

ನವದೆಹಲಿ: ಮಧ್ಯಪ್ರದೇಶದಲ್ಲಿ ಇಷ್ಟೆಲ್ಲ ರಾಜಕೀಯ ಬೆಳವಣಿಗೆಗಳು ನಡೆಯುತ್ತಿದ್ದರೂ ಸುಮ್ಮನೆ ಇದ್ದಿದ್ದ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಇಂದು ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಅವರ ಆಪ್ತರಲ್ಲಿ ಓರ್ವರೆನಿಸಿಕೊಂಡಿದ್ದ ಜ್ಯೋತಿರಾದಿತ್ಯ ಸಿಂಧಿಯಾ ನಿನ್ನೆ ತಮ್ಮ ರಾಜೀನಾಮೆ ಪತ್ರವನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿಕೊಂಡಿದ್ದರು. ಅದಾದ ಕೆಲವೇ ಕ್ಷಣಗಳಲ್ಲಿ ಪಕ್ಷದಿಂದ ಉಚ್ಚಾಟಿಸಲ್ಪಟ್ಟಿದ್ದರು. ಜ್ಯೋತಿರಾದಿತ್ಯ ಸಿಂಧ್ಯಾ ಜತೆ 22 ಶಾಸಕರು ರಾಜೀನಾಮೆ ಕೊಟ್ಟಿದ್ದಾರೆ. ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಪತನವಾಗಿ, ಕಮಲ ಅರಳುವುದು ಬಹುತೇಕ ನಿಶ್ಚಿತವಾಗಿದೆ.
ವಾರಗಳಿಂದಲೂ ರಾಜಕೀಯ ನಾಟಕಗಳು ನಡೆಯುತ್ತಲೇ ಇದ್ದರೂ ಮೌನವಹಿಸಿದ್ದ ರಾಹುಲ್ ಗಾಂಧಿ ಇಂದು ಟ್ವಿಟರ್ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಆರೋಪ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರೇ, ಮಧ್ಯಪ್ರದೇಶದಲ್ಲಿ ಆಡಳಿತ ನಡೆಸುತ್ತಿದ್ದ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸುವುದರಲ್ಲಿಯೇ ನಿರತರಾಗಿರುವ ನೀವು, ಜಾಗತಿಕ ಕಚ್ಚಾ ತೈಲ ಬೆಲೆ ಶೇ.35ರಷ್ಟು ಇಳಿಕೆ ಆಗಿದ್ದನ್ನು ಬಹುಶಃ ಗಮನಿಸಲಿಲ್ಲ ಎನ್ನಿಸುತ್ತಿದೆ ಎಂದು ರಾಹುಲ್ ಗಾಂಧಿ ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ.
ಜಾಗತಿಕ ಕಚ್ಚಾತೈಲ ಬೆಲೆ ಕಡಿಮೆಯಾಗಿದೆ. ಇನ್ನಾದರೂ ಪೆಟ್ರೋಲ್ ಬೆಲೆಯನ್ನು ಲೀಟರ್ಗೆ 60 ರೂ.ಗಿಂತಲೂ ಕಡಿಮೆ ಮಾಡುವ ಮೂಲಕ ಭಾರತೀಯರಿಗೆ ಅನುಕೂಲ ಮಾಡಿಕೊಡುತ್ತೀರಾ? ಇದು ನಿಂತ ನೀರಾದ ಆರ್ಥಿಕತೆಯ ಉತ್ತೇಜನಕ್ಕೆ ಸಹಾಯ ಮಾಡುತ್ತದೆ ಎಂದು ಮೋದಿಯವರ ಬಳಿ ಪ್ರಶ್ನಿಸಿದ್ದಾರೆ.
ಇತ್ತೀಚೆಗೆ ದೇಶದ ಯಾವುದೇ ವಿಚಾರಕ್ಕೆ ಸಂಬಂಧಪಟ್ಟು ರಾಹುಲ್ ಗಾಂಧಿಯವರು ಪ್ರತಿಕ್ರಿಯೆ ನೀಡಿದರೂ ಆರ್ಥಿಕತೆ ಕುಸಿತವನ್ನು ಮುಂದಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸುತ್ತಿರುವುದು ಸರ್ವೇ ಸಾಮಾನ್ಯವಾಗಿಬಿಟ್ಟಿದೆ. ಸದ್ಯ ಮಧ್ಯಪ್ರದೇಶ ಕಾಂಗ್ರೆಸ್ ಉಳಿದ 92 ಶಾಸಕರನ್ನು ಕಾಪಾಡಿಕೊಳ್ಳಲು ಅವರನ್ನೆಲ್ಲ ಜೈಪುರ ಸೇರಿ ಮತ್ತಿತರ ಪ್ರದೇಶಗಳಿಗೆ ಕಳಿಸಲು ಪ್ರಯತ್ನಿಸುತ್ತಿದೆ. ಈ ಬೆಳವಣಿಗೆಗೂ ಕೂಡ ರಾಹುಲ್ ಗಾಂಧಿ ಆರ್ಥಿಕತೆಯ ರಾಗವನ್ನೇ ಪ್ರಸ್ತುತಪಡಿಸಿದ್ದಾರೆ. (ಏಜೆನ್ಸೀಸ್)