

ಅಹಮದಾಬಾದ್: ಬಿಹಾರ ಮತ್ತು ಉತ್ತರ ಪ್ರದೇಶಗಳಿಗೆ ತೆರಳುತ್ತಿದ್ದ ಶ್ರಮಿಕ್ ಸ್ಪೆಶಲ್ ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಆಯಾ ರಾಜ್ಯ ಸರ್ಕಾರಗಳ ಮನವಿ ಮೇರೆಗೆ ಅಧಿಕಾರಿಗಳು ಕೈಗೊಂಡಿರುವ ಈ ನಿರ್ಧಾರ ವಲಸೆ ಕಾರ್ಮಿಕರನ್ನು ಕೆರಳಿಸಿದೆ.
ಗುಜರಾತ್ನ ರಾಜ್ಕೋಟ್ ಬಳಿಯ ಶಾಪಾರ್ ಕೈಗಾರಿಕಾ ಪ್ರದೇಶದಲ್ಲಿರುವ ವಲಸೆ ಕಾರ್ಮಿಕರು ದಾಂಧಲೆ ಎಬ್ಬಿಸಿ, ರಸ್ತೆ ಬದಿಗಳಲ್ಲಿ ನಿಲ್ಲಿಸಲಾಗಿದ್ದ ವಾಹನಗಳ ಮೇಲೆ ಕಲ್ಲು ತೂರಿದ್ದಲ್ಲದೆ, ಅವುಗಳನ್ನು ಉರುಳಿಸಿ ಜಖಂಗೊಳಿಸಿದ್ದಾರೆ.
ವಲಸೆ ಕಾರ್ಮಿಕರ ದಾಂಧಲೆಯನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಕೋಟ್ ಎಸ್ಪಿ (ಗ್ರಾಮಾಂತರ) ಬಲರಾಮ್ ಮೀನಾ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.
ಗಡಿಯಲ್ಲಿ ಗಲಾಟೆ: ದೂರ ದೂರದಿಂದ ಬಂದಿರುವ ತಮಗೆ ಉತ್ತರ ಪ್ರದೇಶಕ್ಕೆ ಪ್ರವೇಶಿಸದಂತೆ ಬ್ಯಾರಿಕೇಡ್ಗಳನ್ನು ಅಳವಡಿಸಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ವಲಸೆ ಕಾರ್ಮಿಕರು, ಬ್ಯಾರಿಕೇಡ್ಗಳನ್ನು ಮುರಿದು ಉತ್ತರ ಪ್ರದೇಶವನ್ನು ಪ್ರವೇಶಿಸಿದ್ದಾರೆ.
ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶ ಗಡಿ ರೇವಾ ಬಳಿಯ ಚಾಕ್ಘಾಟ್ ಪ್ರದೇಶದಲ್ಲಿ ವಲಸೆ ಕಾರ್ಮಿಕರು ಪ್ರವೇಶಿಸದಂತೆ ತಡೆಗೋಡೆಗಳನ್ನು ನಿರ್ಮಿಸಲಾಗಿತ್ತು. ಸಾವಿರಾರು ಸಂಖ್ಯೆಯಲ್ಲಿದ್ದ ವಲಸೆ ಕಾರ್ಮಿಕರು ಅವನ್ನು ಮುರಿದು ಉತ್ತರ ಪ್ರದೇಶವನ್ನು ಪ್ರವೇಶಿಸಿದರು. ಅಲ್ಲಿ ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸರು ಮೂಕಪ್ರೇಕ್ಷಕರಾಗಬೇಕಾಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.