

ಬಾಗಲಕೋಟೆ: ವಲಸೆ ಕಾರ್ಮಿಕರನ್ನು ಅವರ ಊರಿಗೆ ಕಳಿಸಲು ನಮ್ಮ ರಾಜ್ಯ ಸರ್ಕಾರ ಬಸ್, ಟ್ರೇನ್ಗಳ ವ್ಯವಸ್ಥೆ ಮಾಡಿತ್ತು. ಅನೇಕ ಕಾರ್ಮಿಕರನ್ನು ಅವರ ಊರಿಗೆ ಕಳಿಸಿಕೊಟ್ಟಾಗಿದೆ. ಆದರೆ ಬೇರೆ ರಾಜ್ಯದಲ್ಲಿ ಸಿಲುಕಿರುವ ನಮ್ಮ ರಾಜ್ಯದ ವಲಸೆ ಕಾರ್ಮಿಕರು ಊರಿಗೆ ಬರಲಾಗದೆ ಪರದಾಡುತ್ತಿದ್ದಾರೆ.
ಮಹಾರಾಷ್ಟ್ರದಲ್ಲಿ ಒಂದಷ್ಟು ಮಂದಿ ಕನ್ನಡಿಗರು ಸಿಲುಕಿಕೊಂಡಿದ್ದು, ಅವರಿಗೆ ಮರಳಿ ರಾಜ್ಯಕ್ಕೂ ಬರಲಾಗದೆ, ಅಲ್ಲಿಯೂ ಇರಲಾಗದೆ ಕಷ್ಟಪಡುತ್ತಿದ್ದಾರೆ.
ನಮ್ಮ ರಾಜ್ಯದ, ಬಾಗಲಕೋಟೆ, ಗದಗ, ಹಾವೇರಿ, ಬೆಳಗಾವಿ ಜಿಲ್ಲೆಗಳ 14 ವಲಸೆ ಕಾರ್ಮಿಕರು ಕೆಲಸ ಅರಸಿ ಮಹಾರಾಷ್ಟ್ರಕ್ಕೆ ತೆರಳಿದ್ದರು. ಅವರೆಲ್ಲ ಈಗ ಕೊಲ್ಲಾಪುರ ಜಿಲ್ಲೆಯ ಶಿರೋಳ ತಾಲೂಕಿನ ಜೈಸಿಂಗಪುರ ಗ್ರಾಮದಲ್ಲಿ ಇದ್ದಾರೆ.
ಇವರನ್ನೆಲ್ಲ ಜೈಸಿಂಗಪುರ ಗ್ರಾಮದಲ್ಲಿ ಕ್ವಾರಂಟೈನ್ಗೆ ಒಳಪಡಿಸಲಾಗಿತ್ತು. ಅದರ ಅವಧಿ ಕೂಡ ಮುಗಿದಿದೆ. ಆದರೂ ಕರ್ನಾಟಕ್ಕೆ ತೆರಳಲು ಮಹಾರಾಷ್ಟ್ರ ಸರ್ಕಾರ ಅವಕಾಶ ಕೊಡುತ್ತಿಲ್ಲ. ಸ್ಥಳೀಯ ಅಧಿಕಾರಿಗಳು ಅನುಮತಿ ನೀಡುತ್ತಿಲ್ಲ ಎಂದು ಕಾರ್ಮಿಕರು ಬೇಸರ ವ್ಯಕ್ತಪಡಿಸಿದ್ದಾರೆ.
ಲಾಕ್ಡೌನ್ ವಿಸ್ತರಣೆಯಾಗುತ್ತಿದ್ದಂತೆ ಕರ್ನಾಟಕಕ್ಕೆ ತೆರಳಲು ಕಾರ್ಮಿಕರು ನಡೆದುಕೊಂಡೇ ಹೊರಟಿದ್ದರು. ಆದರೆ ಚೆಕ್ಪೋಸ್ಟ್ವೊಂದರ ಬಳಿ ತಡೆದ ಮಹಾರಾಷ್ಟ್ರ ಪೊಲೀಸರು ಇವರೆಲ್ಲರನ್ನೂ ಜೈಸಿಂಗಪುರ ಸರ್ಕಾರಿ ಶಾಲೆಯಲ್ಲಿ ಕ್ವಾರಂಟೈನ್ಗೆ ಹಾಕಿದ್ದರು. ಕ್ವಾರಂಟೈನ್ ಮುಗಿದೇ 15 ದಿನಗಳು ಕಳೆದಿವೆ.
ನಮ್ಮನ್ನು ಊರಿಗೆ ಹೋಗಲು ಬಿಡುತ್ತಿಲ್ಲ. ಗ್ರಾಮದಿಂದ ಹೊರಬಿದ್ದರೆ ಸಾಕು ಪೊಲೀಸರು ಲಾಠಿ ಎತ್ತುತ್ತಿದ್ದಾರೆ. ನಮ್ಮನ್ನು ಇಲ್ಲಿಂದ ಕಳಿಸಿಕೊಡಿ ಎಂದು ಸ್ಥಳೀಯ ಅಧಿಕಾರಿಗಳ ಬಳಿ ಮನವಿ ಮಾಡುತ್ತಿದ್ದೇವೆ. ಆದರೆ ಬೆಳಗಾವಿ ಜಿಲ್ಲಾಧಿಕಾರಿ ಅನುಮತಿ ನೀಡುತ್ತಿಲ್ಲ ಎಂದು ಅವರು ಹೇಳುತ್ತಿದ್ದಾರೆ. ಕ್ವಾರಂಟೈನ್ ಮುಗಿದಿದ್ದಕ್ಕೆ ಸರ್ಟಿಫಿಕೇಟ್ ಕೂಡ ಕೊಡುತ್ತಿಲ್ಲ ಎಂದು ಕಾರ್ಮಿಕರು ಅಲವತ್ತುಕೊಂಡಿದ್ದಾರೆ. (ದಿಗ್ವಿಜಯ ನ್ಯೂಸ್)