

Microsoft Layoffs: ಒಂದೇ ವರ್ಷದಲ್ಲಿ ಮೂರನೇ ಬಾರಿಗೆ ಉದ್ಯೋಗಿಗಳ ವಜಾಗೊಳಿಸುವಿಕೆ ಪ್ರಕ್ರಿಯೆಗೆ ಇದೀಗ ಹೆಸರಾಂತ ಟೆಕ್ ಸಂಸ್ಥೆ ಮೈಕ್ರೋಸಾಫ್ಟ್ ಎದುರುನೋಡುತ್ತಿದೆ. ಈ ಕಟು ನಿರ್ಧಾರದ ಮೂಲಕ ಮತ್ತೊಮ್ಮೆ ತನ್ನ ಉದ್ಯೋಗಿಗಳಿಗೆ ಆಘಾತ ನೀಡಿದೆ. ತಿಂಗಳಲ್ಲಿ ಇದು ಎರಡನೇ ಸುತ್ತಿನ ವಜಾ ಪ್ರಕ್ರಿಯೆ ಎಂಬುದು ಇಲ್ಲಿ ಗಮನಾರ್ಹ. ಭಾರಿ ಉದ್ಯೋಗ ಕಡಿತಕ್ಕೆ ಸಿದ್ಧತೆ ನಡೆಸುತ್ತಿರುವ ಮೈಕ್ರೋಸಾಫ್ಟ್, ಬರೋಬ್ಬರಿ ಸಾವಿರಕ್ಕೂ ಅಧಿಕ ನೌಕರರಿಗೆ ಗುಡ್ಬೈ ಹೇಳಲು ಮುಂದಾಗಿದೆ. ಸಂಸ್ಥೆಯ ಈ ನಿರ್ಣಯಕ್ಕೆ ಬಲವಾದ ಕಾರಣವೂ ಇದೆ.
2023ರ ಬಳಿಕ ಇದು ಅತಿದೊಡ್ಡ ಸುತ್ತಿನ ಉದ್ಯೋಗ ಕಡಿತವಾಗಿದೆ. ಮೈಕ್ರೋಸಾಫ್ಟ್ ತನ್ನ ಉದ್ಯೋಗಿಗಳಲ್ಲಿ ಶೇ.4ರಷ್ಟು ಅಂದರೆ ಸರಿಸುಮಾರು 9,100 ಉದ್ಯೋಗಿಗಳನ್ನು ಕರ್ತವ್ಯದಿಂದ ವಜಾಗೊಳಿಸಲು ಸಜ್ಜಾಗಿದೆ ಎಂದು ಸಿಯಾಟಲ್ ಟೈಮ್ಸ್ ಬುಧವಾರ (ಜು.02) ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ಜೂನ್ 2024ರ ವೇಳೆಗೆ ಜಾಗತಿಕವಾಗಿ ಸುಮಾರು 2,28,000 ಉದ್ಯೋಗಿಗಳನ್ನು ಹೊಂದಿದ್ದ ಸಂಸ್ಥೆಯು, ಇದೀಗ ಸಾವಿರಾರು ಸಂಖ್ಯೆಯಲ್ಲಿ ಕಿತ್ತು ಬಿಸಾಡುತ್ತಿರುವುದು ನಿಜಕ್ಕೂ ಅಚ್ಚರಿಯೇ.
ಕೃತಕ ಬುದ್ಧಿಮತ್ತೆ (AI) ನಲ್ಲಿ ಹೆಚ್ಚುವರಿ ಹೂಡಿಕೆ ಮಾಡಿದ ಹಿನ್ನಲೆ ಸಂಸ್ಥೆಗೆ ಆರ್ಥಿಕ ಒತ್ತಡ ಹೇರಿದೆ. ಈ ಎಲ್ಲಾ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡ ಮೈಕ್ರೋಸಾಫ್ಟ್, ತನ್ನ ಹಲವು ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಉದ್ಯೋಗಿಗಳಿಗೆ ಎಐ ಸಲುವಾಗಿ ಗೇಟ್ಪಾಸ್ ಕೊಡಲು ನಿರ್ಧರಿಸಿದೆ. ಈ ಸುತ್ತಿನ ವಜಾಗಳು ಅತೀ ಮುಖ್ಯವಾಗಿ ಸೇಲ್ಸ್ ತಂಡವನ್ನೇ ಗುರಿಯಾಗಿರಿಸಿಕೊಂಡಿವೆ ಎಂದು ವರದಿಗಳು ತಿಳಿಸಿವೆ.
ಈ ಹಂತದ ವಜಾಗಳು ಮಾರಾಟ ತಂಡಗಳ ಮೇಲೆ ಪರಿಣಾಮ ಬೀರಲಿವೆ. ಆದರೆ, ಇತರ ಇಲಾಖೆಗಳಲ್ಲಿಯೂ ಕಡಿತಗಳಿರುತ್ತವೆ ಎನ್ನಲಾಗಿದೆ. ಉದ್ಯಮ ಸ್ಪರ್ಧೆಯನ್ನು ನಿಭಾಯಿಸಲು, ಕಂಪನಿಯು ಉತ್ಪನ್ನಗಳು ಮತ್ತು ಸೇವೆಗಳಲ್ಲಿ ಕೃತಕ ಬುದ್ಧಿಮತ್ತೆ (AI) ಸೇವೆಗಳನ್ನು ಹೆಚ್ಚು ಬಳಸಲು ನಿರ್ಧರಿಸಿದೆ. ಈ ಹಿನ್ನಲೆ ಮೈಕ್ರೋಸಾಫ್ಟ್ ಇತ್ತೀಚೆಗೆ ಕೃತಕ ಬುದ್ಧಿಮತ್ತೆ ಹೂಡಿಕೆಗಳ ಮೇಲೆ ಕೇಂದ್ರೀಕರಿಸಿದೆ. ಮೈಕ್ರೋಸಾಫ್ಟ್ ಪ್ರಸ್ತುತ ಹಣಕಾಸು ವರ್ಷಕ್ಕೆ 80 ಬಿಲಿಯನ್ ಡಾಲರ್ ಬಂಡವಾಳ ವೆಚ್ಚವನ್ನು ಯೋಜಿಸಿದೆ. ಇದರಲ್ಲಿ ಅರ್ಧಕ್ಕಿಂತ ಹೆಚ್ಚಿನದನ್ನು ಎಐ ಮೂಲಸೌಕರ್ಯವನ್ನು ಬೆಂಬಲಿಸಲು ಡೇಟಾ ಕೇಂದ್ರಗಳನ್ನು ನಿರ್ಮಿಸಲು ವ್ಯಯಿಸಲಿದೆ.
ಈ ವರ್ಷ ಮೈಕ್ರೋಸಾಫ್ಟ್ನ ವಜಾಗೊಳಿಸುವಿಕೆಗಳು ಹೆಚ್ಚಾಗಿ ಉತ್ಪಾದನೆ ಮತ್ತು ಇಂಜಿನಿಯರಿಂಗ್ನಲ್ಲಿವೆ. ಕಂಪನಿಯು ಈಗಾಗಲೇ ಸುಮಾರು 6,000 ಉದ್ಯೋಗಗಳನ್ನು ಕಡಿತಗೊಳಿಸಿದೆ. ಆದರೆ, ಈ ಬಾರಿ ಸೇಲ್ಸ್ ಮತ್ತು ಮಾರ್ಕೆಟಿಂಗ್ನಂತಹ ಗ್ರಾಹಕ-ಮುಖಿ ವಿಭಾಗಗಳ ಮೇಲೆ ಕೇಂದ್ರೀಕರಿಸಿದೆ. ಇದೇ ಮೈಕ್ರೋಸಾಫ್ಟ್ 2023ರಿಂದ ಇಲ್ಲಿಯವರೆಗೆ ಸುಮಾರು 10,000 ಉದ್ಯೋಗಿಗಳನ್ನು ಹೊರಗಟ್ಟಿದೆ ಎಂದು ವರದಿಗಳು ಉಲ್ಲೇಖಿಸಿವೆ,(ಏಜೆನ್ಸೀಸ್).