

ಬೆಂಗಳೂರು: ಲೈಂಗಿಕ ದೌರ್ಜನ್ಯ ಹಗರಣ ಸಂಬಂಧ ಅಶ್ಲೀಲ ವಿಡಿಯೋ ವೈರಲ್ ಮಾಡಿದ ಆರೋಪದ ಮೇಲೆ ಸಚಿವರ ಆಪ್ತ ಸೇರಿ ಇಬ್ಬರನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ಮಂಗಳವಾರ ಬಂಧಿಸಿದೆ.
ಸಚಿವ ಜಮೀರ್ ಅಹ್ಮದ್ ಆಪ್ತ ನವೀನ್‌ಗೌಡ ಮತ್ತು ಚೇತನ್ ಬಂಧಿತರು. ಪೆನ್‌ಡ್ರೈವ್ ಹಂಚಿಕೆ ಮತ್ತು ಜಾಲತಾಣದಲ್ಲಿ ವೈರಲ್ ಮಾಡಿದ ಆರೋಪ ಕೇಳಿಬಂದಿತ್ತು. ವಿಚಾರಣೆಗೆ ಹಾಜರಾಗುವಂತೆ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದರೂ ಹಾಜರಾಗದೆ ಹೈಕೋರ್ಟ್‌ನಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಮತ್ತೊಂದೆಡೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ವಿಡಿಯೋ ವೈರಲ್ ಮಾಡಿದವರ ಬಂಧನ ಏಕೆ ಆಗಿಲ್ಲ ಎಂದು ಸರ್ಕಾರಕ್ಕೆ ಪ್ರಶ್ನೆ ಮಾಡಿದ್ದರು. ಈ ಎಲ್ಲದರ ನಡುವೆ ಎಸ್‌ಐಟಿ ಅಧಿಕಾರಿಗಳು, ಅರ್ಜಿಯ ವಿಚಾರಣೆ ಸಲುವಾಗಿ ಹೈಕೋರ್ಟ್‌ಗೆ ಬರುತ್ತಿದ್ದಾಗ ಕೋರ್ಟ್ ಆವರಣದಲ್ಲೇ ಇಬ್ಬರನ್ನೂ ಬಂಧಿಸಿದ್ದಾರೆ.
ಪ್ರಜ್ವಲ್ ಅಶ್ಲೀಲ ವಿಡಿಯೋ ಬಿಡುಗಡೆಗೆ ಕ್ಷಣಗಣನೆ ಎಂದು ನವೀನ್‌ಗೌಡ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿದ್ದ. ಪ್ರಜ್ವಲ್ ವೀಡಿಯೋ ನೋಡಲು ವಾಟ್ಸ್‌ಆ್ಯಪ್ ಚಾನಲ್ ಫಾಲೋ ಮಾಡಿ ಎಂದು ಮೊದಲು ಪೋಸ್ಟ್ ಮಾಡಿದ್ದ. ನಂತರ ಸ್ವಲ್ಪ ಹೊತ್ತಿನಲ್ಲೇ ವಿಡಿಯೋ ಬಿಡುಗಡೆಗೆ ಕ್ಷಣಗಣನೆ ಎಂದು ಮತ್ತೊಂದು ಪೋಸ್ಟ್ ಹಾಕಿದ್ದ. ಈ ಪೋಸ್ಟ್ಗಳನ್ನು ಜೆಡಿಎಸ್ ಸ್ಕ್ರೀನ್ ಶಾಟ್ ತೆಗೆದು ಪೊಲೀಸರಿಗೆ ದೂರು ನೀಡಿತ್ತು. ಪ್ರಕರಣ ದಾಖಲಾಗುತ್ತಿದ್ದಂತೆಯೇ ನವೀನ್‌ಗೌಡ ಫೇಸ್ ಬುಕ್ ಅಕೌಂಟ್ ಡಿಲೀಟ್ ಮಾಡಿಕೊಂಡಿದ್ದ.