

ಹಾಲು ಒಕ್ಕೂಟಗಳು ಇರುವುದು ರೈತರಿಗೆ ಅನುಕೂಲ ಮಾಡುವುದಕ್ಕೆ ಮಾತ್ರ, ಲಾಭ ಮಾಡುವುದಕ್ಕಲ್ಲ ಎಂದು CM ಸಿದ್ದರಾಮಯ್ಯ ಹೇಳಿದ್ದಾರೆ.
ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳ ನಿಯಮಿತದ ಅಧ್ಯಕ್ಷರು ಮತ್ತು ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷರ ಹಾಗೂ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಸೋಮವಾರ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಹೇಳಿದ್ದಾರೆ.
ಹಾಲಿನ ದರ ಹೆಚ್ಚಳ ಕುರಿತು ಒಕ್ಕೂಟಗಳ ಅಭಿಪ್ರಾಯ ಸಂಗ್ರಹ ಮಾಡಲಾಯಿತು. ಹಾಲಿನದರ ಹೆಚ್ಚಳ ಮಾಡಿದರೆ ಮೊತ್ತವನ್ನು ಸಂಪೂರ್ಣವಾಗಿ ರೈತರಿಗೆ ವರ್ಗಾವಣೆಯಾಗಬೇಕು ಎಂಬುವುದು ಸರ್ಕಾರದ ದೃಢ ನಿಲುವು ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದರು.
ಹಾಲು ಒಕ್ಕೂಟಗಳು ಖರ್ಚು ವೆಚ್ಚ ಕಡಿಮೆ ಮಾಡಬೇಕು. ಪಾರದರ್ಶಕತೆಯನ್ನು ಪಾಲಿಸಬೇಕು. ಒಕ್ಕೂಟಗಳು ಅಗತ್ಯಕ್ಕಿಂತ ಹೆಚ್ಚು ಜನರನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಬಾರದು. ಇದರಿಂದಾಗಿಯೇ ವೆಚ್ಚ ಹೆಚ್ಚಾಗುತ್ತಿದೆ. ಅನಗತ್ಯ ಆಡಳಿತಾತ್ಮಕ ವೆಚ್ಚಗಳಿಂದಾಗಿಯೇ ಕೆಲವು ಒಕ್ಕೂಟಗಳು ನಷ್ಟ ಅನುಭವಿಸುವಂತಾಗಿದೆ. ಆಡಳಿತಾತ್ಮಕ ವೆಚ್ಚ ಯಾವುದೇ ಕಾರಣಕ್ಕೂ ಶೇ.2ಕ್ಕಿಂತ ಹೆಚ್ಚಾಗಬಾರದು ಎಂದಿದ್ದಾರೆ ಸಿಎಂ.
ಮುಂದಿನ ಮೂರು ತಿಂಗಳಲ್ಲಿ ಆಡಳಿತಾತ್ಮಕ ವೆಚ್ಚವನ್ನು 2.5% ಕಡ್ಡಾಯವಾಗಿ ಇಳಿಸಬೇಕು. ಅಲ್ಲಿಂದ ಮುಂದಿನ ಮೂರು ತಿಂಗಳ ಒಳಗಾಗಿ ಎಲ್ಲಾ ಒಕ್ಕೂಟಗಳು ಆಡಳಿತಾತ್ಮಕ ವೆಚ್ಚವನ್ನು ಶೇ.2ಕ್ಕಿಂತ ಕೆಳಗೆ ಇಳಿಸಲೇಬೇಕು ಎಂದು ಸೂಚಿಸಿದ ಸಿಎಂ, ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಹಾಲಿನ ದರ ಕಡಿಮೆಯಿದೆ. ಹಾಲಿನ ದರ ಹೆಚ್ಚಳ ಮಾಡಿದರೆ ಉತ್ಪಾದನೆ ಹೆಚ್ಚಾಗುತ್ತದೆ. ಇದರ ಲಾಭ ಪೂರ್ಣವಾಗಿ ರೈತರಿಗೆ ತಲುಪಬೇಕು ಎಂಬುವುದು ಸರ್ಕಾರದ ನಿಲುವು ಎಂದರು.
ಬಳ್ಳಾರಿ ಹಾಲಿನ ಒಕ್ಕೂಟ 1.43 ಕೋಟಿಯಷ್ಟು ನಷ್ಟದಲ್ಲಿದ್ದು, ಫೆಬ್ರವರಿ ಅಂತ್ಯಕ್ಕೆ ಒಟ್ಟು 3 ಒಕ್ಕೂಟಗಳು ನಷ್ಟದಲ್ಲಿವೆ. ನಿರ್ವಹಣಾ ವೆಚ್ಚ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹಾಲಿನ ದರ ಹೆಚ್ಚಳ ಮಾಡಿದರೆ ಸ್ವಲ್ಪ ಮೊತ್ತವನ್ನು ಒಕ್ಕೂಟಗಳಿಗೆ ವರ್ಗಾಯಿಸಲು ಒಕ್ಕೂಟಗಳಿಂದ ಮನವಿ ಮಾಡಿದರೂ ಸಿಎಂ ಇದಕ್ಕೆ ಒಪ್ಪಲಿಲ್ಲ.