ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ದುರುಪಯೋಗ ಪ್ರಕರಣ; ಸಚಿವ ನಾಗೇಂದ್ರ ಹೇಳಿದ್ದಿಷ್ಟು

B Nagendra
Published on

ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ಅವ್ಯವಹಾರ ಆರೋಪ ಹಾಗೂ ನಿಗಮದ ಅಧೀಕ್ಷಕನ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಸಚಿವ ಬಿ. ನಾಗೇಂದ್ರ ಹಣ ವರ್ಗಾವಣೆ ಆಗಿದೆ ಎಂದು ಹೇಳಿದ್ದಾರೆ.

ವಿಧಾನಸೌಧದಲ್ಲಿ ಈ ಕುರಿತು ಸುದ್ದಿಗೋಷ್ಠಿ ಉದ್ಧೇಶಿಸಿ ಮಾತನಾಡಿದ ಸಚಿವ ನಾಗೇಂದ್ರ, ಅಧೀಕ್ಷಕರ ಆತ್ಮಹತ್ಯೆ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದೆ. ಹಣ ಹೇಗೆ ದುರುಪಯೋಗ ಆಗಿದೆ ಎಂಬುದರ ಬಗ್ಗೆ ತನಿಖೆಯಾಗುತ್ತಿದೆ ಎಂದು ತಿಳಿಸಿದ್ದಾರೆ.

ಸುಮಾರು 87 ಕೋಟಿ ರೂ. ಹಣ ವರ್ಗಾವಣೆ ಮಾಡಲಾಗಿದೆ. ಈಗಾಗಲೇ 23 ಕೋಟಿ ಹಣ ನಿಗಮದ ಖಾತೆಗೆ ವಾಪಸ್​ ಆಗಿದೆ. ಬಾಕಿ ಉಳಿದ ಹಣವನ್ನು ನಿಗಮದ ಖಾತೆಗೆ ಮರು ವರ್ಗಾವಣೆ ಮಾಡುವಂತೆ ಈಗಾಗಲೇ ಬ್ಯಾಂಕ್​ ಅಧಿಕಾರಿಗಳ ಜೊತೆ ಮಾತನಾಡಿಲಾಗಿದೆ. ಸಂಜೆಯೊಳಗೆ ಉಳಿದ 50 ಕೋಟಿ ರೂ. ಹಣ ಜಮೆ ಆಗುತ್ತದೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕ ಆತ್ಮಹತ್ಯೆ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲಾಗಿದೆ. ಹೇಗೆ ಹಣ ದುರುಪಯೋಗ ಆಗಿದೆ ಎಂಬುವುದರ ಬಗ್ಗೆ ಪರಿಶೀಲನೆ ನಡೆಯುತ್ತಿದೆ.

ವಾಲ್ಮೀಕಿ ಅಭಿವೃದ್ಧಿ ನಿಗಮದ ಎಂಡಿ ಕೂಡ ದೂರು ನೀಡಿದ್ದಾರೆ. ಬ್ಯಾಂಕ್ ಅಧಿಕಾರಿಗಳು ಕೂಡ ಇದರಲ್ಲಿ ಶಾಮೀಲಾದಂತೆ ಕಾಣುತ್ತಿದೆ. ನಮ್ಮ ಇಲಾಖೆ ಅಧಿಕಾರಿಗಳ ವಿರುದ್ಧ ದೂರು ದಾಖಲಾಗಿದೆ. ಪ್ರಕರಣದ ಬಗ್ಗೆ ಮುಖ್ಯಮಂತ್ರಿಗಳು ಕೂಡ ಮಾಹಿತಿ ಪಡೆದುಕೊಂಡಿದ್ದಾರೆ. ಒಂದು ಬ್ಯಾಂಕ್ ನಿಂದ ಇನ್ನೊಂದು ಬ್ಯಾಂಕ್​ಗೆ ಹಣ ವರ್ಗಾವಣೆಯಾದ ಬಗ್ಗೆ ನಿಗಮದ ಎಂಡಿ ಅವರ ಗಮನಕ್ಕೂ ಬಂದಿಲ್ಲ. ನಿಗಮದ ಎಂಡಿಯವರ ಸಹಿ ಎಫ್​ಎಸ್​ಎಲ್​ಗೆ ಕಳುಹಿಸಿದ್ದೇವೆ. ಅದು ಎಂಡಿ ಪದ್ಮನಾಭ್ ಅವರ ಸಹಿಯೇ ಅಂತ ಗೊತ್ತಾದರೆ ಅವರನ್ನು ವಜಾ ಮಾಡುತ್ತೇವೆ. ಇದರಲ್ಲಿ ಯಾರ ಕೈವಾಡ ಇದೆ ಅದನ್ನು ಪತ್ತೆ ಹೆಚ್ಚುತ್ತೇವೆ. ಸಿಐಡಿ ಈಗಾಗಲೇ ತನಿಖೆ ಆರಂಭಿಸಿದೆ ಎಂದು ಹೇಳಿದ್ದಾರೆ.

ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತೇವೆ. ಬಿಜೆಪಿಯವರು ಕೇಳುತ್ತಿರುವುದು ಅವರ ಪ್ರಕಾರ ಸರಿ ಇರಬಹುದು. ಆದರೆ ಇದರಲ್ಲಿ ನನ್ನ ಪಾತ್ರ ಇಲ್ಲ. ಇದರಲ್ಲಿ ನನ್ನ ಪಾತ್ರ ಇಲ್ಲ, ರಾಜೀನಾಮೆ ಕೊಡುವ ಪ್ರಶ್ನೆಯೇ ಬರಲ್ಲ. ವಾಲ್ಮೀಕಿ ಅಭಿವೃದ್ಧಿ ನಿಗಮದ ಎಂಡಿ ವಿರುದ್ಧ ಕ್ರಮ ಆಗಿಯೇ ಆಗುತ್ತದೆ ಎಂದು ಸಚಿವ ಬಿ. ನಾಗೇಂದ್ರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net