

ನವದೆಹಲಿ: 18ನೇ ಆವೃತ್ತಿಯ ಐಪಿಎಲ್ (IPL) ಆರಂಭವಾಗುವುದಕ್ಕೆ ನಾಲ್ಕು ತಿಂಗಳುಗಳ ಅಧಿಕ ಸಮಯ ಉಳಿದಿದ್ದು, ಈಗಾಗಲೇ ಅದಕ್ಕೆ ಸಂಬಂಧಿಸಿದ ಕೆಲಸಗಳು ಚುರುಕುಗೊಂಡಿವೆ. ನವೆಂಬರ್ 24-25ರಂದು ನಡೆಯಲಿರುವ ಮೆಗಾ ಹರಾಜು (Mega Auction) ಪ್ರಕ್ರಿಯೆ ನಂತರ ಕೆಲಸಗಳು ಮತ್ತಷ್ಟು ಬಿರುಸುಗೊಳ್ಳಲಿದ್ದು, ಕ್ರೀಡಾಭಿಮಾನಿಗಳ ಚಿತ್ತ ಮೆಗಾ ಹರಾಜಿನತ್ತ ಬಿದ್ದಿದೆ. ಇದೆಲ್ಲದರ ನಡುವೆ 17ನೇ ಆವೃತ್ತಿಯ ಕೆಲವು ಘಟನೆಗಳ ಬಗ್ಗೆ ಇಂದಿಗೂ ಚರ್ಚೆ ನಡೆಯುತ್ತಿದ್ದು, ಈ ಬಗ್ಗೆ ಕ್ರೀಡಾ ವಲಯದಲ್ಲಿ ಈಗಲೂ ಮಾತನಾಡಿಕೊಳ್ಳಲಾಗುತ್ತದೆ.
ಅದೇ ರೀತಿ 17ನೇ ಆವೃತ್ತಿಯ ಐಪಿಎಲ್ನಲ್ಲಿ (IPL) ಎಸ್ಆರ್ಎಚ್ (SRH) ಹಾಗೂ ಎಲ್ಎಸ್ಜಿ (LSG) ವಿರುದ್ಧದ ಪಂದ್ಯದಲ್ಲಿ ಲಖನೌ ತಂಡ ಟ್ರಾವಿಸ್ ಹೆಡ್ ಆರ್ಭಟಕ್ಕೆ ನಲುಗಿ ಹೀನಾಯವಾಗಿ ಸೋಲುಂಡಿತ್ತು. ಪಂದ್ಯದ ಬಳಿಕ ಲಖನೌ ತಂಡದ ಮಾಲೀಕ ಸಂಜೀವ್ ಗೋಯಾಂಕಾ (Sanjeev Goenka) ಹಾಗೂ ಆಗಿನ ತಂಡದ ನಾಯಕ ಕೆಎಲ್ ರಾಹುಲ್ (KL Rahul) ನಡುವೆ ಬಹಿರಂಗವಾಗಿ ನಡೆದಿದ್ದ ಮಾತಿನ ಚಕಮಕಿ ಕ್ರೀಡಾ ವಲಯದಲ್ಲಿ ಸಖತ್ ಸೌಂಡ್ ಮಾಡಿತ್ತು. ಈ ಬಗ್ಗೆ ಮಾತನಾಡಿರುವ ರಾಹುಲ್ (KL Rahul) ಆ ಒಂದು ಘಟನೆ ಇಡೀ ತಂಡದ ಮೇಲೆ ಪರಿಣಾಮ ಬೀರಿದೆ ಎಂದು ಹೇಳಿದ್ದಾರೆ.
ಘಟನೆಯ ಬಗ್ಗೆ ಇದೇ ಮೊದಲ ಬಾರಿ ಮಾತನಾಡಿರುವ ರಾಹುಲ್ (KL Rahul), ಪಂದ್ಯದ ನಂತರ ಮೈದಾನದಲ್ಲಿ ಏನೇ ನಡೆದರೂ ಅದು ಒಳ್ಳೆಯದಲ್ಲ. ಅಂತಹದನ್ನು ಮೈದಾನದ ಒಳಗೆ ಅಥವಾ ಹೊರಗೆ ನೋಡಲು ಯಾರೂ ಇಷ್ಟಪಡುವುದಿಲ್ಲ. ಇದು ಇಡೀ ತಂಡದ ಮೇಲೆ ಪರಿಣಾಮ ಬೀರಿದೆ ಎಂದು ನಾನು ಭಾವಿಸುತ್ತೇನೆ.
ಕಳೆದ ಸೀಸನ್ ಬ್ಯಾಟ್ಸ್ಮನ್ ಮತ್ತು ನಾಯಕನಾಗಿ ನನಗೆ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಕಳೆದ ಮೂರು ಸೀಸನ್ಗಳಲ್ಲಿ ಮೊದಲ ಬಾರಿಗೆ ತಂಡವು ಪ್ಲೇಆಫ್ಗೆ (PlayOff) ಅರ್ಹತೆ ಪಡೆಯಲು ಸಾಧ್ಯವಾಗಲಿಲ್ಲ. ಹೀಗಾಗಿ ಆಟದಲ್ಲಿ ಸ್ವಾತಂತ್ರ್ಯ ಬೇಕು ಎಂಬ ಕಾರಣಕ್ಕೆ ನಾನು ತಂಡವನ್ನು ತೊರೆಯಲು ನಿರ್ಧರಿಸಿದ್ದೇನೆ. ನಾನು ಹೊಸ ಆರಂಭವನ್ನು ಮಾಡಲು ಬಯಸುತ್ತೇನೆ. ನಾನು ನನ್ನ ಆಟವನ್ನು ಸ್ವತಂತ್ರವಾಗಿ ಆಡಬಹುದಾದ ನನ್ನ ಸ್ವಂತ ಆಯ್ಕೆಗಳನ್ನು ಹುಡುಕಲು ನಾನು ಬಯಸುತ್ತೇನೆ. ಲಖನೌ ತಂಡದಲ್ಲಿ ನಾನು ಬಯಸಿದ ವಾತಾವರಣವಿರಲಿಲ್ಲ. ಹೀಗಾಗಿ ನಾನು ಮುಂದಾಲೋಚನೆ ಮಾಡಿ ಹೊಸ ದಾರಿ ಕಂಡುಕೊಂಡೆ.
ನಾನು ಕೆಲವು ಸಮಯದಿಂದ ಟಿ20 ತಂಡದಿಂದ ಹೊರಗುಳಿದಿದ್ದೇನೆ. ಆಟಗಾರನಾಗಿ ನಾನು ಎಲ್ಲಿ ನಿಲ್ಲುತ್ತೇನೆ ಎಂದು ನನಗೆ ತಿಳಿದಿದೆ. ಪುಟಿದೇಳಲು ನಾನು ಏನು ಮಾಡಬೇಕೆಂದು ನನಗೆ ತಿಳಿದಿದೆ. ಹಾಗಾಗಿ ಐಪಿಎಲ್ನ ಮುಂದಿನ ಸೀಸನ್ಗಾಗಿ ನಾನು ಎದುರು ನೋಡುತ್ತಿದ್ದೇನೆ. ಅದು ನನಗೆ ಕ್ರಿಕೆಟ್ಗೆ ಹೋಗಲು ಮತ್ತು ಆನಂದಿಸಲು ವೇದಿಕೆಯನ್ನು ನೀಡುತ್ತದೆ. ಭಾರತ ಟಿ20 ತಂಡದಲ್ಲಿ ಪುನರಾಗಮನ ಮಾಡುವುದು ನನ್ನ ಗುರಿ ಎಂದು ರಾಹುಲ್ (KL Rahul) ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.