನಿಗೂಢವಾಗಿ ನಾಪತ್ತೆ; ಕಾರು ಸುಟ್ಟ ಸ್ಥಿತಿಯಲ್ಲಿ ಪತ್ತೆ

Army man
Published on

ಶ್ರೀನಗರ: ಭಾರತೀಯ ಸೇನೆಯ ಯೋಧನೋರ್ವ ಜಮ್ಮುಕಾಶ್ಮೀರದ ಕುಲಗಾಂವ್​ ಪ್ರದೇಶದಿಂದ ನಿನ್ನೆಯಿಂದ ನಾಪತ್ತೆಯಾಗಿದ್ದಾರೆ. ಈ ಯೋಧನನ್ನು ಉಗ್ರರೇ ಅಪಹರಣ ಮಾಡಿದ್ದಾಗಿ ಸೇನೆ ಇಂದು ಶಂಕೆ ವ್ಯಕ್ತಪಡಿಸಿದೆ.

ಕಳೆದು ಹೋಗಿರುವ ಯೋಧನಿಗಾಗಿ ಸೇನೆ ಹುಡುಕಾಟ ಶುರು ಮಾಡಿದ್ದು, ಇಂದು ಹೇಳಿಕೆಯೊಂದನ್ನೂ ಬಿಡುಗಡೆ ಮಾಡಿದೆ.

162 ಬೆಟಾಲಿನ್​ನ ರೈಫಲ್​ಮೆನ್​ ಶಕೀರ್​ ಮಂಜೂರ್​ ಭಾನುವಾರ ಸಂಜೆ 5ಗಂಟೆಯಿಂದಲೂ ನಾಪತ್ತೆಯಾಗಿದ್ದಾರೆ. ಕುಲಗಾಂವ್​ ಬಳಿ ಅವರ ಕಾರು ಸುಟ್ಟ ಸ್ಥಿತಿಯಲ್ಲಿ ಸಿಕ್ಕಿದೆ. ಉಗ್ರರೇ ಶಕೀರ್​ ಅವರನ್ನು ಅಪಹರಣ ಮಾಡಿರುವ ಶಂಕೆ ಇದೆ. ಅವರಿಗಾಗಿ ಹುಡುಕಾಟ ನಡೆದಿದೆ ಎಂದು ತಿಳಿಸಿದೆ. ಇದನ್ನೂ ಓದಿ: ಭೂಮಿಪೂಜೆಗೆ ಎಲ್​.ಕೆ.ಆಡ್ವಾಣಿಯವರಿಗೆ ಏಕಿಲ್ಲ ಆಹ್ವಾನ? ಇಲ್ಲಿದೆ ನೋಡಿ ನಿಜವಾದ ಕಾರಣ

ಶಕೀರ್​ ಅವರು ಈದ್​ ಹಬ್ಬ ಆಚರಿಸಲೆಂದು ಶೋಪಿಯಾನ ಜಿಲ್ಲೆಯಲ್ಲಿರುವ ಮನೆಗೆ ಬಂದಿದ್ದರು. ಹಬ್ಬದ ನಿಮಿತ್ತ ನಿನ್ನೆ ಸಂಜೆ ಅವರು ಕುಟುಂಬದೊಂದಿಗೆ ಹೊರಗೆ ಹೊರಟಿದ್ದರು. ಅದಾದ ಮೇಲೆಯೇ ಕಾಣೆಯಾಗಿದ್ದಾರೆ ಎನ್ನಲಾಗಿದೆ.

ಭದ್ರತಾ ಸಿಬ್ಬಂದಿ ಶೋಪಿಯಾನ್​, ಕುಲಗಾಂವ್​, ಅನಂತ್​ನಾಗ್​ ಜಿಲ್ಲೆಗಳಲ್ಲಿ ಕಳೆದು ಹೋದ ಯೋಧನಿಗಾಗಿ ಹುಡುಕುತ್ತಿದ್ದಾರೆ. ಅಷ್ಟೇ ಅಲ್ಲ, ಸ್ಥಳೀಯ ಪೊಲೀಸರು ಡ್ರೋನ್​, ಸ್ನಿಫರ್​ ಶ್ವಾನಗಳನ್ನು ಬಳಸಿ ಹುಡುಕುತ್ತಿದ್ದಾರೆ. ಶಕೀರ್​ ಅವರನ್ನು ಹೇಗಾದರೂ ಸುರಕ್ಷಿತವಾಗಿ ಮನೆಗೆ ವಾಪಸ್​ ಕರೆತನ್ನಿ ಎಂದು ಅವರ ಕುಟುಂಬದವರು ಮನವಿ ಮಾಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net