Congress ಶಾಸಕರಿಗೆ ಬಿಜೆಪಿಯಿಂದ 50 ಕೋಟಿ ರೂ. ಆಫರ್​; CM ಮಾಡಿರುವ ಆರೋಪದಲ್ಲಿ ಹುರುಳಿದೆ ಎಂದ ಸಚಿವರು

Siddu DK
Published on

ಬೆಂಗಳೂರು: ಉಪಚುನಾವಣೆ ಮುಗಿಯುತ್ತಿದ್ದಂತೆ ರಾಜ್ಯದಲ್ಲಿ ಆಪರೇಷನ್​ ಕಮಲ ಮತ್ತೊಮ್ಮೆ ಸದ್ದು ಮಾಡುತ್ತಿದ್ದು, ಖುದ್ದು ಸಿಎಂ ಸಿದ್ದರಾಮಯ್ಯ ಬಿಜೆಪಿಯವರು ಕಾಂಗ್ರೆಸ್​ ಶಾಸಕರಿಗೆ (Congress MLA) 50 ಕೋಟಿ ರೂಪಾಯಿ ಆಫರ್​ ಕೊಡುತ್ತಿದ್ದಾರೆ ಎಂದು ಆರೋಪಿಸಿದ್ದರು. ಇದೀಗ ಇದಕ್ಕೆ ಪುಷ್ಠಿ ಎಂಬಂತೆ ಡಿಸಿಎಂ ಡಿ.ಕೆ. ಶಿವಕುಮಾರ್​ ಹಾಗೂ ರಾಜ್ಯ ಕಾಂಗ್ರೆಸ್​ ಸರ್ಕಾರದ (Congress Government) ಸಚಿವರು ಇದಕ್ಕೆ ಪ್ರತಿಕ್ರಿಯಿಸಿದ್ದು, ಸಿಎಂ ಮಾಡಿರುವ ಆರೋಪದಲ್ಲಿ ಹುರುಳಿದೆ ಎಂದು ಹೇಳಿದ್ದಾರೆ.

ವಿಧಾನಸೌಧದಲ್ಲಿ ಈ ಬಗ್ಗೆ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್​, ನಮ್ಮ ಶಾಸಕರಿಗೆ ಬಿಜೆಪಿ ಅವರು ಆಫರ್ ಕೊಡ್ತಿರೋದು ನಿಜ.  ನಮ್ಮ ಶಾಸಕರ ಜೊತೆ ಬಿಜೆಪಿ ಅವರು ಮಾತಾಡಿದ್ದಾರೆ. ಅದನ್ನ ನಮ್ಮ ಶಾಸಕರು ಸಿಎಂಗೆ ತಿಳಿಸಿದ್ದಾರೆ. ಮಿಕ್ಕಿದ ವಿಚಾರ ನಾನು ಮುಂದಿನ ದಿನಗಳಲ್ಲಿ ತಿಳಿಸುತ್ತೇನೆ‌ ಎಂದು ಹೇಳಿದ್ದಾರೆ.

ಸಿಎಂ ಆರೋಪಕ್ಕೆ ಪ್ರತಿಕ್ರಿಯಿಸಿರುವ ಸಚಿವ ಸಂತೋಷ್​ ಲಾಡ್​, ರಾಜ್ಯ ಸರ್ಕಾರ ಪತನಗೊಳಿಸಲು ಕಾಂಗ್ರೆಸ್ ಶಾಸಕರಿಗೆ ಬಿಜೆಪಿ ನಾಯಕರು ತಲಾ ₹50 ಕೋಟಿ ಆಮಿಷ ಒಡ್ಡಿದ್ದರು ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರೋಪದಲ್ಲಿ ಹುರುಳಿದೆ. 8 ತಿಂಗಳಿನಿಂದಲೂ ಬಿಜೆಪಿಯವರು ಅಂತಹ ಪ್ರಯತ್ನ ಮಾಡುತ್ತಲೇ ಇದ್ದಾರೆ. ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಎಲ್ಲವೂ ಸಾಧ್ಯ. ಸರ್ಕಾರ ಅಸ್ಥಿರಗೊಳಿಸುವುದೇ ಅವರ ಕೆಲಸ. ಸತತವಾಗಿ ಆ ಪ್ರಯತ್ನದಲ್ಲೇ ಇದ್ದಾರೆ ಎಂದು ಸಚಿವ ಸಂತೋಷ್​ ಲಾಡ್​ ಆರೋಪಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ಮಾಡಿರುವ ಆರೋಪ ರಾಜ್ಯ ರಾಜಕಾರಣದಲ್ಲಿ ಹೊಸ ಚರ್ಚೆಯನ್ನ ಹುಟ್ಟುಹಾಕಿದ್ದು, ಈ ವಿಚಾರ ಮುಂದಿನ ದಿನಗಳಲ್ಲಿ ಯಾವ ಹಂತ ತಲುಪಲಿದೆ ಎಂದು ಕಾದು ನೋಡಬೇಕಿದೆ. ಈ ಬಗ್ಗೆ ಬಿಜೆಪಿ ನಾಯಕರು ಇನ್ನಷ್ಟೇ ಪ್ರತಿಕ್ರಿಯಿಸಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net