

ವಾಷಿಂಗ್ಟನ್: ಚೀನಾ ಆ್ಯಪ್ಗಳಿಗೆ ಭಾರತ ನಿಷೇಧ ಹೇರಿರುವ ಬೆನ್ನಲ್ಲೇ ಟಿಕ್ಟಾಕ್ ಸೇರಿದಂತೆ ಚೀನಾದ ಹಲವು ಮೊಬೈಲ್ ಅಪ್ಲಿಕೇಷನ್ಗಳನ್ನು ನಿಷೇಧಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ ಹೇಳಿದ್ದಾರೆ.
ಬಳಕೆದಾರರ ಮಾಹಿತಿಯನ್ನು ಟಿಕ್ಟಾಕ್ ನಿರ್ವಹಿಸುವ ಬಗ್ಗೆ ಹಾಗೂ ರಾಷ್ಟ್ರೀಯ ಭದ್ರತೆ ಕುರಿತು ಕಳವಳ ವ್ಯಕ್ತಪಡಿಸಿರುವ ಪೊಂಪಿಯೊ, ಚೀನಾದ ಕಮ್ಯುನಿಸ್ಟ್ ಪಕ್ಷದಿಂದ ನಿಯಂತ್ರಿಸಲ್ಪಡುವ ಗುಪ್ತಚರ ಸಂಸ್ಥೆಗಳಿಗೆ ಅಲ್ಲಿನ ಕಂಪನಿಗಳು ಬೆಂಬಲ ಮತ್ತು ಸಹಕಾರ ನೀಡುತ್ತವೆ ಎಂದಿದ್ದಾರೆ.
ಈ ಮಧ್ಯೆ, ಆಸ್ಟ್ರೇಲಿಯಾ ಕೂಡ ಟಿಕ್ಟಾಕ್ ನಿಷೇಧಿಸುವ ಕುರಿತು ಚಿಂತನೆ ನಡೆಸಿದೆ ಎನ್ನಲಾಗಿದೆ. ಇತರ ದೇಶಗಳಲ್ಲಿ ಬಳಕೆದಾರರನ್ನು ಸೆಳೆಯುವ ಸಲುವಾಗಿ ತಾನು ಚೀನಾದಿಂದ ದೂರವಿರಲು ಪ್ರಯತ್ನಿಸಿರುವುದಾಗಿ ಮತ್ತು ಚೀನಾದಿಂದ ಸ್ವತಂತ್ರವಾಗಿರುವುದಾಗಿ ಟಿಕ್ಟಾಕ್ ಆಪ್ನ ಬೈಟ್ಡ್ಯಾನ್ಸ್ ಸ್ಪಷ್ಟನೆ ನೀಡಿದೆ.
ಆಪಲ್ ಮೇಲೆ ಒತ್ತಡ: ಚೀನಾ ಹೊಸದಾಗಿ ಜಾರಿಗೆ ತಂದಿರುವ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಹಾಂಕಾಂಗ್ನಲ್ಲಿ ಕಾರ್ಯ ನಿರ್ವಹಿಸುವ ಟ್ವಿಟ್ಟರ್, ಮೈಕ್ರೋಸಾಫ್ಟ್ ಸೇರಿದಂತೆ ಹಲವು ಕಂಪನಿಗಳ ಬಳಕೆದಾರರ ಮಾಹಿತಿ ನೀಡುವಂತೆ ಸೂಚಿಸಲಾಗಿದೆ. ಈ ಬಗ್ಗೆ ಆಡಳಿತ ಮತ್ತು ಕಂಪನಿಗಳ ಮಧ್ಯೆ ಜಟಾಪಟಿ ನಡೆಯುತ್ತಿದೆ. ಈಗಾಗಲೇ ಟಿಕ್ಟಾಕ್ ಹಾಂಕಾಂಗ್ನಲ್ಲಿ ಸೇವೆ ಸ್ಥಗಿತಗೊಳಿಸಿದೆ. ಜೂಮ್ ಕೂಡ ಯಾವುದೇ ಡೇಟಾ ವಿನಂತಿಗಳನ್ನು ಅನುಸರಿಸುವುದನ್ನು ನಿಲ್ಲಿಸುವುದಾಗಿ ತಿಳಿಸಿದೆ.
ಫೇಸ್ಬುಕ್, ಮೈಕ್ರೋಸಾಫ್ಟ್, ಟ್ವಿಟ್ಟರ್, ಗೂಗಲ್ ಮತ್ತು ಟೆಲಿಗ್ರಾಮ್ ಕೂಡ ಇದನ್ನೇ ಹೇಳಿವೆ. ಆದರೆ ರಾಷ್ಟ್ರೀಯ ಭದ್ರತಾ ಕಾಯ್ದೆ ಬಗ್ಗೆ ಆಪಲ್ ಈವರೆಗೂ ಏನನ್ನೂ ಹೇಳಿಲ್ಲ. ಚೀನಾದ ಅಧಿಕಾರಿಗಳೊಂದಿಗೆ ಯಾವುದೇ ಡೇಟಾವನ್ನು ಹಂಚಿಕೊಳ್ಳುವುದನ್ನು ಬೈಟ್ಡ್ಯಾನ್ಸ್ ನಿರಾಕರಿಸಿದೆ ಮತ್ತು ಅಂತಹ ವಿನಂತಿಗಳನ್ನು ಒಪ್ಪಿಕೊಳ್ಳುವ ಉದ್ದೇಶ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ಈ ಮಧ್ಯೆ ಹೊಸ ಕಾಯ್ದೆ ಜಾರಿಯಾಗಿರುವುದರಿಂದ ಪೊಲೀಸರಿಗೆ ಪೂರ್ಣ ಅಧಿಕಾರ ನೀಡಲಾಗಿದೆ.