

ಬೆಂಗಳೂರು: ಜನರ ಬಳಿಗೆ ಸರ್ಕಾರವೇ ಬಂದು ಸಮಸ್ಯೆ ಆಲಿಸಬೇಕೆಂಬ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮ ಶುಕ್ರವಾರ ಮತ್ತು ಶನಿವಾರ (ಏ.15 ಮತ್ತು 16) ನಡೆಯಲಿದ್ದು, ಕಂದಾಯ ಸಚಿವ ಆರ್.ಅಶೋಕ್ ಅವರು ಉತ್ತರ ಕನ್ನಡ ಜಿಲ್ಲೆಯ ಹಿಲ್ಲೂರಿನಲ್ಲಿ ವಾಸ್ತವ್ಯ ಮಾಡಲಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಹೊಲನಗದ್ದೆ, ಆಚವೆ, ಹಿಲ್ಲೂರು ಜನರ ಸಮಸ್ಯೆಯನ್ನು ಸಚಿವರು ಆಲಿಸಲಿದ್ದು, ಹಿಲ್ಲೂರಿನಲ್ಲಿ ಮೆಟ್ರಿಕ್ಪೂರ್ವ ವಿದ್ಯಾರ್ಥಿ ನಿಲಯದಲ್ಲಿ ರಾತ್ರಿ ವಾಸ್ತವ್ಯ ಹೂಡಲಿದ್ದಾರೆ. ಕುಮಟಾ ತಾಲೂಕಿನ ಹೊಲನಗದ್ದೆಯಲ್ಲಿ ಜನಸ್ಪಂದನ, ಕುಂದು ಕೊರತೆಗಳ ಪರಿಶೀಲನೆ, ಹರಿಕಂತ್ರಕೇರಿಗೆ ಭೇಟಿ ನೀಡಿ ಸ್ಥಳೀಯರ ಜತೆ ಮಾತುಕತೆ ನಡೆಸಲಿದ್ದಾರೆ.
ಏ.15ರಂದು ಬೆಳಿಗ್ಗೆ 11 ಗಂಟೆಗೆ ಅಚವೆ ಊರಿನ ಕುಂಟಗಣಿ ಗ್ರಾಮದ ಶಾಲಾ ಮೈದಾನದಲ್ಲಿ ವಿವಿಧ ಮಳಿಗೆ ಉದ್ಘಾಟನೆ ಮಾಡಲಿರುವ ಸಚಿವರು, ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಕಂದಾಯ ಇಲಾಖೆ ಹಾಗೂ ಇತರ ಇಲಾಖೆಯ ವತಿಯಿಂದ ವಿವಿಧ ಸೌಲಭ್ಯಗಳ ವಿತರಣೆ ಮಾಡಲಿದ್ದಾರೆ. ಸಂಜೆ 4ಗಂಟೆಗೆ ಅಡಿಕೆ ತೋಟಗಳಿಗೆ ಭೇಟಿ ನೀಡಿ, ಅಡಿಕೆ ಕೊನೆ ಕೊಯ್ಯುವ ಪ್ರಾತ್ಯಕ್ಷಿಕೆ, ಹಾಲಕ್ಕಿ ಮಹಿಳೆಯರ ಜಾನಪದ ಹಾಡು, ಜೇನುಕೃಷಿ ಪ್ರಾತ್ಯಕ್ಷಿಕೆಯಲ್ಲಿ ಭಾಗಿಯಾಗಲಿದ್ದಾರೆ. ಸಂಜೆ 7 ಗಂಟೆಗೆ ಸುಗ್ಗಿ, ಪುಗಡಿ, ಯಕ್ಷಗಾನ ಸಹಿತ ಸ್ಥಳೀಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಳ್ಗೊಳ್ಳಲಿದ್ದಾರೆ. ಏ. 16ರಂದು ಬೆಳಿಗ್ಗೆ ವಸತಿ ನಿಲಯದ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಸಲಿರುವ ಆರ್.ಅಶೋಕ್, 10ಗಂಟೆಗೆ ಯಲ್ಲಾಪುರ ತಾಲೂಕಿನ ಹೊಸಳ್ಳಿ ಗ್ರಾಮದ ಗೌಳಿ ಕಾಲೋನಿಗೆ ಭೇಟಿ ನೀಡಿ, ಕುಂದುಕೊರತೆಗಳ ಕುರಿತು ಜನರೊಂದಿಗೆ ಸಂವಾದ ನಡೆಸಲಿದ್ದಾರೆ. ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ದಿನಕರ ಶೆಟ್ಟಿ, ಸುನೀಲ್ ನಾಯ್ಸ್ ರೂಪಾಲಿ ನಾಯ್ಕ್ ಹಾಗೂ ಜಿಲ್ಲಾಧಿಕಾರಿಗಳು ಭಾಗವಹಿಸಲಿದ್ದಾರೆ.
24 ತಾಸು ಹಳ್ಳಿಯಲ್ಲೇ ವಾಸ: ರಾಜ್ಯಾದ್ಯಂತ ಎಲ್ಲ ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿಗಳು, ತಹಸೀಲ್ದಾರರು ಸಹ ಹಳ್ಳಿಗಳಿಗೆ ತೆರಳಿ ಜನರ ಸಮಸ್ಯೆಗಳನ್ನು ಪರಿಹಾರ ಮಾಡಲಿದ್ದಾರೆ. 24 ಗಂಟೆಗಳ ಕಾಲ ಹಳ್ಳಿಯಲ್ಲಿಯೇ ಇದ್ದು, ಎಲ್ಲ ಅರ್ಜಿಗಳನ್ನು ಕಡ್ಡಾಯವಾಗಿ ಅಲ್ಲಿಯೇ ವಿಲೇವಾರಿ ಮಾಡುವುದು ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಕಾರ್ಯಕ್ರಮದ ವಿಶೇಷತೆ.