

ವಿವಿಧ ರಾಜ್ಯಗಳಲ್ಲಿದ್ದ ವಲಸೆ ಕಾರ್ವಿುಕರು ತಮ್ಮ ರಾಜ್ಯಗಳಿಗೆ ಮರಳುತ್ತಿರುವುದು ಹೊಸ ಅಪಾಯ ತಂದೊಡ್ಡುವ ಸಾಧ್ಯತೆ ಇದೆ. ಛತ್ತೀಸ್ಗಢಕ್ಕೆ ಮರಳಿದ 14 ವಲಸೆ ಕಾರ್ವಿುಕರನ್ನು ಕ್ವಾರಂಟೈನ್ನಲ್ಲಿ ಇರಿಸಲಾಗಿದ್ದು ಅವರಲ್ಲಿ ಕೋವಿಡ್-19 ಸೋಂಕಿರುವುದು ದೃಢಪಟ್ಟಿದೆ. ಕರ್ನಾಟಕ ಮತ್ತು ರಾಜಸ್ಥಾನಗಳಲ್ಲಿ ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಅವರೆಲ್ಲರೂ ಅಂತಾರಾಜ್ಯ ಗಡಿ ದಾಟಿ ಬಂದವರು. ಛತ್ತೀಸ್ಗಢದಲ್ಲಿ ವಲಸೆ ಕಾರ್ವಿುಕರಲ್ಲಿ ಸೋಂಕು ಕಂಡು ಬಂದಿದ್ದು ರೋಗಿಗಳ ಸಂಖ್ಯೆ ಒಮ್ಮೆಲೆ ಏರಲು ಕಾರಣವಾಗಿದೆ.
ರಾಜ್ಯಗಳ ಕ್ರಮ: ವಲಸೆ ಕಾರ್ವಿುಕರ ಮರಳುವಿಕೆಯಿಂದ ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಯಲು ವಿವಿಧ ರಾಜ್ಯಗಳು ನಾನಾ ಬಗೆಯ ಕ್ರಮಗಳನ್ನು ಕೈಗೊಳ್ಳುತ್ತಿವೆ.
ಮಹಾರಾಷ್ಟ್ರ: ರಾಜ್ಯದಿಂದ ಹೊರಹೋಗಬಯಸುವ ವಲಸೆ ಕಾರ್ವಿುಕರು ತಲಾ 25ರ ಗುಂಪಿನಲ್ಲಿ ನೋಂದಣಿ ಅರ್ಜಿ ಸಲ್ಲಿಸಬೇಕು. ವೈದ್ಯಕೀಯ ಪ್ರಮಾಣಪತ್ರವನ್ನೂ ನೀಡಬೇಕು.
ರಾಜಸ್ಥಾನ: ವಲಸಿಗರಿಗಾಗಿ ಹೆಲ್ಪ್ಲೈನ್ ಸ್ಥಾಪಿಸಿದ ಮೊದಲ ರಾಜ್ಯ. ಒಟ್ಟು 10 ಲಕ್ಷ ಕರೆಗಳು ಬಂದಿವೆ. ಮಧ್ಯಪ್ರದೇಶ ಮತ್ತು ಛತ್ತೀಸ್ಗಢದ ಸರ್ಕಾರಿ ಬಸ್ಗಳನ್ನು ಹತ್ತುವ ಮುನ್ನ 15 ಚೆಕ್ಪೋಸ್ಟ್ಗಳಲ್ಲಿ ತಪಾಸಣೆ.
ಗುಜರಾತ್: ತವರಿಗೆ ಮರಳಲು ಬಯಸುವ ವಲಸೆ ಕಾರ್ವಿುಕರು ಪೋರ್ಟಲ್ನಲ್ಲಿ ನೋಂದಾಯಿಸಬೇಕು. ವೈದ್ಯಕೀಯ ಸರ್ಟಿಫಿಕೆಟ್ ಸಲ್ಲಿಕೆ ಕಡ್ಡಾಯ. ರೈಲು/ಬಸ್ ನಿಲ್ದಾಣಗಳಲ್ಲಿ ದೇಹದ ಉಷ್ಣತೆ ಪರೀಕ್ಷೆ. ಸೋಂಕಿನ ಲಕ್ಷಣವಿರುವವರಿಗೆ ಪ್ರಯಾಣಕ್ಕೆ ಅನುಮತಿ ನಿರಾಕರಣೆ.
ಒಡಿಶಾ: ವಾಪಸ್ ಹೋಗಬಯಸುವ ವ್ಯಕ್ತಿಯ ತವರು ರಾಜ್ಯದ ಅನುಮತಿಯನ್ನು ಮೊದಲು ಪಡೆಯಲಾಗುತ್ತದೆ. ಆರೋಗ್ಯ ತಪಾಸಣೆ ಕಡ್ಡಾಯ.
ಗೋವಾ: ರಾಜ್ಯ ಪ್ರವೇಶಿಸಿದ ಪ್ರತಿಯೊಬ್ಬರಿಗೆ ಕಡ್ಡಾಯ ಸಾಂಸ್ಥಿಕ ಕ್ವಾರಂಟೈನ್. ಗೋವಾದ ನಿವಾಸಿಯೆನ್ನುವುದಕ್ಕೆ ವಿಳಾಸದ ಆಧಾರ ಒದಗಿಸುವವರಿಗೆ ಕ್ವಾರಂಟೈನ್ಗೆ ಉಚಿತ ಸೌಲಭ್ಯ. ಗೋವಾಯೇತರ ಜನರಿಗೆ ದೈನಿಕ 2,500 ರೂಪಾಯಿ ಶುಲ್ಕ.
ತೆಲಂಗಾಣ: ಚೆಕ್ಪಾಯಿಂಟ್ಗಳಲ್ಲಿ ಆರೋಗ್ಯ ತಂಡಗಳಿಂದ ತಪಾಸಣೆ. ವಾಪಸ್ ಹೋಗುವವರು. ಕೆಂಪು ವಲಯದಲ್ಲಿ ವಾಸಿಸುತ್ತಿದ್ದರೆ ಅದನ್ನು ನಮೂದಿಸುವುದು ಕಡ್ಡಾಯ.
ಕೇರಳ: ರೈಲು ಮೂಲಕ ಪ್ರಯಾಣಿಸುವ ವಲಸಿಗರ ತಪಾಸಣೆಗೆ ಕೌಂಟರ್ಗಳ ಸ್ಥಾಪನೆ. ಜ್ವರದಂಥ ಲಕ್ಷಣವಿರುವವರ ಪ್ರಯಾಣಕ್ಕೆ ಅನುಮತಿ ನಿರಾಕರಣೆ. ಇತರ ರಾಜ್ಯಗಳ ಕೇರಳಿಗರ ಪ್ರಯಾಣಕ್ಕೆ ಮಾತ್ರ ಸದ್ಯ ಅವಕಾಶ.
ಪಶ್ಚಿಮ ಬಂಗಾಳ: ರಾಜ್ಯಕ್ಕೆ ವಾಪಸ್ ಬಂದ ಎಲ್ಲರನ್ನು 14 ದಿನಗಳ ಸಾಂಸ್ಥಿಕ ಕ್ವಾರಂಟೈನ್ಗೆ ಒಳಪಡಿಸಲಾಗುವುದು.