

ಪಟನಾ: ಕರೊನಾ ಲಾಕ್ಡೌನ್ನಿಂದಾಗಿ ಮನೆ, ಉದ್ಯೋಗ ಕಳೆದುಕೊಂಡು ಹೊಟ್ಟೆಗಿಲ್ಲದೆ ತೀವ್ರ ಸಂಕಷ್ಟಕ್ಕೀಡಾದವರು ವಲಸೆ ಕಾರ್ಮಿಕರು.
ಪರ ಊರಿನಲ್ಲಿ ಇರಲು ಆಗದೆ ಹೋಚಿಕ್ಕಚಿಕ್ಕ ಮಕ್ಕಳನ್ನು ಎತ್ತಿಕೊಂಡು ನೂರಾರು ಕಿಲೋಮೀಟರ್ ನಡೆದವರು, ದಾರಿ ಮಧ್ಯೆಯೇ ಜೀವ ಕಳೆದುಕೊಂಡವರು ಹಲವಾರು ಮಂದಿ. ಈ ಕರೊನಾ ಶುರುವಾದಾಗಿನಿಂದ ಅದೆಷ್ಟೋ ಮನಕಲಕುವ ಘಟನೆಗಳು ನಡೆದುಹೋಗಿವೆ.
ಈಗ ವಲಸೆ ಕಾರ್ಮಿಕರಿಗೆ ಸಂಬಂಧಪಟ್ಟ ಇನ್ನೊಂದು ಕರುಣಾಜನಕ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವಿಪರೀತ ವೈರಲ್ ಆಗಿದೆ.
ಬಿಹಾರದ ಮುಜಾಫರ್ಪುರದ ರೈಲ್ವೆ ಸ್ಟೇಶನ್ನಲ್ಲಿ ಪುಟ್ಟ ಮಗುವೊಂದು ತನ್ನ ಅಮ್ಮನ ಶವಕ್ಕೆ ಹೊದೆಸಲಾದ ಬಟ್ಟೆಯೊಂದಿಗೆ ಆಟವಾಡುವ ಮನಕಲಕುವ ದೃಶ್ಯ ಇದು. ಆ ಮಗುವಿಗೆ ಗೊತ್ತೇ ಇಲ್ಲ, ತನ್ನಮ್ಮಂಗೆ ಜೀವ ಇಲ್ಲ. ಅವಳು ಇನ್ನು ಏಳಲಾರಳು ಎಂಬುದು...
ಆ ಮಹಿಳೆ ರೈಲ್ವೆ ಸ್ಟೇಶನ್ನ ನೆಲದ ಮೇಲೆ ಜೀವವಿಲ್ಲದೆ ಮಲಗಿದ್ದಾಳೆ. ಆಕೆಯ ಮೈಮೇಲೆ ಒಂದು ಚಾದರಂತಹ ಬಟ್ಟೆ ಹೊದೆಸಲಾಗಿದೆ. ಆಕೆಯ ಪುಟ್ಟ ಮಗು, ಆ ಬಟ್ಟೆಯನ್ನು ಅಮ್ಮನ ಮೈಮೇಲಿಂದ ತೆಗೆಯುತ್ತದೆ. ಅದನ್ನು ತನ್ನ ಮೇಲೆ ಹಾಕಿಕೊಂಡು ಮುಚ್ಚಿಕೊಳ್ಳುತ್ತದೆ. ಮತ್ತದನ್ನು ತೆಗೆದು ಅಲ್ಲಿಯೇ ಇಡುತ್ತದೆ. ಹಾಗೇ ಅಲ್ಲೇ ಸುತ್ತಮುತ್ತ ಓಡಾಡುತ್ತ ಆಟವಾಡುತ್ತದೆ. ಅಮ್ಮನನ್ನು ಎಬ್ಬಿಸುವ ಪ್ರಯತ್ನ ಮಾಡುತ್ತದೆ. ಮಹಿಳೆ ಪಕ್ಕದಲ್ಲಿ ದೊಡ್ಡ ದೊಡ್ಡ ಬ್ಯಾಗ್ಗಳಿವೆ. ಇನ್ನೊಬ್ಬ ಬಾಲಕನನ್ನೂ ವಿಡಿಯೋದಲ್ಲಿ ನೋಡಬಹುದು.
ಗುಜರಾತ್ನಿಂದ ಬಂದ ಶ್ರಮಿಕ್ ರೈಲಿನಲ್ಲಿ ಬಿಹಾರದ ಮುಜಾಫರ್ಪುರ ರೈಲ್ವೆ ಸ್ಟೇಶನ್ಗೆ ಬಂದಿಳಿದ ಈ ಮಹಿಳೆ ಡಿಹೈಡ್ರೇಶನ್ನಿಂದ ಮೃತಪಟ್ಟಿದ್ದಾಳೆ ಎಂದು ವರದಿಯಾಗಿದೆ. ಆಕೆಗೆ ಹಸಿವಾಗಿತ್ತು. ಸಿಕ್ಕಾಪಟೆ ಉಷ್ಣ ವಾತಾವರಣ ಇರುವ ಕಾರಣ ಆಕೆಯ ಜೀವ ಹೋಗಿದೆ ಎನ್ನಲಾಗಿದೆ. ಆದರೆ ಪುಟ್ಟ ಕಂದಮ್ಮನಿಗೆ ಅದೆಲ್ಲ ಏನು ಗೊತ್ತು? ಅದು ತನ್ನ ಪಾಡಿಗೆ ಅಮ್ಮನ ಶವಕ್ಕೆ ಹೊದಿಸಿದ ಬಟ್ಟೆಯೊಂದಿಗೆ ಆಟವಾಡುತ್ತ, ತನ್ನದೇ ಲೋಕದಲ್ಲಿ ಇದೆ.
ಮಹಿಳೆಯ ಕುಟುಂಬದವರು ಹೇಳುವಂತೆ ಆಕೆ ರೈಲಿನಲ್ಲಿಯೇ ಅಸ್ವಸ್ಥಳಾಗಿದ್ದಳು. ಸರಿಯಾಗಿ ನೀರೂ ಸಿಕ್ಕಿರಲಿಲ್ಲ. ಗುಜರಾತ್ನಿಂದ ಹೊರಟಿದ್ದ ರೈಲು ಸೋಮವಾರ ಮುಜಾಫರ್ಪುರವನ್ನು ತಲುಪಿತ್ತು.
ಆಕೆಯ ಶವವನ್ನು ರೈಲ್ವೆ ಸ್ಟೇಶನ್ನಿಂದ ಹೊರಗೆ ಸಾಗಿಸುವಾಗಲೂ ಈ ಪುಟ್ಟ ಮಗು ಅಮ್ಮನ ಹಿಂದೆಯೇ ಹೆಜ್ಜೆ ಹಾಕುತ್ತ ಹೋಗಿದೆ. ಬಳಿಕ ಮತ್ತೋರ್ವ ಬಾಲಕ, ಅಂದರೆ ಮಹಿಳೆಯ ಹಿರಿಯ ಮಗ ಮಗುವನ್ನು ತನ್ನತ್ತ ಎಳೆದುಕೊಂಡು ತಡೆದಿದ್ದಾನೆ ಎಂದು ಸ್ಥಳದಲ್ಲಿ ಇದ್ದವರು ಹೇಳಿದ್ದಾರೆ. (ಏಜೆನ್ಸೀಸ್)