More

    ಸತ್ಮೇಲೆ ದುಡ್ಡು ಬರೋದಾದ್ರೆ ನಮಗ್ಯಾಕೆ? – ಮನೆಗೆಲಸದ ಹೆಣ್ಣುಮಕ್ಕಳ ಅಳಲು

    ದಾವಣಗೆರೆ: ಅಂಬೇಡ್ಕರ್ ಕಾರ್ಮಿಕ ಸಹಾಯಹಸ್ತ ಯೋಜನೆಯಡಿ ಸ್ಮಾರ್ಟ್‌ಕಾರ್ಡ್ ಬಂದು ಆರು ತಿಂಗಳಾದರೂ ಒಂದೂ ಸೌಲಭ್ಯ ಬಂದಿಲ್ಲ, ಯಾರನ್ನು ಕೇಳೋದು? ನಾವ್ ಸತ್ಮೇಲೆ ದುಡ್ಡು ಕೊಡೋದಾದ್ರೆ ಅದನ್ನೇಕೆ ಮಾಡಬೇಕು?
    ಕೋವಿಡ್ ಸಂದರ್ಭದಲ್ಲಿ ನಮಗೆ 2 ಸಾವಿರ ರೂ. ಖಾತೆಗೆ ಹಾಕುವುದಾಗಿ ಹೇಳಿದ್ದರು, ಬಹುತೇಕರಿಗೆ ಬಂದಿಲ್ಲ. ನಾವು ಬಡವರು ನಿಜ. ಆದರೆ ನಾವು ಕೆಲಸ ಮಾಡುವ ಮನೆಗಳಲ್ಲಿ ನಮಗೂ ಗೌರವ ಸಿಗಬೇಕು. ಸರ್ಕಾರಿ ನೌಕರರಿಗೆ ವಾರದ ರಜೆ ಇದೆ, ನಮಗೇಕಿಲ್ಲ..?
    ನಾವು ಮತ್ತೊಬ್ಬರ ಮನೆಯನ್ನು ಸ್ವಚ್ಛ ಮಾಡುತ್ತೇವೆ. ನಾವಿಲ್ಲವಾದ್ರೆ ಮನೆ ನೀಟಾಗಿರಲ್ಲ. ನಮಗೂ ಮನೆ ಇವೆ ಎಂದು ಆ ಮಾಲೀಕರಿಗೆ ಏಕೆ ಅನ್ನಿಸುವುದಿಲ್ಲ. ನಮಗೆ ರಜೆ ಕೂಡ ಸಿಗುವುದಿಲ್ಲ. ಕಿರುಕುಳ ಆಗುತ್ತದೆ, ಏನು ಮಾಡೋದು..? ನಮಗೆ ಇಲ್ಲಿಯೇ ಸುರಕ್ಷತೆ ಇಲ್ಲದಿರುವಾಗ ವಲಸೆ ಕಾರ್ಮಿಕರಿಗೆ ಅಧಿಕಾರಿಗಳು ಹೇಗೆ ಸುರಕ್ಷತೆ ಕಲ್ಪಿಸುತ್ತಾರೆ?
    ಅಂತಾರಾಷ್ಟ್ರೀಯ ಗೃಹ ಕಾರ್ಮಿಕರ ವೃತ್ತಿ ಸಂಘಟನೆ ಜಿಲ್ಲಾ ಘಟಕದ ಸಹಯೋಗದಲ್ಲಿ ನಗರದ ರೋಟರಿ ಬಾಲಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿಶ್ವ ಗೃಹ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮನೆಗೆಲಸ ಮಾಡುವ ಸುಜಾತಮ್ಮ ಮತ್ತಿತರರು ಹೇಳಿಕೊಂಡ ಸಂಕಷ್ಟಗಳಿವು.
    ಕಟ್ಟಡ ಕಾರ್ಮಿಕರ ಮಂಡಳಿ ಮಾದರಿಯಂತೆ ಗೃಹ ಕಾರ್ಮಿಕರ ಕಲ್ಯಾಣ ಮಂಡಳಿ ಸ್ಥಾಪಿಸಬೇಕು. ನಮ್ಮನ್ನೂ ಕಾರ್ಮಿಕರಂತೆ ಪರಿಗಣಿಸಬೇಕು. ಗೃಹ ಕಾರ್ಮಿಕರಿಗೆ ಸಾಮಾಜಿಕ ಸುರಕ್ಷತೆಯ ಪಿಎಫ್, ಐಎಸ್‌ಐ, ಪಿಂಚಣಿ, ವೈದ್ಯಕೀಯ ಸೌಕಭ್ಯ ಕಲ್ಪಿಸಬೇಕು. ಕನಿಷ್ಠ ವೇತನ ನೀಡಬೇಕು ಎಂದು ಸಂಘಟನೆ ಕಾರ್ಯಕರ್ತೆ ನಾಗಮ್ಮ ಒತ್ತಾಯಿಸಿ, ಹಾಜರಿದ್ದ ಕಾರ್ಮಿಕ ಇಲಾಖೆ ಸಿಬ್ಬಂದಿಗೆ ಮನವಿಪತ್ರ ಸಲ್ಲಿಸಿದರು. ಇವರ ಮನವಿ ಕೇಳಿಸಿಕೊಳ್ಳಲು ಆಹ್ವಾನಪತ್ರಿಕೆಯಲ್ಲಿದ್ದ ಜನಪ್ರತಿನಿಧಿಗಳು, ಅಧಿಕಾರಿಗಳೇ ಇರಲಿಲ್ಲ!
    ಅಖಿಲ ಕರ್ನಾಟಕ ಗೃಹ ಕಾರ್ಮಿಕರ ಚಳುವಳಿ ಸಹ ಸಂಯೋಜಕ ಜರ್ಸನ್ ಮಾತನಾಡಿ ಅಸಂಘಟಿತ ವಲಯದ ಗೃಹ ಕಾರ್ಮಿಕ ಮಹಿಳೆಯರು ನೋಂದಣಿಯಾಗಿ ಸಂಘಟಿತರಾದರೆ ಮಾತ್ರ ಹಕ್ಕುಗಳನ್ನು ಪಡೆಯಬಹುದು ಎಂದು ತಿಳಿಸಿದರು.
    ಭುವನೇಶ್ವರಿ ಕಟ್ಟಡ ಕರ್ಮಿಕ ಸಂಘಟನೆ ಕಾರ್ಯಕರ್ತೆ ಶಿಲ್ಪಾ ಮಾತನಾಡಿ ಕಟ್ಟಡ ಕಾರ್ಮಿಕರಿಗೆ ಅನೇಕ ಸೌಲಭ್ಯಗಳಿವೆ. ಗೃಹ ಕಾರ್ಮಿಕರಿಗೆ ಕಾರ್ಡ್‌ಗಳಿದ್ದರೂ ಉಪಯೋಗವಿಲ್ಲವಾಗಿದೆ. ಗೃಹ ಕಾರ್ಮಿಕರು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದು ತಿಳಿಸಿದರು.
    ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಾರ್ಮಿಕ ಇಲಾಖೆ ಸಿಬ್ಬಂದಿ ಗೋಪಾಲಸ್ವಾಮಿ ಮಾತನಾಡಿ, ಕಾರ್ಮಿಕ ಇಲಾಖೆಯಲ್ಲಿ ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆಯಡಿ ಸ್ಮಾರ್ಟ್‌ಕಾರ್ಡ್ ನೀಡಲಾಗಿದೆ. ಈ ವ್ಯಾಪ್ತಿಗೆ ಬರುವ ಗೃಹ ಕಾರ್ಮಿಕರಿಗೆ ಸೌಲಭ್ಯ ವಿತರಿಸುವ ಬಗ್ಗೆ ಇಲಾಖೆಯಿಂದ ಆದೇಶ ಬಂದಿಲ್ಲ. ಕೆಲವು ಯೋಜನೆಗಳಡಿ ಇತರೆ ಕಾರ್ಮಿಕರು ಅಪಘಾತಕ್ಕೀಡಾದಲ್ಲಿ ಹಣ ಬರಲಿದೆ ಎಂದರು.
    ಅಖಿಲ ಕರ್ನಾಟಕ ಗೃಹ ಕಾರ್ಮಿಕರ ಚಳವಳಿ ಸಹ ಸಂಯೋಜಕಿ ಸಿಸ್ಟರ್ ನಿಶಾ, ಮುಖಂಡರಾದ ನಾಗರಾಜ್, ಬೊಮ್ಮಣ್ಣ, ಅಂತಾರಾಷ್ಟ್ರೀಯ ಗೃಹ ಕಾರ್ಮಿಕರ ವೃತ್ತಿ ಸಂಘಟನೆ ಜಿಲ್ಲಾಧ್ಯಕ್ಷೆ ರಂಗಮ್ಮ, ಕಾರ್ಯಕರ್ತೆಯರಾದ ವಿ.ಲಕ್ಷ್ಮೀ, ದುಗ್ಗಮ್ಮ, ಚಿತ್ರಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts