More

    ಕೋರೆಹಲ್ಲು ಇರುವ ಜಿಂಕೆಯೂ ಇದೆ…ಅದ್ಯಾವುದು ಗೊತ್ತಾ? ಇಲ್ಲಿದೆ ಕುತೂಹಲಕಾರಿ ಮಾಹಿತಿ

    ಪ್ರಾಣಿಗಳಲ್ಲಿ ಅತ್ಯಂತ ಸಾಧುಪ್ರಾಣಿಯೆಂದು ಕರೆಯಲ್ಪಡುವುದು ಜಿಂಕೆ. ಹಾಗೆಯೇ ಕೋರೆಹಲ್ಲು ಎಂದಾಕ್ಷಣ ನೆನಪಾಗುವುದು ಮಾಂಸಾಹಾರಿ ಪ್ರಾಣಿಗಳು. ಆದರೆ ಕೋರೆಹಲ್ಲು ಇರುವ ಜಿಂಕೆಯೂ ಇದೆ ಎನ್ನುವುದು ನಿಮಗೆ ಗೊತ್ತೆ? ಅದ್ಯಾವ ಜಿಂಕೆ? ಇಲ್ಲಿದೆ ಮಾಹಿತಿ.

    ಪ್ರಾಣಿ ಜಗತ್ತೇ ಕೌತುಕಮಯವಾಗಿದ್ದು. ಅಂಥದ್ದೊಂದು ಕೌತುಕ, ಕೋರೆಹಲ್ಲು ಇರುವ ಜಿಂಕೆ. ಇದರ ಹೆಸರು ತುರಾಯಿ ಜಿಂಕೆ (tufted deer). ಹಂದಿಗೆ ಇರುವಂತಹ ಕೋರೆ ಹಲ್ಲು ಈ ಜಿಂಕೆಗಿದೆ. ಸಾಮಾನ್ಯ ಜಿಂಕೆಯಷ್ಟು ಸೌಂದರ್ಯ ಇದಕ್ಕಿಲ್ಲದಿದ್ದರೂ ಜಾತಿ ಮಾತ್ರ ಅದೇ ಜಿಂಕೆಯದ್ದು. ಪಶ್ಚಿಮಘಟ್ಟದ ಕಾಡುಗಳಲ್ಲಿ ಒಮ್ಮೆ ಹೇರಳವಾಗಿ ರೈತರ ಜಮೀನಿನ ಆಸುಪಾಸುಗಳಲ್ಲಿ ಕಾಣಿಸುತ್ತಿದ್ದ ಈ ಜಿಂಕೆಯನ್ನು ತುಳು ಭಾಷೆಯಲ್ಲಿ ‘ಬರಿಂಕ’ ಎಂದು ಕರೆಯಲಾಗುತ್ತದೆ.

    ಎಲಾಫೊಡಸ್ ಸೆಫಲೋಫಸ್ ಎಂಬುದು ಇದರ ವೈಜ್ಞಾನಿಕ ಹೆಸರು. ಇದೊಂದು ಸಣ್ಣ ಜಾತಿಯ ಜಿಂಕೆಯಾಗಿದ್ದು, ಇದರ ಹಣೆಯ ಮೇಲೆ ಕಪ್ಪು ಕೂದಲಿನ ಗುಚ್ಛ (ತುರಾಯಿ) ಇರುತ್ತದೆ. ಗಂಡು ಜಿಂಕೆಗೆ ಬಾಯಿಯ ಕೆಳವಸಡಿನಿಂದ ಹೊರಗೆ ಉದ್ದಕ್ಕೆ ಚಾಚಿದಂತಹ ಎರಡು ಸುಮಾರು 10 ಇಂಚು ಉದ್ದನೆಯ ಕೋರೆಹಲ್ಲುಗಳಿದ್ದು, ಹೆಣ್ಣು ಜಿಂಕೆಗೆ ಕೋರೆಗಳಿರುವುದಿಲ್ಲ. ಇದರ ತಲೆಯಲ್ಲಿ ಕೂದಲಿನ ದಟ್ಟವಾದ ಗುಚ್ಛವಿರುವ ಕಾರಣದಿಂದ ಇದಕ್ಕೆ ತುರಾಯಿ ಜಿಂಕೆಯೆಂಬ ಹೆಸರು ಬಂದಿದೆ.

    ತುರಾಯಿ ಜಿಂಕೆಯು ಕಡವೆ (ಮಂಟ್ಜಾಕ್) ಜಾತಿಯ ಜಿಂಕೆಯ ಪ್ರಭೇದಕ್ಕೆ ಸೇರಿದ್ದು, ಇದು ಉತ್ತರ ಭಾರತದ ಕೆಲವೊಂದು ಕಾಡುಗಳಲ್ಲಿ, ಮಧ್ಯ ಚೀನಾದ ಈಶಾನ್ಯ ಮತ್ತು ಮ್ಯಾನ್ಮಾರ್​ನ ವಿಶಾಲ ಕಾಡುಗಳಲ್ಲಿ ವಾಸಿಸುತ್ತವೆ. ಅತ್ಯಂತ ಸಾಧು ಪ್ರಾಣಿಯಾದ ಇದನ್ನು ಅತಿಯಾಗಿ ಬೇಟೆಯಾಡುವುದರಿಂದ ಇವುಗಳ ಸಂತತಿಯು ಅವಸಾನದ ಅಂಚಿನಲ್ಲಿವೆ. ಸಮುದ್ರ ಮಟ್ಟದಿಂದ 4500 ಮೀಟರ್​ಗೂ ಹೆಚ್ಚಿನ ಎತ್ತರದ ಪರ್ವತಾರಣ್ಯ ಪ್ರದೇಶಗಳು ಇವುಗಳ ಆವಾಸಸ್ಥಾನವಾಗಿದೆ.

    ತುರಾಯಿ ಜಿಂಕೆಯು ಕಡವೆಯಂತೆ ಕಾಣಿಸುತ್ತದೆ. ಇದರ ಮೈಯೆಲ್ಲಾ ಚಳಿಗಾಲದಲ್ಲಿ ಬಹುತೇಕ ಕಪ್ಪು ಮತ್ತು ಬೇಸಿಗೆಯಲ್ಲಿ ಚಾಕೊಲೇಟ್ ಕಂದು ಬಣ್ಣದ ಒರಟಾದ ಕೂದಲಿನಿಂದ ಕೂಡಿರುತ್ತದೆ. ಇದರ ತುಟಿಯ ಸುತ್ತ, ಎರಡೂ ಕಿವಿಗಳ ತುದಿ ಮತ್ತು ಬಾಲದ ಕೆಳಭಾಗವು ಬಿಳಿಯಾಗಿರುತ್ತದೆ. ಕುದುರೆಗೆ ಇರುವಂತಹ 17-20 ಸೆಂ.ಮೀ ಉದ್ದದ ಕೂದಲಿನ ರಾಶಿಯು ಇದರ ಹಣೆ ಮತ್ತು ಕುತ್ತಿಗೆಯ ಮೇಲ್ಭಾಗದಲ್ಲಿದ್ದು, ಗಾಢ ಕಂದು ಬಣ್ಣದ್ದಾಗಿರುತ್ತದೆ. ತೂಕದಲ್ಲಿ ಇದು ಸುಮಾರು 17-30 ಕಿ.ಗ್ರಾಂಗಳಷ್ಟಿದ್ದು, ಅತ್ಯಂತ ಚಿಕ್ಕದಾದ ಸುಮಾರು 10 ಸೆಂ.ಮೀ ಉದ್ದದ ಮೊಂಡಾದ ಬಾಲವಿರುತ್ತದೆ.

    ಗಂಡು ತುರಾಯಿ ಜಿಂಕೆಗೆ ಕೂದಲಿನ ರಾಶಿಯಲ್ಲಿ ಮರೆಮಾಚಲ್ಪಟ್ಟ ಕೊಂಬುಗಳಿರುತ್ತವೆ. ಇವು ಹೆಚ್ಚಾಗಿ ಚೀನಾದ ದಕ್ಷಿಣ ಕರಾವಳಿಯಿಂದ ಪೂರ್ವ ಟಿಬೆಟ್​ವರೆಗೆ ಕಂಡುಬರುತ್ತದೆ. ಈಶಾನ್ಯ ಮ್ಯಾನ್ಮಾರ್​ನಲ್ಲಿ ಈ ಜಾತಿಯ ಜಿಂಕೆಗಳು ಜೀವಿಸಿದ್ದ ಕುರಿತು ದಾಖಲೆಗಳಿವೆ. ಇವುಗಳು ಅತ್ಯಂತ ಎತ್ತರದ ಹೆಚ್ಚು ಮಳೆ ಬೀಳುವ, ತೇವಾಂಶದಿಂದ ಒದ್ದೆಯಾದ ನಿತ್ಯಹರಿದ್ವರ್ಣ ಮತ್ತು ಎಲೆ ಉದುರಿಸುವ ಕಾಡುಗಳನ್ನೇ ನೆಚ್ಚಿಕೊಂಡು ಯಾರಿಗೂ ಕಣ್ಣಿಗೆ ಕಾಣಿಸದಂತೆ ವಾಸಿಸುತ್ತವೆ. ಸಿಹಿನೀರಿನ ಲಭ್ಯವಿರುವ ಕಾಡುಗಳೇ ಇವುಗಳ ನೆಚ್ಚಿನ ತಾಣವಾಗಿದೆೆ.

    ಇವು ಹೆಚ್ಚಾಗಿ ಒಂಟಿಯಾಗಿಯೇ ಇರುತ್ತವೆ. ಗಂಡು ಜಿಂಕೆಯು ಹೆಣ್ಣು ಜಿಂಕೆಗೆ ರಕ್ಷಕನಂತೆ ಇರುತ್ತದೆ. ಇವುಗಳ ಗರ್ಭಾವಸ್ಥೆಯ ಅವಧಿ ಸುಮಾರು ಆರು ತಿಂಗಳುಗಳಾಗಿದ್ದು, ಬೇಸಿಗೆಯ ಪ್ರಾರಂಭದಲ್ಲಿ ಒಂದು ಅಥವಾ ಎರಡು ಮರಿಗಳಿಗೆ ತಾಯಿಯು ಜನ್ಮವನ್ನು ನೀಡುತ್ತದೆ.

    ಇವುಗಳು ಕಾಡಿನಲ್ಲಿ ಹತ್ತರಿಂದ ಹನ್ನೆರಡು ವರ್ಷಗಳವರೆಗೆ ಕಾಡಿನ ಹುಲ್ಲು ಮತ್ತು ಸೊಪ್ಪುಗಳನ್ನು ತಿಂದು ಬದುಕುತ್ತವೆ. ಇದು ಅಂಜುಬುರುಕ ಪ್ರಾಣಿಯಾಗಿದ್ದು, ದಟ್ಟವಾದ ಪೊದೆಗಳ ನಡುವೆ ಮರೆಮಾಚಿಕೊಂಡು ಬದುಕುವುದರಿಂದ ಅವುಗಳ ಜೀವನ ಕ್ರಮದ ಬಗ್ಗೆ ಹೆಚ್ಚಾಗಿ ತಿಳಿದಿಲ್ಲ. ಇದು ಸಣ್ಣ ಶಬ್ದಕ್ಕೂ ಹೆಚ್ಚು ಭೀತಿಗೊಳಗಾಗುವುದರಿಂದ ಅಪಾಯ ಎದುರಾದಾಗ ವಿಚಿತ್ರವಾದ ಸದ್ದಿನೊಂದಿಗೆ ಕಿರುಚುತ್ತಾ ಬೆಕ್ಕಿನಂತೆ ಜಿಗಿಯುತ್ತಾ ಓಡುತ್ತವೆ.

    ಸಂರಕ್ಷಿತ ಪ್ರಾಣಿ

    1998ರಲ್ಲಿ ನಡೆಸಲಾದ ಸಮೀಕ್ಷೆಯ ಪ್ರಕಾರ ಮೂರು ಲಕ್ಷದಿಂದ 5 ಲಕ್ಷದಷ್ಟು ಸಂಖ್ಯೆಯ ತುರಾಯಿ ಜಿಂಕೆಗಳು ಬದುಕಿರಬಹುದೆಂದು ಅಂದಾಜಿಸಲಾಗಿದ್ದು, ಇವುಗಳ ಸಂಖ್ಯೆಯು ವರ್ಷದಿಂದ ವರ್ಷಕ್ಕೆ ಗಣನೀಯವಾಗಿ ಕಡಿಮೆಯಾಗುತ್ತಿದೆ. ಚೀನಾದಲ್ಲಿ ಇವುಗಳನ್ನು ಮಾಂಸಕ್ಕೆ ಮತ್ತು ಇದರ ತುಪ್ಪಳದಿಂದ ಬಟ್ಟೆಯನ್ನು ತಯಾರಿಸುವ ಉದ್ದೇಶದಿಂದ ಹೆಚ್ಚಿನ ಪ್ರಮಾಣದಲ್ಲಿ ಕೊಲ್ಲುತ್ತಿರುವುದು ಇವುಗಳ ಸಂಖ್ಯೆ ಕ್ಷೀಣಿಸಲು ಕಾರಣ.

    ಅಳಿವಿನಂಚಿನಲ್ಲಿರುವ ಈ ಜಿಂಕೆಗಳ ರಕ್ಷಣೆಗೆ ವಿಶೇಷ ಕ್ರಮಗಳನ್ನು ಕೈಗೊಂಡ ನಂತರ ಇವುಗಳ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳವಾಗಿದ್ದರೂ, ಅಭಿವೃದ್ಧಿಯ ಹೆಸರಿನಲ್ಲಿ ಕಾಡುಗಳ ನಾಶ ಇವುಗಳ ಆವಾಸಸ್ಥಾನದ ವ್ಯಾಪ್ತಿಯನ್ನು ಕಿರಿದಾಗಿಸಿದೆ. ಚೀನಾದಲ್ಲಿ ಈ ಪ್ರಾಣಿಯನ್ನು ಬಹುತೇಕ ಸಂರಕ್ಷಿತ ಪ್ರಾಣಿಗಳ ಪಟ್ಟಿಗೆ ಸೇರಿಸಲಾಗಿದ್ದರೂ ಇದನ್ನು ರಾಷ್ಟ್ರೀಯ ಕಾನೂನಿನ ಮೂಲಕ ರಕ್ಷಿಸಲಾಗಿಲ್ಲ. ಇವುಗಳ ಸಮರ್ಪಕವಾದ ರಕ್ಷಣೆಗಾಗಿ ಇವುಗಳ ಪ್ರಭೇದದ ಬಗ್ಗೆ ಹೆಚ್ಚಿನ ಅಧ್ಯಯನ ಮಾಡಬೇಕಾಗಿದೆ.

    | ಸಂತೋಷ್ ರಾವ್ ಪೆಮುಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts