

ನವದೆಹಲಿ: ಕೋಲ್ಕತ್ತಾದ ಆರ್‌ಜಿ ಕರ್ ಮೆಡಿಕಲ್‌ನಲ್ಲಿ ತರಬೇತಿ ನಿರತ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ವಿಚಾರಣೆಯನ್ನು ಸುಪ್ರೀಂಕೋರ್ಟ್ ಸೋಮವಾರ(ಸೆಪ್ಟೆಂಬರ್ 9) ಪುನರಾರಂಭಿಸುತ್ತಿದ್ದಂತೆ ಪಶ್ಚಿಮ ಬಂಗಾಳ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ನ್ಯಾಯಮೂರ್ತಿ ಜೆಬಿ ಪರ್ದಿವಾಲಾ ಮತ್ತು ನ್ಯಾಯಮೂರ್ತಿ ಮನೋಜ್ ಮಿಶ್ರಾ ಅವರ ಪೀಠದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ.
ಪ್ರಕರಣದ ವಿಚಾರಣೆ ನಡೆಸುತ್ತಿದ್ದಂತೆ ಮರಣೋತ್ತರ ಪರೀಕ್ಷೆಗೆ ಅಗತ್ಯವಾದ ಪ್ರಮುಖ ದಾಖಲೆಯೊಂದು ಗಮನ ಸೆಳೆದಿದೆ. ಚಲನ್ ಇಲ್ಲದೆ ಶವಪರೀಕ್ಷೆ ನಡೆಸಲು ಸಾಧ್ಯವಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು ಹೇಳಿದ್ದಾರೆ. ಟ್ರೈನಿ ವೈದ್ಯರಾದ ವ್ಯಕ್ತಿಯ ಮರಣೋತ್ತರ ಪರೀಕ್ಷೆಯ ವರದಿ (ಪಿಎಂಆರ್) ನೊಂದಿಗೆ ನೀಡಲಾದ ಚಲನ್ ಬಗ್ಗೆ ವರದಿಯಲ್ಲಿ ಯಾವುದೇ ಉಲ್ಲೇಖವಿಲ್ಲ ಎಂದು ನ್ಯಾಯಾಲಯ ಸೂಚಿಸಿದೆ.
ಪಶ್ಚಿಮ ಬಂಗಾಳ ಸರ್ಕಾರದ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್ ಅವರು, ತಕ್ಷಣವೇ ದಾಖಲೆಗಳು ಸಿಗಲಿಲ್ಲ. ಈ ಪ್ರಶ್ನೆಗೆ ನ್ಯಾಯಾಲಯದ ಮೊರೆ ಹೋಗುವುದಾಗಿ ತಿಳಿಸಿದ್ದಾರೆ. ಇದು ಮುಖ್ಯವಾದುದು ಏಕೆಂದರೆ ದೇಹದೊಂದಿಗೆ ಯಾವ ಬಟ್ಟೆಗಳು ಮತ್ತು ವಿವರಣೆ ಕಳುಹಿಸಲಾಗಿದೆ ಎಂಬುದನ್ನು ತೋರಿಸುವ ಕಾಲಮ್ ಇದೆ. ಮರಣೋತ್ತರ ಪರೀಕ್ಷೆ ತಂಡವು ಚಲನ್ ಇಲ್ಲದೆ ಶವವನ್ನು ಸ್ವೀಕರಿಸುವುದಿಲ್ಲ. ಅದಕ್ಕಾಗಿಯೇ ನಾವು ಅದನ್ನು ನೋಡಲು ಬಯಸುತ್ತೇವೆ ಎಂದು ಮುಖ್ಯ ನ್ಯಾಯಾಮೂರ್ತಿಗಳು ಹೇಳಿದ್ದಾರೆ.
ಮರಣೋತ್ತರ ಪರೀಕ್ಷೆಯ ವರದಿಯನ್ನು ಸೂಚಿಸಿದ ನ್ಯಾಯಮೂರ್ತಿ ಜೆಬಿ ಪರ್ದಿವಾಲಾ ಅವರು, ಮೇಲ್ಭಾಗದಲ್ಲಿರುವ ಮೂರನೇ ಕಾಲಮ್ ನೋಡಿ, ಕಾನ್‌ಸ್ಟೆಬಲ್ (ಮೃತದೇಹವನ್ನು ತಂದವರು) ಇದನ್ನು (ಫಾರಂ) ಒಯ್ಯಬೇಕು ಎಂದು ಭಾವಿಸಲಾಗಿದೆ. ಆದರೆ ಅದನ್ನು ಹೊಡೆದು ಹಾಕಲಾಗಿದೆ. ಆದ್ದರಿಂದ ಮೃತದೇಹವನ್ನು ಪರೀಕ್ಷೆಗೆ ಕಳುಹಿಸಿದಾಗ ಈ ಚಲನ್‌ನ ಉಲ್ಲೇಖವಿಲ್ಲ. ಈ ಡಾಕ್ಯುಮೆಂಟ್ ಕಾಣೆಯಾಗಿದ್ದಲ್ಲಿ, ಈ ರೀತಿ ಆಗಲು ಕಾರಣವೇನೆಂಬುದನ್ನು ನೀವು (ಸರ್ಕಾರ) ನಾಳೆ ವಿವರಿಸಬೇಕಾಗುತ್ತದೆ ಎಂದು ಹೇಳಿದರು.
ಕಾಣೆಯಾಗಿರುವ ದಾಖಲೆಯನ್ನು ಪಶ್ಚಿಮಬಂಗಾಳ ಸರ್ಕಾರವನ್ನು ಕೇಳಬೇಕು ಎಂದು ಸಿಬಿಐಗಿ ಪೀಠವು ಸೂಚಿಸಿದೆ. ಸರ್ಕಾರ ಪರ ವಕೀಲರು ಈ ದಾಖಲೆಯನ್ನು ಕಲ್ಕತ್ತಾ ಹೈಕೋರ್ಟ್‌ನಲ್ಲಿ ವಿಚಾರಣೆಯ ಸಮಯದಲ್ಲಿ ಸಲ್ಲಿಸಲಾಗಿದೆ ಎಂದು ಹೇಳಿದರು. ಅದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿಗಳು ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಉಲ್ಲೇಖವಿಲ್ಲದ ಕಾರಣ, ನಂತರ ಅದನ್ನು ರಚಿಸಿರುವ ಸಾಧ್ಯತೆ ಇದೆ ಎಂಬುದನ್ನು ತಳ್ಳಿಹಾಕಲಾಗುವುದಿಲ್ಲ ಎಂದು ಪ್ರಶ್ನಿಸಿದ್ದಾರೆ.
ಅಲ್ಲದೆ ಈ ರೀತಿಯ ಸೂಕ್ಷ್ಮ ವಿಚಾರದಲ್ಲಿ ಸಂತ್ರಸ್ತೆಯ ಸಾವು ಮತ್ತು ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸುವ ನಡುವೆ 14 ಗಂಟೆಗಳ ಕಾಲ ವಿಳಂಬವಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ವಿಚಾರಣೆಯ ಸಮಯದಲ್ಲಿ ಕೇಳಿದ್ದಾರೆ. ತನಿಖೆ ನಡೆಸುತ್ತಿರುವ ಸಿಬಿಐಗೆ ಸೆಪ್ಟೆಂಬರ್ 17ರೊಳಗೆ ತನಿಖೆಯಲ್ಲಿ ಆಗಿರುವ ಪ್ರಗತಿಯನ್ನು ವಿವರಿಸುವ ಹೊಸ ವರದಿಯನ್ನು ಸಲ್ಲಿಸುವಂತೆ ಪೀಠವು ಸೂಚಿಸಿದೆ. ಸಂತ್ರಸ್ತೆಯ ಫೋಟೋಗಳನ್ನು ಸಾಮಾಜಿಕ ಜಾಲತಾಣದಿಂದ ತೆಗೆದುಹಾಕುವಂತೆ ನ್ಯಾಯಾಧೀಶರು ಆದೇಶಿಸಿದ್ದಾರೆ. (ಏಜೆನ್ಸೀಸ್)