

Donald Trump : ಇರಾನ್ನ ಫೋರ್ಡೋ, ನಟಾಂಜ್ ಮತ್ತು ಇಸ್ಫಹಾನ್ ಪರಮಾಣು ತಾಣಗಳ ಮೇಲೆ ಅಮೆರಿಕದ ಪಡೆಗಳು ಸಂಘಟಿತ ವೈಮಾನಿಕ ದಾಳಿಗಳನ್ನು ನಡೆಸಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಈ ಮೂಲಕ ಇರಾನ್ ವಿರುದ್ಧ ಯುದ್ಧ ಸಾರಿರುವ ಇಸ್ರೇಲ್ಗೆ ಜತೆ ಅಧಿಕೃತವಾಗಿ ಅಮೆರಿಕ ಕೈ ಜೋಡಿಸಿದೆ.
ಇಸ್ರೇಲ್ ಮತ್ತು ಇರಾನ್ ನಡುವೆ ಕಳೆದ ಒಂದು ವಾರದ ಹಿಂದೆ ಶುರುವಾದ ಯುದ್ಧದಲ್ಲಿ ಇಸ್ರೇಲ್ ಬೆಂಬಲವಾಗಿ ಇರಾನ್ ಮೇಲೆ ಅಮೆರಿಕ ನಡೆಸಿದ ಮೊದಲ ನೇರ ಮಿಲಿಟರಿ ಕಾರ್ಯಾಚರಣೆ ಇದಾಗಿದೆ. ಇರಾನ್ನ ವಾಯು ರಕ್ಷಣಾ ವ್ಯವಸ್ಥೆಗಳು ಮತ್ತು ಕ್ಷಿಪಣಿ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್ ದಾಳಿಗಳನ್ನು ನಡೆಸುತ್ತಲೇ ಇದೆ. ಇದಕ್ಕೆ ಪ್ರತಿಯಾಗಿ ಇರಾನ್ ಕೂಡ ದಾಳಿ ನಡೆಸುತ್ತಿದೆ. ಇದೀಗ ಅಮೆರಿಕ ಕೂಡ ಇಸ್ರೇಲ್ ಜತೆ ಕೈಜೋಡಿಸಿದ್ದು, ಇರಾನ್ನ ಪರಮಾಣು ಸಾಮರ್ಥ್ಯಗಳನ್ನು ದುರ್ಬಲಗೊಳಿಸುವ ಗುರಿಯೊಂದಿಗೆ ದಾಳಿಗಳನ್ನು ನಡೆಸುತ್ತಿವೆ. ಸಿಬಿಎಸ್ ನ್ಯೂಸ್ ಪ್ರಕಾರ, ಪ್ರಸ್ತುತ ನಡೆದಿರುವ ವೈಮಾನಿಕ ದಾಳಿಗಳು ವ್ಯಾಪ್ತಿಗೆ ಸೀಮಿತವಾಗಿದ್ದು, ಅಮೆರಿಕ, ಇರಾನ್ನಲ್ಲಿ ಯಾವುದೇ ಆಡಳಿತ ಬದಲಾವಣೆಯನ್ನು ಬಯಸುತ್ತಿಲ್ಲ ಎಂದು ಸ್ಪಷ್ಟಪಡಿಸಲು ಅಮೆರಿಕ ಶನಿವಾರ ರಾಜತಾಂತ್ರಿಕವಾಗಿ ಇರಾನ್ ಅನ್ನು ಸಂಪರ್ಕಿಸಿದೆ ಎಂದು ವರದಿಯಾಗಿದೆ.
ಬಾಂಬ್ ದಾಳಿಯ ಬೆನ್ನಲ್ಲೇ ಟ್ರೂತ್ ಹೆಸರಿನ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, ನಾವು ಫೋರ್ಡೋ, ನಟಾಂಜ್ ಮತ್ತು ಎಸ್ಫಹಾನ್ ಸೇರಿದಂತೆ ಇರಾನ್ನಲ್ಲಿರುವ ಮೂರು ಪರಮಾಣು ತಾಣಗಳ ಮೇಲೆ ಯಶಸ್ವಿ ದಾಳಿಯನ್ನು ಪೂರ್ಣಗೊಳಿಸಿದ್ದೇವೆ. ಸದ್ಯ ನಮ್ಮ ಎಲ್ಲಾ ವಿಮಾನಗಳು ಈಗ ಇರಾನ್ ವಾಯುಪ್ರದೇಶದ ಹೊರಗೆ ಇವೆ. ಬಾಂಬ್ಗಳ ಸಂಪೂರ್ಣ ಪೇಲೋಡ್ ಅನ್ನು ಪ್ರಾಥಮಿಕ ತಾಣವಾದ ಫೋರ್ಡೋದಲ್ಲಿ ಬೀಳಿಸಲಾಯಿತು. ಎಲ್ಲಾ ವಿಮಾನಗಳು ಸುರಕ್ಷಿತವಾಗಿ ಮನೆಗೆ ಮರಳುತ್ತಿವೆ. ನಮ್ಮ ಮಹಾನ್ ಅಮೆರಿಕನ್ ಯೋಧರಿಗೆ ಅಭಿನಂದನೆಗಳು. ಜಗತ್ತಿನಲ್ಲಿ ಬೇರೆ ಯಾವುದೇ ಸೈನ್ಯವು ಇದನ್ನು ಮಾಡಲು ಸಾಧ್ಯವಿಲ್ಲ. ಈಗ ಶಾಂತಿಯ ಸಮಯ ಎಂದು ಟ್ರಂಪ್ ಹೇಳಿದ್ದಾರೆ.
ಇರಾನ್ನ ಪರಮಾಣು ತಾಣಗಳ ಮೇಲಿನ ದಾಳಿಗಳನ್ನು ಘೋಷಿಸಿದ ಕೂಡಲೇ, ಟ್ರಂಪ್ ಅವರು ಶ್ವೇತಭವನದಿಂದ ರಾತ್ರಿ 10 ಗಂಟೆಗೆ ರಾಷ್ಟ್ರೀಯ ಭಾಷಣ ಮಾಡುವುದಾಗಿ ಹೇಳಿದರು. ಇದು ಅಮೆರಿಕ, ಇಸ್ರೇಲ್ ಮತ್ತು ಜಗತ್ತಿಗೆ "ಐತಿಹಾಸಿಕ ಕ್ಷಣ" ಎಂದು ಕರೆದರು. ಅಲ್ಲದೆ, ಇರಾನ್ ಈಗ ಈ ಯುದ್ಧವನ್ನು ಕೊನೆಗೊಳಿಸಲು ಒಪ್ಪಿಕೊಳ್ಳಬೇಕು. ಧನ್ಯವಾದಗಳು ಎಂದು ಹೇಳಿದ್ದಾರೆ.
ಪ್ರಾಥಮಿಕ ವರದಿಗಳ ಪ್ರಕಾರ, ಅಮೆರಿಕ, ಇರಾನ್ ಮೇಲೆ ದಾಳಿ ನಡೆಸಲು ಎರಡು ಬಿ2 ಬಾಂಬರ್ ವಿಮಾನಗಳನ್ನು ಬಳಸಿದೆ. ಅಮೆರಿಕ ಈ ಮದ್ದುಗುಂಡುಗಳನ್ನು ಬಳಸುತ್ತಿರುವುದು ಇದೇ ಮೊದಲು. ಕಾರ್ಯಾಚರಣೆಯ ಹಿಂದಿನ ರಾತ್ರಿ ಫೋನ್ ಕರೆಯ ಸಮಯದಲ್ಲಿ ಅಧ್ಯಕ್ಷ ಟ್ರಂಪ್ ಅವರು ಇಸ್ರೇಲಿ ಪ್ರಧಾನಿ ಬೆಂಜಮಿನ್ ನೇತುನ್ಯಾಹು ಅವರಿಗೆ ಯೋಜಿತ ದಾಳಿಗಳ ಬಗ್ಗೆ ವೈಯಕ್ತಿಕವಾಗಿ ಮಾಹಿತಿ ನೀಡಿದರು ಎಂದು ಅಮೆರಿಕದ ಮಾಧ್ಯಮ ವರದಿಗಳು ತಿಳಿಸಿವೆ.
30,000 ಪೌಂಡ್ ತೂಕದ "ಬಂಕರ್ ಬಸ್ಟರ್" ಬಾಂಬ್ ಹೊಂದಿದ ಅಮೆರಿಕನ್ ಸ್ಟೆಲ್ತ್ ಬಾಂಬರ್ಗಳು ಮಾತ್ರ ಇರಾನ್ನ ಫೋರ್ಡೋವ್ನಂತಹ ಆಳವಾಗಿ ಹೂತುಹೋಗಿರುವ ಪರಮಾಣು ಸೌಲಭ್ಯಗಳನ್ನು ತಲುಪುವ ಸಾಮರ್ಥ್ಯ ಹೊಂದಿವೆ ಎಂದು ಅಮೆರಿಕ ಮತ್ತು ಇಸ್ರೇಲಿ ಅಧಿಕಾರಿಗಳು ಬಹಳ ಹಿಂದಿನಿಂದಲೂ ವಾದಿಸುತ್ತಿದ್ದಾರೆ. ತನ್ನ ಪರಮಾಣು ನೆಲೆಗಳ ಮೇಲಿನ ದಾಳಿಗಳು ಪ್ರತೀಕಾರಕ್ಕೆ ಕಾರಣವಾಗುತ್ತವೆ ಎಂದು ಇರಾನ್ ಪದೇ ಪದೇ ಎಚ್ಚರಿಸುತ್ತಲೇ ಇದೆ. ಇರಾನ್ ಮೇಲಿನ ದಾಳಿಯಲ್ಲಿ ಅಮೆರಿಕದ ಯಾವುದೇ ಪಾಲ್ಗೊಳ್ಳುವಿಕೆ "ತುಂಬಾ ತುಂಬಾ ಅಪಾಯಕಾರಿ" ಎಂದು ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಈ ಹಿಂದೆಯೇ ಹೇಳಿದ್ದರು. ಇದೀಗ ಅಮೆರಿಕ ಯುದ್ಧಕ್ಕೆ ಎಂಟ್ರಿಯಾಗಿದ್ದು, ಇದು ಯಾವ ಸ್ವರೂಪ ಪಡೆಯುತ್ತದೆ ಎಂದು ಕಾದು ನೋಡಬೇಕಿದೆ. (ಏಜೆನ್ಸೀಸ್)