ಜುಟ್ಟನಹಳ್ಳಿ ಮಾರಮ್ಮನ ಹುಂಡಿ ಹಣ ಕದ್ದ ಪೂಜಾರಿಯನ್ನು ಅಟ್ಟಾಡಿಸಿದ ಬಸವ, ದೇವರ ಹಣ ವಾಪಸ್​!

manyda basappa
Published on

ನಾಗಮಂಗಲ: ಮೂರು ತಿಂಗಳ ಹಿಂದೆ ಜುಟ್ಟನಹಳ್ಳಿ ಮಾರಮ್ಮ ದೇಗುಲದಲ್ಲಿ ಹುಂಡಿಹಣ ಕದ್ದಿದ್ದ ಪೂಜಾರಿ ಇದೀಗ ತಪ್ಪೊಪ್ಪಿಕೊಂಡು ಆ ಹಣವನ್ನು ವಾಪಸ್ ಕೊಡುವುದಾಗಿ ಹೇಳಿದ್ದಾರೆ. ಹೀಗೆ ಹೇಳುವಂತೆ ಮಾಡಿದ್ದು ಬಸಪ್ಪನ ಪವಾಡ!

ತಾಲೂಕಿನ ಜುಟ್ಟನಹಳ್ಳಿಯ ಮಾರಮ್ಮ ದೇವಸ್ಥಾನದಲ್ಲಿ ಹುಂಡಿ ಕಳವಾಗಿತ್ತು. ಗ್ರಾಮಸ್ಥರು ದೇವರ ಮೊರೆ ಹೋಗಿದ್ದರು. ಮೂರು ತಿಂಗಳಾದರೂ ಕಳ್ಳನ ಸುಳಿವು ಸಿಕ್ಕಿರಲಿಲ್ಲ. ಈ ನಡುವೆ ಗ್ರಾಮಸ್ಥರೊಬ್ಬರು ವೈಯಕ್ತಿ ಸಮಸ್ಯೆ ಪರಿಹಾರಕ್ಕಾಗಿ ಮಂಡ್ಯದ ಚಾಮುಂಡೇಶ್ವರಿನಗರದ ಜಯನಗರ ಬಡಾವಣೆಯಿಂದ ಬಸಪ್ಪನನ್ನು ಕರೆಸಿದ್ದರು. ಈ ಸಂದರ್ಭದಲ್ಲಿ ಬಸಪ್ಪನಿಗೆ ಪೂಜೆ ಸಲ್ಲಿಸಿದ ಗ್ರಾಮಸ್ಥರು, ದೇವರ ಹಣ ಕದ್ದವರನ್ನು ಪತ್ತೆ ಮಾಡಿಕೊಡುವಂತೆ ಕೋರಿದರು. ಮುಂದೆ ನಡೆದದ್ದೆಲ್ಲವೂ ಬಸಪ್ಪನ ಪವಾಡ.

ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಬಸಪ್ಪ, ನೇರವಾಗಿ ಪೂಜಾರಿ ರಾಜು ಎಂಬುವರ ಮನೆ ಬಾಗಿಲಿಗೆ ಹೋಗಿ ನಿಂತ ಕೂಡಲೇ ಗ್ರಾಮಸ್ಥರು ತಬ್ಬಿಬ್ಬಾದರು. ಮನೆಯಿಂದ ಹೊರ ಬಂದ ಪೂಜಾರಿಯನ್ನು ಕೊಂಬಿನಿಂದ ತಿವಿಯುತ್ತ ಅಟ್ಟಾಡಿಸಿತು. ದಿಕ್ಕು ತೋಚದ ಪೂಜಾರಿ ಬಸಪ್ಪನ ಕಾಲು ಹಿಡಿದು ತಾನು ಮಾಡಿದ ತಪ್ಪನ್ನು ಒಪ್ಪಿಕೊಂಡರು. ಸಾರ್ವಜನಿಕವಾಗಿ ಕ್ಷಮೆ ಕೇಳಿದ ನಂತರ ಬಸಪ್ಪನ ಕೋಪ ಶಾಂತವಾಯಿತು. ಗ್ರಾಮಸ್ಥರ ಮುಂದೆ ಹುಂಡಿ ಹಣ ಹಿಂದಿರುಗಿಸುವುದಾಗಿ ಪೂಜಾರಿ ಒಪ್ಪಿಕೊಂಡ. ಬಸಪ್ಪನ ಪವಾಡಕ್ಕೆ ಪೂಜಾರಿಯ ಅಸಲಿ ಮುಖ ಬಯಲಾಗುತ್ತಿದ್ದಂತೆ ಗ್ರಾಮಸ್ಥರು ಮಂತ್ರಮುಗ್ಧರಾದ ಘಟನೆ ಇತ್ತೀಚೆಗೆ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net