ಆರ್​ಎಸ್​ಎಸ್​ನ ಅನುಭವ ಹಂಚಿಕೊಂಡ ಪ್ರಸಿದ್ಧ ನಟ: ಹಾಟ್​ ಸಂಘಿ ಎಂದು ವೈರಲ್​ ಮಾಡಿದ ನೆಟ್ಟಿಗರು

milind
Published on

ಮುಂಬೈ: ಆರ್​ಎಸ್​ಎಸ್​ ಎನ್ನುವ ಪದವೇ ಸಾಕು, ಪರ ವಿರೋಧದ ಚರ್ಚೆಗಳು ಶುರುವಾಗಿಬಿಡುತ್ತದೆ. ಒಂದತ್ತ ಆರ್​ಎಸ್​ಎಸ್​ನ್ನು ಭಾರತದ ಉಗ್ರ ಸಂಘಟನೆ ಎಂದು ಪಾಕಿಸ್ತಾನ ನಿಂದಿಸುತ್ತಿದ್ದರೆ, ಇನ್ನೊಂದತ್ತ ನಾವು ಅಪ್ಪಟ ರಾಷ್ಟ್ರಭಕ್ತರು ಎಂದು ಆರ್​ಎಸ್​ಎಸ್​ನವರು ಹೇಳಿಕೊಳ್ಳುತ್ತಾರೆ. ಇದೀಗ ಬಾಲಿವುಡ್​ನ ಪ್ರಸಿದ್ಧ ನಟ ಮತ್ತು ಮಾಡೆಲ್​ ಒಬ್ಬರು ತಮ್ಮ ಆರ್​ಎಸ್​ಎಸ್​ನ ಅನುಭವವನ್ನು ಹಂಚಿಕೊಂಡಿದ್ದು, ವೈರಲ್​ ಲಿಸ್ಟ್​ ಸೇರಿಕೊಂಡಿದ್ದಾರೆ.

ಬಾಲಿವುಡ್​ನ ಹಾಟ್​ ನಟ ಮತ್ತು ಮಾಡೆಲ್​ ಮಿಲಿಂದ್​ ಸೋಮನ್​ ತಾವು ಆರ್​ಎಸ್​ಎಸ್​ನಲ್ಲಿ ಪಡೆದುಕೊಂಡ ಅನುಭವವನ್ನು ಹಂಚಿಕೊಂಡಿದ್ದಾರೆ. ತಾವು 10 ವರ್ಷದವರಾಗಿದ್ದಾಗ ಆರ್​ಎಸ್​ಎಸ್​ ಶಾಖೆಗೆ ತೆರಳುತ್ತಿದ್ದು ಅಲ್ಲಿ ಸಾಕಷ್ಟು ವಿಚಾರಗಳನ್ನು ಕಲಿತಿದ್ದಾಗಿ ಅವರು ಹೇಳಿಕೊಂಡಿದ್ದಾರೆ. ಆರ್​ಎಸ್​ಎಸ್​ ಶಾಖೆಯಲ್ಲಿ ಸಂಜೆ 6ರಿಂದ 7ರ ತನಕ ತಾವು ಮಾಡುತ್ತಿದ್ದ ಕೆಲಸಗಳನ್ನು ಅವರು ಹಂಚಿಕೊಂಡಿದ್ದಾರೆ. ಖಾಕಿ ಚಡ್ಡಿ ಧರಿಸಿ ಮೆರವಣಿಗೆ ಸಾಗುತ್ತಿದ್ದ ಅವರು ಸಾಂಪ್ರದಾಯಿಕವಾಗಿ ಜಿಮ್ನಾಸ್ಟಿಕ್​ ಮಾಡುತ್ತಿದ್ದರಂತೆ. ಯೋಗ ಮಾಡಿ, ಹಾಡುಗಳನ್ನು ಹೇಳುವುದರ ಜತೆ ಸಂಸ್ಕೃತ ಶ್ಲೋಕಗಳನ್ನೂ ಸಹ ಹೇಳುತ್ತಿದ್ದರಂತೆ. ತಮ್ಮ ಜತೆ ಶಾಖೆಗೆ ಬರುತ್ತಿದ್ದ ಗೆಳೆಯರೊಂದಿಗೆ ಪ್ರವಾಸಗಳನ್ನು ಕೈಗೊಳ್ಳುತ್ತಿದ್ದರಂತೆ.

ಆರ್​ಎಸ್​ಎಸ್​ನಲ್ಲಿ ತಮ್ಮ ಸಿಹಿ ಅನುಭವವನ್ನು ಹಂಚಿಕೊಂಡಿದ್ದ ಮಿಲಿಂದ್​ ಸೋಮನ್​ ಆರ್​ಎಸ್​ಎಸ್​ ಬಗ್ಗೆ ವಿಧ್ವಂಸಕ, ಕೋಮು ಪ್ರಚಾರ ಮಾಡುವ ಸಂಘಟನೆ ಎಂದು ಏಕಾಗಿ ಹೇಳಲಾಗುತ್ತಿದೆ ಎನ್ನುವುದು ನನಗೆ ತಿಳಿಯುತ್ತಿಲ್ಲ ಎಂದು ಹೇಳಿದ್ದಾರೆ.

ಆರ್​ಎಸ್​ಎಸ್​ನ್ನು ದೇಸೀಯ ಸ್ಕೌಟ್ಸ್​ ಎಂದು ಕರೆದಿರುವ ನಟ, ತನ್ನ ತಂದೆಯೂ ಸಹ ಆರ್​ಎಸ್​ಎಸ್​ನಲ್ಲಿ ಸಕ್ರಿಯವಾಗಿದ್ದರು ಎಂದು ತಿಳಿಸಿದ್ದಾರೆ. ಅವರು ಒಬ್ಬರು ಹೆಮ್ಮೆಯ ಹಿಂದೂ. ಆದರೆ ನನಗೆ ಹಿಂದೂ ಎಂದು ಹೆಮ್ಮೆ ಪಡಬೇಕು ಅಥವಾ ವಿರೋಧ ವ್ಯಕ್ತಪಡಿಸಬೇಕು ಎಂದು ಎಂದೂ ಅನಿಸಿಲ್ಲ. ನನ್ನ ಶಾಖೆಯಲ್ಲಿ ನನಗೆ ಹಿಂದೂ ಎನ್ನುವುದರ ಬಗ್ಗೆ ಹೆಚ್ಚಿನದಾಗಿ ಏನೂ ಹೇಳಿಕೊಟ್ಟಿಲ್ಲ, ಒಂದು ವೇಳೆ ಹೇಳಿಕೊಟ್ಟಿದ್ದರೂ ಅದು ನನ್ನ ಗಮನಕ್ಕೆ ಬಂದಿಲ್ಲ ಎಂದು ಹೇಳಿದ್ದಾರೆ. ಸಂದರ್ಶನವೊಂದರಲ್ಲಿ ಈ ರೀತಿಯಲ್ಲಿ ಅನುಭವ ಹಂಚಿಕೊಂಡಿದ್ದ ಮಿಲಿಂದ್​ ಸೋಮನ್​ ಇದೇ ವಿಚಾರವಾಗಿ ಟ್ವಿಟ್ಟರ್​ನಲ್ಲಿ ಮಂಗಳವಾರದಂದು ವೈರಲ್​ ಆಗಿದ್ದಾರೆ.

ಅನೇಕರು ಮಿಲಿಂದ್​ ಅವರನ್ನು ಆರ್​ಎಸ್​ಎಸ್​ನ ಹಾಟ್​ ಐಕಾನ್​ ಎಂದು ಕರೆಯಲಾರಂಭಿಸಿದ್ದಾರೆ. ಮಿಲಿಂದ್​​ ಸೋಮನ್​, ಮೇಡ್​ ಇನ್​ ಇಂಡಿಯಾ ಎನ್ನುವ ಹ್ಯಾಷ್​ಟ್ಯಾಗ್​ನೊಂದಿಗೆ ಮಿಲಿಂದ್​ ಅವರನ್ನು ವೈರಲ್​ ಲಿಸ್ಟ್​ಗೆ ಸೇರಿಸಲಾಗುತ್ತಿದೆ. ಸಂಘಿಗಳೆಂದರೆ ಶಕ್ತಿವಂತರು ಎನ್ನುವಂತೆ ಮಿಲಿಂದ್​ ಅವರ ಫೋಟೋವನ್ನು ಬಳಸಿಕೊಂಡು ಟ್ವೀಟ್​ ಮಾಡಲಾಗುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net