

ಪಟನಾ: ವಲಸೆ ಕಾರ್ಮಿಕರನ್ನು ಗುಜರಾತಿನಿಂದ ಬಿಹಾರಕ್ಕೆ ಕರೆದೊಯ್ಯುತ್ತಿದ್ದ ಶ್ರಮಿಕ ವಿಶೇಷ ರೈಲು ಕರ್ನಾಟಕಕ್ಕೆ ತಲುಪಿದ ವಿಚಿತ್ರ ಘಟನೆ ವರದಿಯಾಗಿದೆ.
ರೈಲ್ವೆ ಇಲಾಖೆ ಸಾವಿರಾರು ವಲಸೆ ಕಾರ್ಮಿಕರನ್ನು ಅವರವರ ಊರಿಗೆ ತಲುಪಿಸಿ ಶ್ಲಾಘನೀಯ ಕೆಲಸ ಮಾಡಿರುವುದು ನಿಜವಾದರೂ, ಏಕಾಏಕಿ ಎದುರಾದ ಈ ಕೆಲಸವನ್ನು ನಿರ್ವಹಿಸುವಲ್ಲಿ ಅದು ‘ಹಳಿ ತಪ್ಪಿರುವುದಂತೂ’ ನಿಜ.
ಇಲ್ಲದಿದ್ದರೆ ಮೇ 16ರಂದು ಉತ್ತರ ಬಿಹಾರದ ಛಾಪ್ರಾಕ್ಕೆ ಹೋಗಲು ಸೂರತ್ನಿಂದ ಹೊರಟ ರೈಲು ಮೇ 18ರಂದು ಬೆಂಗಳೂರು ತಲುಪಲು ಹೇಗೆ ಸಾಧ್ಯ? ಈ ರೈಲು ಎಲ್ಲಿಗೆ ಹೋಯಿತು ಎಂದು ತಲೆ ಕೆರೆದುಕೊಂಡ ಅಧಿಕಾರಿಗಳು ನಂತರ ತಮ್ಮ ತಪ್ಪನ್ನು ಸರಿಪಡಿಸಿಕೊಂಡು ಮೇ 25ರಂದು ಅದನ್ನು ಛಾಪ್ರಾಕ್ಕೆ ತಲುಪಿಸಿ ನಿಟ್ಟುಸಿರು ಬಿಟ್ಟಿದ್ದಾರೆ.
ಆದರೆ ಇಂತಹ ಸುಡುಸುಡು ಬಿಸಿಲಿನಲ್ಲಿ ಆ ರೈಲಿನಲ್ಲಿದ್ದ ಪ್ರಯಾಣಿಕರು ಸತತ ಒಂಬತ್ತು ದಿನಗಳ ಪ್ರಯಾಣವನ್ನು ಹೇಗೆ ಸಹಿಸಿಕೊಂಡಿರಬಹುದು! ಈ ವಿಷಯವನ್ನು ಪಟ್ನಾಕ್ಕೆ ಬಂದು ತಲುಪಿದ ಪ್ರಯಾಣಿಕರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಇದನ್ನು ರೈಲ್ವೆ ಇಲಾಖೆಯ ಅಧಿಕಾರಿಗಳು ಅಧಿಕೃತವಾಗಿ ಅಲ್ಲಗಳೆದಿದ್ದರೂ, ಉತ್ತರಪ್ರದೇಶದ ಕೆಲವು ಅಧಿಕಾರಿಗಳು ಅನಧಿಕೃತವಾಗಿ ಖಚಿತಪಡಿಸಿದ್ದಾರೆ.
ಗುಜರಾತ್ನ ಸೂರತ್ನಿಂದ ಬಿಹಾರಕ್ಕೆ ಹೋಗಬೇಕಾಗಿದ್ದ ರೈಲು ಮಹಾರಾಷ್ಟ್ರದ ಭುಸಾವಲ್ ಎಂಬಲ್ಲಿ ‘ದಿಕ್ಕು ತಪ್ಪಿ’ತು. ಉತ್ತರ ಭಾಗದ ಪ್ರಯಾಗ್ರಾಜ್/ಅಲಹಾಬಾದ್ನತ್ತ ಹೋಗುವ ಬದಲು ದಕ್ಷಿಣ ಭಾಗದ ಬೆಂಗಳೂರಿನತ್ತ ಹೋಯಿತು ಎಂದು ದೃಢಪಡಿಸಿದ್ದಾರೆ.
ಇಷ್ಟೇ ಅಲ್ಲ, 1200 ಕಾರ್ಮಿಕರನ್ನು ಸೂರತ್ನಿಂದ ಬಿಹಾರದ ಛಾಪ್ರಾಕ್ಕೆ ಕರೆದೊಯ್ಯುತ್ತಿದ್ದ ಇನ್ನೊಂದು ಶ್ರಮಿಕ್ ರೈಲು ಒಡಿಶಾದ ರೂರ್ಕೆಲಾಕ್ಕೆ ತಲುಪಿದ ಘಟನೆಯೂ ನಡೆದಿದೆ. ಇಂಥವೇ ಇನ್ನೆರಡು ರೈಲುಗಳು ಪಟ್ನಾ ತಲುಪುವ ಬದಲು ಪಶ್ಚಿಮ ಬಂಗಾಳದ ಪುರುಲಿಯಾ ಮತ್ತು ಗಯಾ ತಲುಪಿರುವುದೂ ವರದಿಯಾಗಿದೆ.