

ಲಂಡನ್: ಸಾವಿಗೂ ಸವಾಲು ಹೊಡೆಯುವಂತಹ ಅದೃಷ್ಟವೆಂದರೆ ಇದೇ ಇರಬೇಕು. ಸಣ್ಣ ಅಪಘಾತಗಳಲ್ಲೇ ಕೆಲವೊಮ್ಮೆ ಪ್ರಾಣ ಉಳಿಸಿಕೊಳ್ಳಲಾಗದು. ಅಂತಹದರಲ್ಲಿ ಎರಡು ಲಾರಿಗಳ ನಡುವೆ ಕಾರೊಂದು ಸಿಲುಕಿದಾಗ ಅದರಲ್ಲಿರುವ ಪ್ರಯಾಣಿಕರ ಸ್ಥಿತಿ ಏನಾಗಬಹುದು ಎಂಬುದನ್ನು ಊಹೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಹೀಗಿರುವಾಗ ಇಂಗ್ಲೆಂಡ್ನಲ್ಲಿ ನಡೆದ ಘಟನೆಯಲ್ಲಿ ಕಾರು ಚಾಲಕ ಹಾಗೂ ಮೂವರು ಪ್ರಯಾಣಿಕರು ಬಚಾವ್ ಆಗಿರುವುದು ಮಹಾಪವಾಡವೇ ಸರಿ.
ಹೌದು, ಇಂಗ್ಲೆಂಡ್ನ ಲಾಫ್ಬಾರೋ ಮತ್ತು ಈಸ್ಟ್ ಮಿಡ್ಲ್ಯಾಂಡ್ ಏರ್ಪೋರ್ಟ್ನ ಜಂಕ್ಷನ್ 24 ನಡುವೆ ಇರುವ ಹೆದ್ದಾರಿಯಲ್ಲಿ ಬಿಎಂಡಬ್ಲ್ಯು ಕಾರು ಮತ್ತು ಲಾರಿಗಳ ನಡುವೆ ಭೀಕರ ಅಪಘಾತ ಸಂಭವಿಸಿದೆ. ಅದೃಷ್ಟವೆಂದರೆ ಚಾಲಕ ಮತ್ತು ಪ್ರಯಾಣಿಕರು ಸಣ್ಣಪುಟ್ಟ ಗಾಯಗಳಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕಾರಿನ ಸಮೇತ ಎರಡು ಲಾರಿಗಳ ನಡುವೆ ಸಿಲುಕಿದ ಚಾಲಕನನ್ನು ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಹೊರತೆಗೆದಿದ್ದು, ಈ ಒಂದು ಕಾರ್ಯಾಚರಣೆ ನಿಜಕ್ಕೂ ಗೊಂದಲಮಯವಾಗಿತ್ತು ಎಂದು ಅಗ್ನಿಶಾಮದಳ ವಕ್ತಾರರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅಂದಹಾಗೆ ಬುಧವಾರ ಮಧ್ಯಾಹ್ನ ಭೀಕರ ಅಪಘಾತ ಸಂಭವಿಸಿತು. ಇದಾದ ಬೆನ್ನಲ್ಲೇ 3.30ರ ಸಮಯದಲ್ಲಿ ಕಾರು ಚಾಲಕನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಯಿತು.
ಇನ್ನು ಅಪಘಾತದ ತೀವ್ರತೆ ಎಷ್ಟಿದೆ ಅಂದರೆ ಕಾರಿನ ಎರಡು ತುದಿಗಳು ಪುಡಿ-ಪುಡಿಯಾಗಿದೆ. ಚಾಲಕನ ಸೀಟ್ ಮಾತ್ರ ಸಂಪೂರ್ಣ ಹಾನಿಯಾಗಿದ್ದು, ಅದರಲ್ಲಿದ ಏರ್ ಬ್ಯಾಗ್ನಿಂದಾಗಿ ಚಾಲಕ ಬದುಕುಳಿದಿದ್ದಾನೆ ಎಂದು ತಿಳಿದುಬಂದಿದೆ. ಅಲ್ಲದೆ, ಒಂದು ಲಾರಿಯ ಮುಂಭಾಗವೂ ಸಂಪೂರ್ಣ ಹಾನಿಯಾಗಿದೆ. ಇನ್ನು ಅಪಘಾತದಿಂದಾಗಿ ಹೆದ್ದಾರಿ ಸುಮಾರು 6 ಗಂಟೆಗಳ ಕಾಲ ಮುಚ್ಚಲಾಗಿತ್ತು.
ಭಾರಿ ಸರಕು ವಾಹನಗಳು ಹಾಗೂ ಕಾರಿನ ನಡುವಿನ ಅಪಘಾತ ಇದಾಗಿದ್ದು, ವಾಹನದಲ್ಲಿ ಸಿಲುಕಿದ್ದವರನ್ನು ಹೊರತೆಗೆಯುವುದು ನಿಜಕ್ಕೂ ಕ್ಲಿಷ್ಟಕರವಾಗಿತ್ತು. ಆದರೆ, ಭೀಕರ ಹಾನಿಯೇನು ಆಗಿರಲಿಲ್ಲ. ಸಣ್ಣ ಪುಟ್ಟ ಗಾಯಗೊಳೊಂದಿಗೆ ನರಳುತ್ತಿದ್ದ ಚಾಲಕ ಹಾಗೂ ಪ್ರಯಾಣಿಕರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು. ಗಾಯಾಳುಗಳಿಗೆ ಚಿಕಿತ್ಸೆ ಮುಂದುವರಿದಿದೆ ಎಂದು ಅಗ್ನಿಶಾಮಕ ವಕ್ತಾರ ಮಾಧ್ಯಮಗಳಿಗೆ ತಿಳಿಸಿದ್ದಾರೆ. (ಏಜೆನ್ಸೀಸ್)