ಬೈಡೆನ್​ ಭೋಜನಕೂಟದಲ್ಲಿ ಬಗೆ ಬಗೆಯ ಖಾದ್ಯ: ಪ್ರಧಾನಿ ಮೋದಿಗಾಗಿ ಸಿದ್ಧವಾದ ಊಟ ಮೆನು ಹೀಗಿದೆ…

PM Modi
Published on

ವಾಷಿಂಗ್ಟನ್​: ಅಂತಾರಾಷ್ಟ್ರೀಯ ಯೋಗ ದಿನದಂದು ನ್ಯೂಯಾರ್ಕ್‌ನ ವಿಶ್ವಸಂಸ್ಥೆಯ ಕಟ್ಟಡದಲ್ಲಿ ಯೋಗ ಕಾರ್ಯಕ್ರಮವನ್ನು ಮುನ್ನಡೆಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕದಲ್ಲಿ ತಮ್ಮ 2ನೇ ದಿನವನ್ನು ಪ್ರಾರಂಭಿಸಿದರು. ಸದ್ಯ ರಾಜಧಾನಿ ವಾಷಿಂಗ್ಟನ್​ನಲ್ಲಿರುವ ಮೋದಿ, ಅಧ್ಯಕ್ಷ ಜೋ ಬೈಡೆನ್​ ಅವರೊಂದಿಗೆ ಭೋಜನಕೂಟದಲ್ಲಿ ಭಾಗಿಯಾಗಿ ಬಗೆಬಗೆಯ ಆಹಾರವನ್ನು ಸವಿದಿದ್ದು, ಭಾರತೀಯ ಕಾಲಮಾನ ಪ್ರಕಾರ ಇಂದು ಸಂಜೆ ಅವರು ಯುಎಸ್​ ಕಾಂಗ್ರೆಸ್​ ಉದ್ದೇಶಿಸಿ ಮಾತನಾಡಲಿದ್ದಾರೆ.

ವಾಷಿಂಗ್ಟನ್​ಗೆ ತಲುಪಿದ ಪ್ರಧಾನಿ ಮೋದಿ ಅವರನ್ನು ಆಂಡ್ರ್ಯೂಸ್ ವಾಯುನೆಲೆಯಲ್ಲಿ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಈ ವೇಳೆ ಉಭಯ ರಾಷ್ಟ್ರಗಳ ರಾಷ್ಟ್ರಗೀತೆಯನ್ನೂ ಸಹ ಹಾಡಲಾಯಿತು. ಬಳಿಕ ವಾಷ್ಟಿಂಗ್ಟನ್​ ಡಿಸಿ ತಲುಪಿದ ಮೋದಿಗೆ ಭಾರತೀಯ ಸಮುದಾಯದವರು ಭವ್ಯ ಸ್ವಾಗತ ಕೋರಿದರು. ಇದಾದ ನಂತರ ಶ್ವೇತಭವನ ತಲುಪಿದ ಮೋದಿ ಅವರನ್ನು ಅಧ್ಯಕ್ಷ ಜೋ ಬೈಡೆನ್​ ಮತ್ತು ಪ್ರಥಮ ಮಹಿಳೆ ಜಿಲ್​ ಬೈಡೆನ್​ ಆತ್ಮೀಯವಾಗಿ ಬರಮಾಡಿಕೊಂಡರು.

ಈ ಬಗ್ಗೆ ಟ್ವೀಟ್​ ಮಾಡಿರುವ ಪ್ರಧಾನಿ ಮೋದಿ ನವಿಲುಗಳು ಮತ್ತು ಕಮಲದ ಹೂವುಗಳಿಂದ ಅಲಂಕರಿಸಲ್ಪಟ್ಟ ವೈಟ್​ಹೌಸ್​ಗೆ ಜೋ ಬೈಡೆನ್​ ಮತ್ತು ಜಿಲ್​ ಬೈಡೆನ್ ನನ್ನನ್ನು​ ಸ್ವಾಗತಿಸಿದರು. ಸಸ್ಯಹಾರಿ ಭೋಜಕೂಟವನ್ನು ಆಯೋಜಿಸಿದ್ದಾರೆ ಎಂದು ತಿಳಿಸಿದ್ದಾರೆ.

ವಿಶೇಷ ಮೆನು

ಪ್ರಧಾನಿ ಮೋದಿಗಾಗಿ ವಿಶೇಷವಾದ ಬಗೆಬಗೆಯ ಖಾದ್ಯಗಳು ತಯಾರಾಗಿದ್ದವು. ಭೋಜನದ ಮೆನುವಿನಲ್ಲಿ ಏನೇನಿತ್ತು ಎಂದು ನೋಡುವುದಾದರೆ, ನಿಂಬೆ-ಸಬ್ಬಸಿಗೆ ಮೊಸರು ಸಾಸ್, ಗರಿಗರಿಯಾದ ಮಿಲೆಟ್​ ಕೇಕ್​ಗಳು, ಸಮ್ಮರ್​ ಸ್ಕ್ವ್ಯಾಷ್, ನೆನೆಸಿದ ಕಾಳುಗಳು, ಗ್ರಿಲ್ಡ್​ ಕಾರ್ನ್​ ಕಿರ್ನೆಲ್ ಸಲಾಡ್​, ಕಲ್ಲಂಗಡಿ, ಆವಕಾಡೋ ಸಾಸ್, ಅಣಬೆ, ಗುಲಾಬಿ ಮತ್ತು ಏಲಕ್ಕಿ ತುಂಬಿದ ಸ್ಟ್ರಾಬೆರಿ ಶಾರ್ಟ್‌ಕೇಕ್ ಹಾಗೂ ಕೇಸರಿ ಕೆನೆ ತುಂಬಿದ ರಿಸೊಟ್ಟೊ ಮುಂತಾದವುಗಳು ಇದ್ದವು.

ವಿಶ್ವಸಂಸ್ಥೆಯಲ್ಲಿ ಯೋಗ

ಬುಧವಾರ ನ್ಯೂಯಾರ್ಕ್​ನಲ್ಲಿರುವ ಜಾಗತಿಕ ವೇದಿಕೆಯಾದ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ನಡೆದ ಯೋಗ ದಿನಾಚರಣೆಯನ್ನು ಪ್ರಧಾನಿ ನರೇಂದ್ರ ಮೋದಿ ಮುನ್ನಡೆಸಿದರು. ಭಾರತ ಮೂಲದ ಯೋಗಕ್ಕೆ ಅಂತಾರಾಷ್ಟ್ರೀಯ ಮನ್ನಣೆ ದೊರೆತ 9 ವರ್ಷದ ತರುವಾಯ ಯೋಗಕ್ಕೆ ಈ ಮನ್ನಣೆ ಸಿಗಲು ಕಾರಣೀಕರ್ತರಾದ ಪ್ರಧಾನಿ ಮೋದಿ ಇದೇ ಮೊದಲ ಬಾರಿಗೆ ವಿಶ್ವಸಂಸ್ಥೆಯಲ್ಲಿ ಭಾಗಿಯಾಗಿ ಐತಿಹಾಸಿಕ ದಾಖಲೆ ಬರೆದರು.

ಯೋಗ ಕಾರ್ಯಕ್ರಮದಲ್ಲಿ ನಮಸ್ತೆ ಎನ್ನುವ ಮೂಲಕ ಮಾತು ಆರಂಭಿಸಿದ ಪ್ರಧಾನಿ, ನಿಮ್ಮನ್ನೆಲ್ಲ ಇಲ್ಲಿ ನೋಡಿ ಬಹಳ ಖುಷಿ ಆಗಿದೆ. ವಿಶ್ವದ ಎಲ್ಲ ದೇಶಗಳ ಜನರ ಪ್ರಾತಿನಿಧ್ಯ ಇಲ್ಲಿದೆ. ನಿಮಗೆಲ್ಲರಿಗೂ ಧನ್ಯವಾದ ಎಂದರು. ಯೋಗದ ಹುಟ್ಟು ಭಾರತದಲ್ಲಾದರೂ ಅದು ನೈಜವಾಗಿ ಸಾರ್ವತ್ರಿಕವಾಗಿದ್ದು, ಯಾವುದೇ ಹಕ್ಕುಸ್ವಾಮ್ಯ, ಪೇಟೆಂಟ್, ರಾಯಧನದಿಂದ ಮುಕ್ತವಾಗಿದೆ. ಹಾಗೆಯೇ ಯೋಗವನ್ನು ಯಾವುದೇ ವಯೋಮಾನದವರು ಲಿಂಗಭೇದವಿಲ್ಲದೆ ಇಲ್ಲಿ ಬೇಕಾದರೂ ಆಚರಿಸಬಹುದು. ಆಧುನಿಕ ಬದುಕಿನ ಭಾಗವಾದ ಫಿಟ್​ನೆಸ್​ಗೂ ಇದು ಪರಿಣಾಮಕಾರಿಯಾದ ಮಾರ್ಗ ಆಗಿದೆ’ ಎಂದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net