ಪಾಕಿಸ್ತಾನ ಪರ ಘೋಷಣೆ ಕೂಗಿದರೆ ನಾವೇ ಅವರನ್ನು ಗುಂಡಿಟ್ಟು ಕೊಲ್ಲುತ್ತೇವೆ: ಸಚಿವ ಜಮೀರ್ ಅಹ್ಮದ್

Zameer Ahmed
Published on

ರಾಯಚೂರು: ಲೋಕಸಭೆ ಚುನಾವಣೆಯ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ರಾಜ್ಯದಲ್ಲಿ ಎರಡನೇ ಹಂತದ ಮತದಾನಕ್ಕೆ ಕೆಲವೇ ದಿನಗಳು ಬಾಕಿ ಉಳಿದಿರುವ ಸಮಯದಲ್ಲಿ ರಾಜಕೀಯ ಪಕ್ಷಗಳ ನಾಯಕರು ಅಬ್ಬರದ ಪ್ರಚಾರದಲ್ಲಿ ತೊಡಗಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಸಚಿವ ಜಮೀರ್ ಅಹ್ಮದ್​ ನೀಡಿರುವ ಹೇಳಿಕೆ ಸಖತ್ ವೈರಲ್​ ಆಗುತ್ತಿದ್ದು, ಪರ-ವಿರೋಧದ ಚರ್ಚೆ ನಡೆಯುತ್ತಿದೆ.

ರಾಯಚೂರಿನಲ್ಲಿ ಇತ್ತೀಚಿಗೆ ನಡೆದ ಕಾಂಗ್ರೆಸ್​ ಪಕ್ಷದ ಕಾರ್ಯಕ್ರಮದಲ್ಲಿ ಕೆಲವರು ಪಾಕಿಸ್ತಾನ ಜಿಂದಾಬಾದ್​ ಘೋಷಣೆ ಕೂಗಿದ್ದಾರೆ ಎಂದು ಆರೋಪಿಸಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಸಚಿವ ಜಮೀರ್​ ರಾಯಚೂರಿನ ಸಿಂಧನೂರಿನಲ್ಲಿ ಪ್ರತಿಕ್ರಿಯಿಸಿದ್ದು, ಎಲ್ಲೆಡೆ ವೈರಲ್​ ಆಗುತ್ತಿದೆ.

ಸಾರ್ವಜನಿಕ ಪ್ರದೇಶಗಳಲ್ಲಿ ಯಾರಾದರು ಪಾಕಿಸ್ತಾನ ಜಿಂದಾಬಾದ್​ ಅಂದರೆ ನಮಗೆ ತಿಳಿಸಿ ನಾವು ಅವರನ್ನ ಗಲ್ಲಿಗೇರಿಸಲ್ಲ, ಬದಲಿಗೆ ನಾವೇ ಡಿಶುಂ ಡಿಶುಂ ಎಂದು ಶೂಟ್​ ಮಾಡಿ ಸಾಯಿಸುತ್ತೇವೆ. ಬಿಜೆಪಿಯವರಿಗೆ ಇದೇ ಬೇಕಾಗಿರುವುದು, ಹಾಗಾಗಿ ಇನ್ಮುಂದೆ ಯಾರಾದರೂ ಪಾಕಿಸ್ತಾನ ಪರ ಘೋಷಣೆ ಕೂಗಿದರೆ ಸರ್ಕಾರವೇ ಅವರನ್ನು ಗುಂಡಿಟ್ಟು ಸಾಯಿಸಲಿದೆ ಎಂದು ಹೇಳಿದ್ಧಾರೆ.

ಕೆಲ ದಿನಗಳ ಹಿಂದೆ ಬೆಳಗಾವಿಯ ಗೋಕಾಕ್​ನಲ್ಲಿ ಚುನಾವಣಾ ಪ್ರಚಾರದಲ್ಲಿ ಮಾತನಾಡುವ ವೇಳೆ ಪೋಡಿಯಂ ಹೊಡೆದುಹಾಕುವ ಮೂಲಕ ಸಚಿವ ಜಮೀರ್​ ಸುದ್ದಿಯಾಗಿದ್ದರು. ಇದೀಗ ಶೂಟ್​ ಮಾಡುತ್ತೇವೆ ಎಂದು ಹೇಳುವ ಮೂಲಕ ಸಚಿವ ಜಮೀರ್​ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಫೆಬ್ರವರಿ ತಿಂಗಳಲ್ಲಿ ನಡೆದ ರಾಜ್ಯಸಭೆ ಚುನಾವಣೆ ಸಮಯದಲ್ಲಿ ಕಾಂಗ್ರೆಸ್​ ಸದಸ್ಯ ನಾಸೀರ್​ ಹುಸೇನ್​ ಬೆಂಬಲಿಗರು ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್​ ಎಂದು ಘೋಷಣೆ ಕೂಗಿದ್ದರು. ಪ್ರಕರಣ ಸಂಬಂಧ ಪೊಲೀಸರು ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net