ಸಚಿವ ಕೆ.ಎಚ್.ಮುನಿಯಪ್ಪಗೆ ಜಾಮೀನು

minister Muniyappa
Published on

ಬೆಂಗಳೂರು: ವಿಧಾನಸಭಾ ಚುನಾವಣೆ ವೇಳೆ ಕೆಜಿಎ್ನಲ್ಲಿ ನಡೆದ ಗಲಾಟೆ ಪ್ರಕರಣದಲ್ಲಿ 2ನೇ ಆರೋಪಿ ಆಗಿರುವ ಆಹಾರ ಸಚಿವ ಕೆ.ಎಚ್. ಮುನಿಯಪ್ಪಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

2013ರ ವಿಧಾನಸಭಾ ಚುನಾವಣೆ ವೇಳೆ ಕೆಜಿಎಫ್‌ನ ಅಭ್ಯರ್ಥಿಯಾಗಿದ್ದ ವಿ. ಶಂಕರ್ ಮೇಲೆ, ಆಗ ಸಂಸದರಾಗಿದ್ದ ಮುನಿಯಪ್ಪ ಮತ್ತು ಬೆಂಬಲಿಗರು ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಹಲ್ಲೆ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಮುನಿಯಪ್ಪ ಹಾಜರಾಗದೆ ಇದ್ದಿದ್ದಕ್ಕೆ, ಬಂಧನ ವಾರಂಟ್ ಹೊರಡಿಸುವುದಾಗಿ ನ್ಯಾಯಮೂರ್ತಿ ಸಂತೋಷ್ ಗಜಾನನ ಭಟ್ ಎಚ್ಚರಿಕೆ ನೀಡಿದರು. ಈ ಹಿನ್ನೆಲೆಯಲ್ಲಿ ಬುಧವಾರ ಮುನಿಯಪ್ಪ ಮತ್ತು ಲಕ್ಷ್ಮೀನಾರಾಯಣ ನ್ಯಾಯಾಲಯಕ್ಕೆ ಹಾಜರಾಗಿದ್ದರು.

ವಿಚಾರಣೆ ನಡೆಸಿದ ನ್ಯಾಯಾಧೀಶರು, ಕಾನೂನಿನ ದೃಷ್ಟಿಯಲ್ಲಿ ಜಾಮೀನು ಕೊಡುವುದಕ್ಕೆ ಆಗಲ್ಲ. ಕಸ್ಟಡಿಗೆ ಕೊಡೋಣ ಎಂದರು. ಆದರೆ, ಜಾಮೀನು ಮಂಜೂರು ಮಾಡುವಂತೆ ಮುನಿಯಪ್ಪ ಪರ ವಕೀಲರು ಮನವಿ ಮಾಡಿದರು. ಇದಕ್ಕೆ ನ್ಯಾಯಾಧೀಶರು, ಕಾನೂನಿನಲ್ಲಿ ಅವಕಾಶ ಇದ್ದರೆ ಹೇಳಿ ಎಂದು ಪ್ರಶ್ನಿಸಿದರು. ನಿರೀಕ್ಷಣಾ ಜಾಮೀನಿಗೆ ಅರ್ಜಿ ಹಾಕಿದ್ದೀರಿ. ಮ್ಯಾಜಿಸ್ಟ್ರೇಟ್ ಮುಂದೆ ಹಾಕಿದ ಹಾಗೆ ಅರ್ಜಿ ಹಾಕಿದ್ದೀರಿ ಎಂದು ವಕೀಲರನ್ನು ತರಾಟೆ ತೆಗೆದುಕೊಂಡರು.

ಬಳಿಕ ಮುನಿಯಪ್ಪಗೆ 50 ಸಾವಿರ ರೂ. ಶ್ಯೂರಿಟಿ ವಿಧಿಸಿ ಜಾಮೀನು ಮಂಜೂರು ಮಾಡಿದರು. ಪ್ರಕರಣದ ಮತ್ತೋರ್ವ ಆರೋಪಿ ಲಕ್ಷ್ಮೀ ನಾರಾಯಣ್‌ನ್ನು ಕಸ್ಟಡಿಗೆ ನೀಡಿ ಆದೇಶಿಸಿದರು.

2013ರ ಚುನಾವಣೆ ವೇಳೆ ಮುನಿಯಪ್ಪ ಮತ್ತು ಬೆಂಬಲಿಗರು ಹಲ್ಲೆ ನಡೆಸಿ ನಿಂದಿಸಿದರು ಎಂದು ಆರೋಪಿಸಿ ವಿ.ಶಂಕರ್, ರಾಬರ್ಟ್‌ಸನ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದರ ಅನ್ವಯ ಮುನಿಯಪ್ಪ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಿದ ಪೊಲೀಸರು, ತನಿಖೆ ವೇಳೆ ಸ್ಥಳದಲ್ಲಿ ಮುನಿಯಪ್ಪ ಇರಲಿಲ್ಲ ಎಂದು ಕೋರ್ಟ್‌ಗೆ ಬಿ ರಿಪೋರ್ಟ್ ಸಲ್ಲಿಸಿದ್ದರು. ಇದನ್ನು ದೂರುದಾರ ವಿ.ಶಂಕರ್, ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ, ಆರೋಪಿಗಳಿಗೆ ನೋಟಿಸ್ ಜಾರಿ ಮಾಡಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net