VIDEO| ಹೋಟೆಲ್​ ಮೇಲೆ ಗುಂಡಿನ ದಾಳಿ ನಡೆಸಿ ಹಣಕ್ಕೆ ಬೇಡಿಕೆ; ಬಿಜೆಪಿ-ಕಾಂಗ್ರೆಸ್​ ವಾಗ್ದಾಳಿ

RJ Firing
Published on

ಜೈಪುರ: ಕೆಲವೇ ದಿನಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ರಾಜಸ್ಥಾನದಲ್ಲಿ ದುಷ್ಕರ್ಮಿಗಳ ಗುಂಪೊಂದು ಹೋಟೆಲ್​ ಒಂದರ ಮೇಲೆ ಗುಂಡಿನ ದಾಳಿ ನಡೆಸಿ 50 ಲಕ್ಷ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿರುವ ಘಟನೆ ಅಲ್ವಾರ್​ನಲ್ಲಿ ನಡೆದಿದೆ.

ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಚುನಾವಣೆಯ ಹೊಸ್ತಿಲಲ್ಲಿ ಈ ರೀತಿಯ ಘಟನೆ ನಡೆದಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಇತ್ತ ಘಟನೆಯು ಆಡಳಿತರೂಢ ಕಾಂಗ್ರೆಸ್​ ಹಾಗೂ ಬಿಜೆಪಿ ನಡುವಿನ ವಾಕ್ಸಮರಕ್ಕೆ ಕಾರಣವಾಗಿದೆ.

ವೈರಲ್​ ಆಗಿರುವ ವಿಡಿಯೋದಲ್ಲಿ ಹೋಟೆಲ್​ಗೆ ಆಗಮಿಸುವ ಮುಸುಕುಧಾರಿಗಳಿಬ್ಬರು ಏಕಾಏಕಿ ಗಾಳಿಯಲ್ಲಿ ಗುಂಡು ಹಾರಿಸಲು ಶುರು ಮಾಡುತ್ತಾರೆ. ಈ ವೇಳೆ ಅಲ್ಲಿದ್ದ ಜನರು ಭಯದಿಂದ ಓಡಿ ಹೋಗಲು ಶುರು ಮಾಡಿದ್ದು, ವ್ಯಕ್ತಿಗಳಿಬ್ಬರು ಚೀಟಿ ಒಂದನ್ನು ಎಸೆದು ಪರಾರಿಯಾಗುತ್ತಾರೆ. ಬಳಿಕ ಚೀಟಿ ತೆಗೆದು ಪರಿಶೀಲಿಸಿದಾಗ ಅದರಲ್ಲಿ 50 ಲಕ್ಷ ರೂಪಾಯಿ ಹಣ ಕೊಡುವಂತೆ ಬೇಡಿಕೆ ಇಟ್ಟಿರುವುದು ಕಂಡು ಬರುತ್ತದೆ.

ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು, ಇಬ್ಬರು ದುಷ್ಕರ್ಮಿಗಳು ಹೋಟೆಲ್​ ಒಂದರ ಮುಂಭಾಗ ಐದು ಸುತ್ತು ಗುಂಡು ಹಾರಿಸಿದ್ದು, ನಿರ್ದಿಷ್ಟ ಅವಧಿಯೊಳಗೆ 50 ಲಕ್ಷ ರೂಪಾಯಿ ಹಣ ಕೊಡುವಂತೆ ಬೇಡಿಕೆ ಇಟ್ಟಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಆರೋಪಿಗಳನ್ನು ಪತ್ತೆ ಹಚ್ಚಲು ತಂಡ ರಚಿಸಲಾಗಿದೆ ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇತ್ತ ಘಟನೆ ಬೆಳಕಿಗೆ ಬರುತ್ತಿದ್ದಂತೆ ಆಡಳಿತರೂಢ ಕಾಂಗ್ರೆಸ್​ ವಿರುದ್ಧ ಮುಗಿಬಿದ್ದಿರುವ ಬಿಜೆಪಿ ಇದೊಂದು ನಾಚಿಕೆಗೇಡಿನ ಸಂಗತಿಯಾಗಿದ್ದು, ಇಡೀ ರಾಜ್ಯವೇ ತಲೆತಗ್ಗಿಸುವಂತಾಗಿದೆ. ರಾಜಸ್ಥಾನವನ್ನು ಅಪರಾಧದ ರಾಜ್ಯವನ್ನಾಗಿಸಿದ ನಿಮಗೆ ನಾಚಿಕೆಯಾಗುವುದಿಲ್ಲವೇ ಎಂದು ಕಾಂಗ್ರೆಸ್ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net