ಶಾಂತಿ ಸ್ಥಾಪಿಸಿ ಇಲ್ಲದಿದ್ರೆ ಮುಂದಿನ ದಾಳಿಗಳು ತುಂಬಾ ಭೀಕರವಾಗಿರುತ್ತೆ: ಇರಾನ್​​ಗೆ ಟ್ರಂಪ್​ ಖಡಕ್​ ವಾರ್ನಿಂಗ್! Donald Trump

Donald Trump
Published on

Donald Trump : ಇರಾನ್‌ನ ಮೂರು ಪ್ರಮುಖ ಪರಮಾಣು ನೆಲೆಗಳಾದ ಫೋರ್ಡೋ, ನಟಾಂಜ್ ಮತ್ತು ಇಸ್ಫಹಾನ್ ಮೇಲೆ ಅಮೆರಿಕದ ಪಡೆಗಳು ಸಂಘಟಿತ ವೈಮಾನಿಕ ದಾಳಿ ನಡೆಸಿದ ಕೆಲವು ಗಂಟೆಗಳ ನಂತರ, ಭಾನುವಾರ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಈ ಕಾರ್ಯಾಚರಣೆಯನ್ನು "ಅದ್ಭುತ ಮಿಲಿಟರಿ ಯಶಸ್ಸು" ಎಂದು ಕರೆದರು. ಇರಾನ್‌ನ ಪರಮಾಣು ಸಾಮರ್ಥ್ಯಗಳನ್ನು ನಾಶ ಮಾಡುವ ಮೂಲಕ ಈ ಕಾರ್ಯಾಚರಣೆ ತನ್ನ ಪ್ರಾಥಮಿಕ ಗುರಿಯನ್ನು ಸಾಧಿಸಿದೆ ಎಂದರು.

ಮಧ್ಯಪ್ರಾಚ್ಯದ ಪೀಡಕನಾಗಿರುವ ಇರಾನ್ ಈಗ ಶಾಂತಿಯನ್ನು ಸ್ಥಾಪಿಸಬೇಕಿದೆ. ಒಂದು ವೇಳೆ ಶಾಂತಿ ಸ್ಥಾಪನೆ ಮಾಡದಿದ್ದರೆ, ಭವಿಷ್ಯದ ದಾಳಿಗಳು ತುಂಬಾ ದೊಡ್ಡದಾಗಿರುತ್ತವೆ ಎಂದು ಖಡಕ್​ ಎಚ್ಚರಿಕೆ ನೀಡಿದ ಟ್ರಂಪ್​, ಹಲವು ಟಾರ್ಗೆಟ್​ ಉಳಿದಿವೆ ಎಂಬುದನ್ನು ನೆನಪಿಡಿ. ಇಂದಿನ ಟಾರ್ಗೆಟ್​ ಅವೆಲ್ಲವುಗಳಲ್ಲಿ ಅತ್ಯಂತ ಕಷ್ಟಕರವಾಗಿತ್ತು ಮತ್ತು ಅತ್ಯಂತ ಮಾರಕವಾಗಿತ್ತು ಎಂದು ಟ್ರಂಪ್​ ಹೇಳಿದ್ದಾರೆ.

ಇರಾನ್‌ನ ಪರಮಾಣು ಸಾಮರ್ಥ್ಯವನ್ನು ನಾಶಪಡಿಸುವುದು ಮತ್ತು ವಿಶ್ವದ ನಂಬರ್ ಒನ್ ಭಯೋತ್ಪಾದನೆಯನ್ನು ಪ್ರಾಯೋಜಿಸುವ ರಾಷ್ಟ್ರದಿಂದ ಉಂಟಾಗುವ ಪರಮಾಣು ಬೆದರಿಕೆಯನ್ನು ನಿಲ್ಲಿಸುವುದು ನಮ್ಮ ಉದ್ದೇಶವಾಗಿತ್ತು. ಇದೀಗ ಇರಾನ್‌ನ ಪ್ರಮುಖ ಪರಮಾಣು ಸೌಲಭ್ಯಗಳನ್ನು ಸಂಪೂರ್ಣವಾಗಿ ನಾಶಪಡಿಸಲಾಗಿದೆ ಎಂದು ಟ್ರಂಪ್ ಶ್ವೇತಭವನದಲ್ಲಿ ಸುದ್ದಿಗಾರರಿಗೆ ಹೇಳಿದರು.

ಇರಾನ್​ ಬೇಗನೆ ಶಾಂತಿಯನ್ನು ಕಾಪಾಡಿಕೊಳ್ಳದಿದ್ದರೆ, ನಾವು ಆ ಇತರ ಟಾರ್ಗೆಟ್​ಗಳ ವಿರುದ್ಧ ನಿಖರತೆ, ವೇಗ ಮತ್ತು ಕೌಶಲ್ಯದಿಂದ ಹೋರಾಡುತ್ತೇವೆ ಎಂದು ಟ್ರಂಪ್ ಎಚ್ಚರಿಸಿದರು. ಇದೇ ಸಂದರ್ಭದಲ್ಲಿ ಇಸ್ರೇಲ್ ಮತ್ತು ಅದರ ನಾಯಕತ್ವದ ಜಂಟಿ ಸಮನ್ವಯವನ್ನು ಟ್ರಂಪ್​ ಶ್ಲಾಘಿಸಿದರು. ಪ್ರಧಾನಿ ನೇತುನ್ಯಾಹು ಅವರಿಗೆ ನಾನು ಧನ್ಯವಾದ ಹೇಳಲು ಮತ್ತು ಅಭಿನಂದಿಸಲು ಬಯಸುತ್ತೇನೆ. ಬಹುಶಃ ಯಾವುದೇ ತಂಡವು ಹಿಂದೆಂದೂ ಕೆಲಸ ಮಾಡದ ರೀತಿಯಲ್ಲಿ ನಾವು ಒಂದು ತಂಡವಾಗಿ ಕೆಲಸ ಮಾಡಿದ್ದೇವೆ. ಇಸ್ರೇಲ್‌ಗೆ ಈ ಭಯಾನಕ ಬೆದರಿಕೆಯನ್ನು ಅಳಿಸಿಹಾಕುವಲ್ಲಿ ನಾವು ಬಹಳ ದೂರ ಸಾಗಿದ್ದೇವೆ. ಅವರು ಮಾಡಿದ ಅದ್ಭುತ ಕೆಲಸಕ್ಕಾಗಿ ನಾನು ಇಸ್ರೇಲ್ ಮಿಲಿಟರಿಗೆ ಧನ್ಯವಾದ ಹೇಳಲು ಬಯಸುತ್ತೇನೆ ಎಂದರು.

ಇದಕ್ಕೂ ಮೊದಲು, ತಮ್ಮ ಸಾಮಾಜಿಕ ಜಾಲತಾಣ ವೇದಿಕೆ ಟ್ರೂತ್​ನಲ್ಲಿ ಬರೆದುಕೊಂಡಿದ್ದ ಟ್ರಂಪ್​, ನಾವು ಫೋರ್ಡೋ, ನಟಾಂಜ್ ಮತ್ತು ಎಸ್ಫಹಾನ್ ಸೇರಿದಂತೆ ಇರಾನ್‌ನಲ್ಲಿರುವ ಮೂರು ಪರಮಾಣು ತಾಣಗಳ ಮೇಲೆ ಯಶಸ್ವಿ ದಾಳಿಯನ್ನು ಪೂರ್ಣಗೊಳಿಸಿದ್ದೇವೆ. ಸದ್ಯ ನಮ್ಮ ಎಲ್ಲಾ ವಿಮಾನಗಳು ಈಗ ಇರಾನ್ ವಾಯುಪ್ರದೇಶದ ಹೊರಗೆ ಇವೆ. ಬಾಂಬ್‌ಗಳ ಸಂಪೂರ್ಣ ಪೇಲೋಡ್ ಅನ್ನು ಪ್ರಾಥಮಿಕ ತಾಣವಾದ ಫೋರ್ಡೋದಲ್ಲಿ ಬೀಳಿಸಲಾಯಿತು. ಎಲ್ಲಾ ವಿಮಾನಗಳು ಸುರಕ್ಷಿತವಾಗಿ ಮನೆಗೆ ಮರಳುತ್ತಿವೆ. ನಮ್ಮ ಮಹಾನ್ ಅಮೆರಿಕನ್ ಯೋಧರಿಗೆ ಅಭಿನಂದನೆಗಳು. ಜಗತ್ತಿನಲ್ಲಿ ಬೇರೆ ಯಾವುದೇ ಸೈನ್ಯವು ಇದನ್ನು ಮಾಡಲು ಸಾಧ್ಯವಿಲ್ಲ. ಈಗ ಶಾಂತಿಯ ಸಮಯ ಎಂದು ಟ್ರಂಪ್​ ಹೇಳಿದರು.

ಪ್ರಾಥಮಿಕ ವರದಿಗಳ ಪ್ರಕಾರ, ಅಮೆರಿಕ, ಇರಾನ್​ ಮೇಲೆ ದಾಳಿ ನಡೆಸಲು ಎರಡು ಬಿ2 ಬಾಂಬರ್ ವಿಮಾನಗಳನ್ನು ಬಳಸಿದೆ. ಅಮೆರಿಕ ಈ ಮದ್ದುಗುಂಡುಗಳನ್ನು ಬಳಸುತ್ತಿರುವುದು ಇದೇ ಮೊದಲು. ಕಾರ್ಯಾಚರಣೆಯ ಹಿಂದಿನ ರಾತ್ರಿ ಫೋನ್ ಕರೆಯ ಸಮಯದಲ್ಲಿ ಅಧ್ಯಕ್ಷ ಟ್ರಂಪ್ ಅವರು ಇಸ್ರೇಲಿ ಪ್ರಧಾನಿ ಬೆಂಜಮಿನ್ ನೇತುನ್ಯಾಹು ಅವರಿಗೆ ಯೋಜಿತ ದಾಳಿಗಳ ಬಗ್ಗೆ ವೈಯಕ್ತಿಕವಾಗಿ ಮಾಹಿತಿ ನೀಡಿದರು ಎಂದು ಅಮೆರಿಕದ ಮಾಧ್ಯಮ ವರದಿಗಳು ತಿಳಿಸಿವೆ.

30,000 ಪೌಂಡ್ ತೂಕದ “ಬಂಕರ್ ಬಸ್ಟರ್” ಬಾಂಬ್ ಹೊಂದಿದ ಅಮೆರಿಕನ್ ಸ್ಟೆಲ್ತ್ ಬಾಂಬರ್‌ಗಳು ಮಾತ್ರ ಇರಾನ್​ನ ಫೋರ್ಡೋವ್‌ನಂತಹ ಆಳವಾಗಿ ಹೂತುಹೋಗಿರುವ ಪರಮಾಣು ಸೌಲಭ್ಯಗಳನ್ನು ತಲುಪುವ ಸಾಮರ್ಥ್ಯ ಹೊಂದಿವೆ ಎಂದು ಅಮೆರಿಕ ಮತ್ತು ಇಸ್ರೇಲಿ ಅಧಿಕಾರಿಗಳು ಬಹಳ ಹಿಂದಿನಿಂದಲೂ ವಾದಿಸುತ್ತಿದ್ದಾರೆ. ತನ್ನ ಪರಮಾಣು ನೆಲೆಗಳ ಮೇಲಿನ ದಾಳಿಗಳು ಪ್ರತೀಕಾರಕ್ಕೆ ಕಾರಣವಾಗುತ್ತವೆ ಎಂದು ಇರಾನ್ ಪದೇ ಪದೇ ಎಚ್ಚರಿಸುತ್ತಲೇ ಇದೆ. ಇರಾನ್ ಮೇಲಿನ ದಾಳಿಯಲ್ಲಿ ಅಮೆರಿಕದ ಯಾವುದೇ ಪಾಲ್ಗೊಳ್ಳುವಿಕೆ “ತುಂಬಾ ತುಂಬಾ ಅಪಾಯಕಾರಿ” ಎಂದು ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಈ ಹಿಂದೆಯೇ ಹೇಳಿದ್ದರು. ಇದೀಗ ಅಮೆರಿಕ ಯುದ್ಧಕ್ಕೆ ಎಂಟ್ರಿಯಾಗಿದ್ದು, ಇದು ಯಾವ ಸ್ವರೂಪ ಪಡೆಯುತ್ತದೆ ಎಂದು ಕಾದು ನೋಡಬೇಕಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net