ವಲಸಿಗ ಕಾರ್ವಿುಕರಿಗೆ ಇನ್ನು ಊರಲ್ಲೇ ಉದ್ಯೋಗ; ಗರೀಬ್ ಕಲ್ಯಾಣ್ ಯೋಜನೆಗೆ ಪ್ರಧಾನಿ ಚಾಲನೆ

Garib klayana
Published on

ನವದೆಹಲಿ: ಕರೊನಾ ಲಾಕ್​ಡೌನ್ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿ ನಗರಗಳಿಂದ ಸ್ವಗ್ರಾಮಗಳಿಗೆ ಹಿಂದಿರುಗಿರುವ ಲಕ್ಷಾಂತರ ವಲಸಿಗ ಕಾರ್ವಿುಕರಿಗೆ ಉದ್ಯೋಗ ನೀಡುವ ನಿಟ್ಟಿನಲ್ಲಿ ರೂಪಿಸಿರುವ ಬೃಹತ್ ಯೋಜನೆ ‘ಗರೀಬ್ ಕಲ್ಯಾಣ್ ರೋಜ್​ಗಾರ್ ಅಭಿಯಾನ’ಕ್ಕೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ವಿಡಿಯೋ ಕಾನ್ಪರೆನ್ಸ್ ಮೂಲಕ ಚಾಲನೆ ನೀಡಿದ್ದಾರೆ. 50 ಸಾವಿರ ಕೋಟಿ ರೂ. ಮೊತ್ತದ ಯೋಜನೆ ಇದಾಗಿದೆ.

ಬಿಹಾರದ ಖಗೇರಿಯಾ ಜಿಲ್ಲೆಯ ತೆಲಿಹಾರ್ ಗ್ರಾಮದಿಂದ ಯೋಜನೆಗೆ ಚಾಲನೆ ನೀಡಲಾಗಿದೆ. ಲಾಕ್​ಡೌನ್ ಬಳಿಕ ನಗರಗಳಿಂದ ಗ್ರಾಮಗಳಿಗೆ ಹೆಚ್ಚು ಕಾರ್ವಿುಕರು ಹಿಂದಿರುಗಿರುವ ಒಟ್ಟು 6 ರಾಜ್ಯಗಳ (ಬಿಹಾರ, ಉತ್ತರಪ್ರದೇಶ, ಮಧ್ಯಪ್ರದೇಶ, ಜಾರ್ಖಂಡ್, ಒಡಿಶಾ, ರಾಜಸ್ಥಾನ) 116 ಜಿಲ್ಲೆಗಳಲ್ಲಿ ಯೋಜನೆ ಕೈಗೊಳ್ಳಲಾಗುತ್ತದೆ. 125 ದಿನಗಳ ಕಾಲ ಕಾರ್ವಿುಕರಿಗೆ ವಿವಿಧ ಕ್ಷೇತ್ರಗಳಲ್ಲಿ ಅವರವರ ಗ್ರಾಮ, ಮನೆಗಳ ಸಮೀಪವೇ ಉದ್ಯೋಗ ಕಲ್ಪಿಸಲಾಗುತ್ತದೆ. ಬಿಹಾರದಲ್ಲಿ ವಿಧಾನಸಭೆ ಚುನಾವಣೆ ಮುಂದಿರುವುದರಿಂದ ಮೊದಲು ಅಲ್ಲಿಂದಲೇ ಯೋಜನೆ ಆರಂಭಿಸಲಾಗಿದೆ ಎನ್ನಲಾಗಿದೆ. ಯಾವ ಜಿಲ್ಲೆಗಳಿಗೆ ನಗರಗಳಿಂದ ಹೆಚ್ಚು ವಲಸಿಗರು ವಾಪಸ್ ಆಗಿದ್ದಾರೆ ಎಂಬ ಅಂಕಿ ಅಂಶಗಳನ್ನು ಪರಿಗಣಿಸಿ ಯೋಜನೆಗೆ ಜಿಲ್ಲೆಗಳನ್ನು ಆಯ್ಕೆ ಮಾಡಲಾಗಿದೆ. ಆಯ್ಕೆಯಾಗಿರುವ 116 ಜಿಲ್ಲೆಗಳಲ್ಲಿ ಅತೀ ಹೆಚ್ಚು ಅಂದರೆ 32 ಬಿಹಾರದಲ್ಲಿವೆ. ಉತ್ತರಪ್ರದೇಶದ 31, ಮಧ್ಯಪ್ರದೇಶದ 24, ರಾಜಸ್ಥಾನದ 22, ಒಡಿಶಾದ 4 ಹಾಗೂ ಜಾರ್ಖಂಡ್​ನ 3 ಜಿಲ್ಲೆಗಳು ಪಟ್ಟಿಯಲ್ಲಿವೆ. ಈ ಜಿಲ್ಲೆಗಳಿಗೆ ದೇಶದ ಪ್ರಮುಖ ನಗರಗಳು ಹಾಗೂ ಹೊರ ರಾಜ್ಯಗಳಿಂದ ಸುಮಾರು 88 ಲಕ್ಷಕ್ಕೂ ಅಧಿಕ ಕಾರ್ವಿುಕರು ಲಾಕ್​ಡೌನ್​ನಿಂದ ಉದ್ಯೋಗ ಕಳೆದುಕೊಂಡು ಮರಳಿದ್ದಾರೆ.

ಯೋಜನೆಯಡಿ ಏನೇನು ನಿರ್ವಣ?: ಗರೀಬ್ ಕಲ್ಯಾಣ ಅಡಿಯಲ್ಲಿ ಕೇಂದ್ರ ಸರ್ಕಾರದ ಮಹತ್ವದ ಯೋಜನೆಗಳು ಸೇರಿ ಸುಮಾರು 25 ಕ್ಷೇತ್ರಗಳಲ್ಲಿ ಉದ್ಯೋಗಗಳನ್ನು ಸೃಷ್ಟಿ ಮಾಡಲಾಗುತ್ತದೆ. ಗ್ರಾಮೀಣ ವಸತಿ, ತೋಟಗಾರಿಕೆ, ನೀರಿನ ಸಂರಕ್ಷಣೆ, ಅಂಗನವಾಡಿ ಕಟ್ಟಡಗಳ ನಿರ್ವಣ, ಪಕ್ಕಾ ಮನೆಗಳ ನಿರ್ವಣ, ಜಲ-ಜೀವನ್ ಮಿಷನ್ ಕಾಮಗಾರಿ, ರಸ್ತೆಗಳ ನಿರ್ಮಾಣ ಮಾಡಲಾಗುತ್ತದೆ.

ಯೋಜನೆಗೆ ಕಾರ್ವಿುಕರೇ ಸ್ಪೂರ್ತಿ: ವಲಸಿಗ ಕಾರ್ವಿುಕರಿಗಾಗಿ ಜಾರಿಗೊಳಿಸ ಲಾಗಿರುವ ಈ ಯೋಜನೆಗೆ ಕಾರ್ವಿುಕರೇ ಸ್ಪೂರ್ತಿ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಭಾರತದ ಹಳ್ಳಿಗಳು ಕರೊನಾವನ್ನು ಎದುರಿಸಿದ ರೀತಿ ನಗರಗಳಿಗೆ ಮಾದರಿಯಾಗಿದೆ. ಸೋಂಕು ಪಸರಿಸುವಿಕೆಯನ್ನು ಹಳ್ಳಿಗಳ ಜನರು ಅತ್ಯಂತ ಪರಿಣಾಮಕಾರಿಯಾಗಿ ತಡೆಗಟ್ಟಿದ್ದಾರೆ. ದೇಶದ ಸುಮಾರು 80 ರಿಂದ 85 ಕೋಟಿ ಜನಸಂಖ್ಯೆ ಹಳ್ಳಿಗಳಲ್ಲಿ ವಾಸಿಸುತ್ತದೆ. ಇದು ಇಡೀ ಯುರೋಪ್, ಅಮೆರಿಕ, ರಷ್ಯಾ ಮತ್ತು ಆಸ್ಟ್ರೇಲಿಯಾದ ಜನಸಂಖ್ಯೆಗಿಂತ ಹೆಚ್ಚು. ಇಷ್ಟು ಪ್ರಮಾಣದ ಜನಸಂಖ್ಯೆ ಕರೊನಾ ವಿರುದ್ಧ ಹೋರಾಡುವುದು ನಿಜಕ್ಕೂ ದೊಡ್ಡ ಸವಾಲು ಎಂದು ಮೋದಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net