ಹೂಡಿಕೆ ಭರವಸೆ: ಸೆಮಿಕಂಡಕ್ಟರ್ ಟೆಸ್ಟಿಂಗ್ ಘಟಕ ಸ್ಥಾಪನೆಗೆ ಸಮ್ಮತಿ

Micron
Published on

ಮೈಕ್ರಾನ್ ಸಂಸ್ಥೆಯ ಸೆಮಿಕಂಡಕ್ಟರ್ ಟೆಸ್ಟಿಂಗ್ ಮತ್ತು ಪ್ಯಾಕೇಜಿಂಗ್ ಘಟಕ ಸ್ಥಾಪಿಸಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದ್ದು, 2.7 ಶತಕೋಟಿ ಡಾಲರ್ (22,142 ಕೋಟಿ ರೂಪಾಯಿ) ಹೂಡಿಕೆ ಈ ವಲಯದಲ್ಲಿ ಆಗುವ ನಿರೀಕ್ಷೆ ಮೂಡಿದೆ. ಮೊಬೈಲ್​ಫೋನ್ ತಯಾರಕ ಆಪಲ್ ಸಂಸ್ಥೆಯ ನಂತರ ಮಾಹಿತಿ ತಂತ್ರಜ್ಞಾನದ ಇನ್ನೊಂದು ಜಾಗತಿಕ ಸಂಸ್ಥೆ ಗೂಗಲ್ ಕೂಡ ಭಾರತದಲ್ಲಿ ಹೂಡಿಕೆಗೆ ಆಸಕ್ತಿ ತೋರಿದೆ. ಟೆಸ್ಲಾ ಕೂಡ ಭಾರತಕ್ಕೆ ಬರಲು ಸಿದ್ಧವಾಗಿದೆ ಎಂದು ವಿಶ್ವದ ಕುಬೇರ ಎಲಾನ್ ಮಸ್ಕ್ ಘೋಷಿಸಿದ್ದಾರೆ. ಷೇರು ಮಾರುಕಟ್ಟೆ ಸೂಚ್ಯಂಕವು ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದ್ದು, ಬಿಎಸ್​ಇ ಸೂಚ್ಯಂಕವು 63,523 ಅಂಕಗಳ ಉತ್ತುಂಗಕ್ಕೆ ತಲುಪಿದೆ.

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕಕ್ಕೆ ಭೇಟಿ ಕೈಗೊಂಡಿರುವ ಸಂದರ್ಭದಲ್ಲಿಯೇ ಜರುಗಿರುವ ಈ ಬೆಳವಣಿಗೆಗಳು ದೇಶದ ಆರ್ಥಿಕ ವಲಯದ ಸಕಾರಾತ್ಮಕತೆಯ ನೋಟವನ್ನು ಬಿಂಬಿಸುತ್ತವೆ. ಪ್ರಸ್ತುತ ವಿಶ್ವದಲ್ಲಿಯೇ ವೇಗವಾಗಿ ಬೆಳವಣಿಗೆ ಸಾಧಿಸು ತ್ತಿರುವ ಆರ್ಥಿಕತೆಯಾಗಿ ಹೊರಹೊಮ್ಮಿರುವ ಭಾರತವು ಇದೇ ಪ್ರಗತಿಯನ್ನು ಮುಂದುವರಿಸಿ ಕೊಂಡು ಹೋಗುವ ಆಶಾಕಿರಣವನ್ನು ಈ ಬೆಳವಣಿಗೆಗಳು ಸೂಚಿಸುತ್ತವೆ. ಸೆಮಿಕಂಡಕ್ಟರ್ ಚಿಪ್ ಉತ್ಪಾದಕ ಅಗ್ರಗಣ್ಯ ರಾಷ್ಟ್ರವಾಗುವ ಭಾರತದ ಕನಸು ನನಸು ಮಾಡಿಕೊಳ್ಳುವ ನಿಟ್ಟಿನಲ್ಲಿ ಮೈಕ್ರಾನ್ ಸ್ಥಾವರ ಸ್ಥಾಪನೆ ಉತ್ತಮ ಆರಂಭವೆನ್ನಬಹುದು. ಸೆಮಿಕಂಡಕ್ಟರ್ ಟೆಸ್ಟಿಂಗ್ ಮತ್ತು ಪ್ಯಾಕೇಜಿಂಗ್ ಘಟಕ ಸ್ಥಾಪಿಸಲು ಮೈಕ್ರಾನ್ ಟೆಕ್ನಾಲಜಿ ಸಂಸ್ಥೆಯ 2.7 ಶತಕೋಟಿ ಡಾಲರ್ ಯೋಜನೆಗೆ ಕೇಂದ್ರ ಸಚಿವ ಸಂಪುಟವು ಅನುಮೋದಿಸಿದೆ ಎಂದು ತಿಳಿದುಬಂದಿದೆ.

ಅಮೆರಿಕ ಮೂಲದ ಮೈಕ್ರಾನ್ ಟೆಕ್ನಾಲಜಿಯು ಮೋದಿಯವರ ತವರು ರಾಜ್ಯವಾದ ಗುಜರಾತ್​ನಲ್ಲಿ ಸ್ಥಾವರ ಸ್ಥಾಪಿಸಲು ನಿರ್ಧರಿಸಿದೆ. ಎಲೆಕ್ಟ್ರಾನಿಕ್ಸ್, ಆಟೋಮೊಬೈಲ್ ಸೇರಿದಂತೆ ಅನೇಕ ಉತ್ಪನ್ನಗಳಲ್ಲಿ ಅತ್ಯಗತ್ಯವಾಗಿರುವ ಹಾಗೂ ಮಹತ್ವದ ಪಾತ್ರವನ್ನು ವಹಿಸುವ ಸೆಮಿಕಂಡಕ್ಟರ್ ಚಿಪ್ ಉತ್ಪಾದನೆಯಲ್ಲಿ ಆತ್ಮನಿರ್ಭರತೆ ಸಾಧಿಸುವ ಸಲುವಾಗಿ ಕೇಂದ್ರ ಸರ್ಕಾರವು ಉತ್ಪಾದನಾ ಸಂಬಂಧಿತ ಪೋ›ತ್ಸಾಹಕಗಳನ್ನು ನೀಡುವ ತೀರ್ವನವನ್ನು ಈ ಮೊದಲೇ ಕೈಗೊಂಡಿದೆ. ಅದರನುಸಾರವಾಗಿ 110 ಶತಕೋಟಿ ರೂಪಾಯಿಗಳ (1.34 ಬಿಲಿಯನ್ ಡಾಲರ್) ಮೌಲ್ಯದ ಉತ್ಪಾದನಾ ಸಂಬಂಧಿತ ಪೋ›ತ್ಸಾಹಕಗಳನ್ನು ಮೈಕ್ರಾನ್ ಸ್ಥಾವರಕ್ಕೆ ನೀಡಲು ಉದ್ದೇಶಿಸಲಾಗಿದೆ. ಮೋದಿ ಅಮೆರಿಕ ಭೇಟಿ ಸಂದರ್ಭದಲ್ಲಿ ಸ್ಥಾವರ ಸ್ಥಾಪನೆ ಕುರಿತು ಅಧಿಕೃತವಾಗಿ ಘೋಷಿಸುವ ಸಾಧ್ಯತೆಗಳಿವೆ.

ಭಾರತವು 50 ಶತಕೋಟಿ ಡಾಲರ್​ಗಿಂತಲೂ (4,10,032 ಕೋಟಿ ರೂಪಾಯಿಗೂ) ಅಧಿಕ ಮೊತ್ತದ ಸೆಮಿಕಂಡಕ್ಟರ್ ಚಿಪ್​ಗಳನ್ನು ವಾರ್ಷಿಕವಾಗಿ ಆಮದು ಮಾಡಿಕೊಳ್ಳುತ್ತದೆ. ತಂಟೆಕೋರ ಚೀನಾದಿಂದಲೇ ಹೆಚ್ಚಿನ ಆಮದು ಮಾಡಿಕೊಳ್ಳುತ್ತಿರುವುದು ದೇಶದ ಭದ್ರತೆ ದೃಷ್ಟಿಯಿಂದಲೂ ಆಂತಕ ಕಾರಿಯಾಗಿದೆ. ಈ ಹಿನ್ನೆಲೆಯಲ್ಲಿ ದೇಶದಲ್ಲಿ ಸೆಮಿಕಂಡಕ್ಟರ್ ಚಿಪ್ ಮತ್ತು ಡಿಸ್ಪೇ ್ಲ ತಯಾರಿಕೆ ಘಟಕಗಳನ್ನು ಸ್ಥಾಪಿಸಲು ಕೇಂದ್ರ ಸರ್ಕಾರವು 10 ಶತಕೋಟಿ ಡಾಲರ್ ಮೊತ್ತದ ಪೋ›ತ್ಸಾಹಕ ಯೋಜನೆಯನ್ನು 2021ರ ಡಿಸೆಂಬರ್​ನಲ್ಲಿ ಘೋಷಿಸಿತು. ಇದಕ್ಕಾಗಿ ಕಂಪನಿಗಳಿಂದ 2022ರ ಜನವರಿಯಲ್ಲಿ ಅರ್ಜಿಗಳನ್ನೂ ಆಹ್ವಾನಿಸಿತು. ಆದರೆ, ತಂತ್ರಜ್ಞಾನ ಪಾಲುದಾರರ ಕೊರತೆಯಿಂದ ಈ ಕಂಪನಿಗಳ ಘಟಕಗಳ ಸ್ಥಾಪನೆಗೆ ಹಿನ್ನಡೆ ಉಂಟಾಗಿದ್ದು, ಈಗ ಜೂನ್ 1ರಿಂದ ಮತ್ತೆ ಅರ್ಜಿ ಆಹ್ವಾನಿಸಲಾಗಿದೆ. ಈ ನಡುವೆ ಮೈಕ್ರಾನ್ ಟೆಕ್ನಾಲಜಿ ಸ್ಥಾವರ ಸ್ಥಾಪನೆಯಾಗುತ್ತಿರುವುದು ಸಕಾರಾತ್ಮಕ ಬೆಳವಣಿಗೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net