ಇಂತಹವರಿಗೆ ಸರ್ಕಾರ ತಕ್ಕ ಪಾಠ ಕಲಿಸಬೇಕು: ಸಚಿವ ಡಾ. ಎಂ.ಸಿ. ಸುಧಾಕರ್

ವಿಜಯವಾಣಿ-21
Published on

ಚಿಕ್ಕಬಳ್ಳಾಪುರ: ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್​ಗೆ ರಾಜಾತಿಥ್ಯ ನೀಡಲಾಗಿದೆ ಎಂಬ ಪ್ರಕರಣದಡಿ ಇದೀಗ ಏಳು ಪೊಲೀಸ್ ಅಧಿಕಾರಿಗಳನ್ನು ತಕ್ಷಣವೇ ಕರ್ತವ್ಯದಿಂದ ಸಸ್ಪೆಂಡ್ ಮಾಡಲಾಗಿದ್ದು, ಇಷ್ಟಕ್ಕೆಲ್ಲಾ ಕಾರಣ ಯಾರು? ಜೈಲಿನೊಳಗೆ ಇಂತಹ ವ್ಯವಸ್ಥೆ ಮಾಡಿಕೊಟ್ಟಿದ್ಯಾರು ಎಂಬ ಹಲವು ಪ್ರಶ್ನೆಗಳು ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಇನ್ನು ಈ ಕುರಿತು ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್, ಪ್ರಕರಣದ ತನಿಖೆಯನ್ನು ಹಿರಿಯ ಅಧಿಕಾರಿಗಳು ಕೈಗೊಂಡಿದ್ದಾರೆ ಎಂದರು.

ಈ ಬಗ್ಗೆ ಹಿರಿಯ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಒಂದು ವೇಳೆ ಪ್ರಕರಣದಲ್ಲಿ ತಪ್ಪು ಕಂಡು ಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳುತ್ತಾರೆ. ಕೆಲವು ಬೇಜವಾಬ್ದಾರಿ ಅಧಿಕಾರಿಗಳಿಂದ ಸರ್ಕಾರಕ್ಕೆ ಆಗಾಗ ಕೆಟ್ಟ ಹೆಸರು ಬರುತ್ತದೆ. ಇಂತಹವರಿಗೆ ಸರ್ಕಾರವು ತಕ್ಕ ಪಾಠ ಕಲಿಸಬೇಕಾಗಿದೆ. ದರ್ಶನ್ ರಾಜಾತಿಥ್ಯದ ಬಗ್ಗೆ ತನಿಖೆಯಿಂದ ಮೊದಲು ತಪ್ಪು ಯಾರದ್ದು ಎನ್ನುವುದು ತಿಳಿಯಬೇಕು ಎಂದರು.

ಇನ್ನು ಶೋಷಿತರ ಒಕ್ಕೂಟದಿಂದ ರಾಜಭವನ ಚಲೋ ಹೋರಾಟದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಜನಪರ ನಾಯಕನಿಗೆ ಸಮುದಾಯಗಳು ಬೆಂಬಲ ನೀಡುವುದು ಸಹಜ. ಸಿಎಂ ಸಿದ್ದರಾಮಯ್ಯ ವಿಚಾರವಾಗಿ ರಾಜ್ಯಪಾಲರು ತೋರುತ್ತಿರುವ ಧೋರಣೆಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net