

ವಿಜಯಪುರ: ಕರೊನಾಕ್ಕೆ ಯಾರೂ ಭಯ ಪಡಬೇಡಿ. ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಕೆ ಹಾಗೂ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಸಲಹೆ ನೀಡಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಕರೊನಾದೊಂದಿಗೆ ಬದುಕಲು ಕಲಿಯಬೇಕು. ಇದೂ ಕೂಡ ಇನ್ನುಮುಂದೆ ಸಾಮಾನ್ಯ ನೆಗಡಿ, ಜ್ವರ, ಶೀತದಂತೆ ಬಂದು ಹೋಗುತ್ತದೆ. ನಾವು ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಂಡು ಧೈರ್ಯದಿಂದ ಇರಬೇಕು ಎಂದು ಹೇಳಿದ್ದಾರೆ. ಅಲ್ಲದೆ, ಕರೊನಾ ಬಾರದಂತೆ ಮುನ್ನೆಚ್ಚರಿಕೆ ಕ್ರಮವಾಗಿ ತಾವೇನು ಮಾಡುತ್ತಿದ್ದಾರೆ ಎಂಬುದನ್ನೂ ಹೇಳಿದ್ದಾರೆ.
ನಾನು ನನ್ನ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಕಳೆದ ಮೂರು ತಿಂಗಳಿಂದಲೂ ಬೆಳಗ್ಗೆ ಎದ್ದ ಕೂಡಲೇ ಬಿಸಿನೀರಿಗೆ ನಿಂಬೆಹಣ್ಣು, ಅರಿಶಿಣ ಮಿಶ್ರಣ ಮಾಡಿಕೊಂಡು ಕುಡಿಯುತ್ತಿದ್ದೇನೆ. ನೆಗಡಿ, ಜ್ವರ ಬಂದರೆ ವನಸ್ಫತಿ ಔಷಧಿ ಕುಡಿಯಿರಿ ಎಂದು ಮೊದಲು ಹಿರಿಯರು ಹೇಳುತ್ತಿದ್ದರು. ಅದೀಗ ಮತ್ತೆ ಮರುಕಳಿಸಿದೆ. ನಾನಂತೂ ಮೂರು ತಿಂಗಳಿಂದ ಚಹಾ ಸೇವನೆಯನ್ನೇ ಬಿಟ್ಟಿದ್ದೇನೆ. ಅದರ ಬದಲು ನಿಂಬೆಹಣ್ಣು, ಅರಿಶಿಣ, ಬಿಸಿನೀರಿನ ಮಿಶ್ರಣ ಕುಡಿಯುತ್ತಿದ್ದೇನೆ. ತುಳಸಿ, ಅರಿಶಿಣ, ದಾಲ್ಚಿನ್ನಿ ಮತ್ತಿತರ ಪದಾರ್ಥಗಳಿಂದ ನಮ್ಮಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ ಎಂದು ಸಚಿವೆ ತಿಳಿಸಿದ್ದಾರೆ.
ಭಾರತೀಯರಿಗೆ ಕರೊನಾದಿಂದ ಯಾವುದೇ ತೊಂದರೆ ಇಲ್ಲ. ವಿದೇಶಿಗರಿಗೆ ರೋಗ ನಿರೋಧಕ ಶಕ್ತಿ ಇಲ್ಲದ ಕಾರಣ ಅಲ್ಲೆಲ್ಲ ಸಾವು-ನೋವುಗಳು ಹೆಚ್ಚಾಗುತ್ತಿವೆ. ನಮ್ಮಲ್ಲಿನ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಂಡು ಕರೊನಾ ವಿರುದ್ಧ ಹೋರಾಡೋಣ ಎಂದು ಸಲಹೆ ನೀಡಿದ್ದಾರೆ.