ಮೈಸೂರು : ದೇವರಾಜ ಮಾರುಕಟ್ಟೆಯಲ್ಲಿ ಪ್ರೀ ವೆಡ್ಡಿಂಗ್ ಶೂಟ್ ಗೆ ಬಿತ್ತು ಕಡಿವಾಣ

DEVARAJAMARKET1
Published on

ಮೈಸೂರು: ವೈವಾಹಿಕ ಜೀವನಕ್ಕೆ ಕಾಲಿಡುವ ಜೋಡಿಗಳು ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಮಾಡಿಸಿಕೊಳ್ಳುವುದು ಸಾಮಾನ್ಯ. ಆದರೆ, ಈ ಪ್ರೀ ವೆಡ್ಡಿಂಗ್ ಶೂಟ್‌ನಿಂದ ನಗರದ ದೇವರಾಜ ಮಾರುಕಟ್ಟೆಯ ವರ್ತಕರಿಗೆ ನೆಮ್ಮದಿಯಿಂದ ವ್ಯಾಪಾರ ವಹಿವಾಟು ನಡೆಸುವ ಅವಕಾಶವೇ ದೊರೆಯುತ್ತಿರಲಿಲ್ಲ. ಕೆಲವು ತಿಂಗಳ ಹಿಂದೆ ಪ್ರೀವೆಡ್ಡಿಂಗ್ ಫೋಟೋ ಶೂಟ್‌ಗೆ ಕಡಿವಾಣ ಹಾಕಿದ ನಂತರ ಇದೀಗ ವ್ಯಾಪಾರ ವಹಿವಾಟು ನಿಶ್ಚಿಂತೆಯಿಂದ ನಡೆಯುತ್ತಿದೆ.

ಯುವ ಜೋಡಿಗಳು ನಗರದ ಅರಮನೆ ಮುಂಭಾಗ, ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಆವರಣ, ಚಾಮರಾಜ ಒಡೆಯರ್ ವೃತ್ತ, ದೇವರಾಜ ಅರಸು ರಸ್ತೆಯಲ್ಲಿ ಹೆಚ್ಚಾಗಿ ಫೋಟೋ ಶೂಟ್ ಮಾಡುತ್ತಾರೆ. ಅದೇ ರೀತಿ ದೇವರಾಜ ಮಾರುಕಟ್ಟೆಯಲ್ಲೂ ಕಳೆದ ಕೆಲವು ತಿಂಗಳ ಹಿಂದಿನವರೆಗೂ ಪ್ರತಿನಿತ್ಯ ಸಾಕಷ್ಟು ಜೋಡಿಗಳು ಪ್ರೀವೆಡ್ಡಿಂಗ್ ಫೋಟೋ ಶೂಟ್‌ನಲ್ಲಿ ಭಾಗವಹಿಸುತಿತ್ತು. ಇದರಿಂದ ವ್ಯಾಪಾರ ವಹಿವಾಟು ನಡೆಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗುತಿತ್ತು. ಈ ಹಿನ್ನೆಲೆಯಲ್ಲಿ ವರ್ತಕರು ನಗರ ಪಾಲಿಕೆಯ ಗಮನ ಸೆಳೆದಾಗ ದೇವರಾಜ ಮಾರುಕಟ್ಟೆಯಲ್ಲಿ ನಗರ ಪಾಲಿಕೆಯು ಪ್ರೀ ವೆಡ್ಡಿಂಗ್ ಫೋಟೋ ಶೂಟ್ ನಿಷೇಧಿಸಿದೆ.

ಪ್ರೀ ವೆಡ್ಡಿಂಗ್ ಫೋಟೋ ಶೂಟ್ ನಿಷೇಧಿಸಿದ ನಂತರ ಇದೀಗ ದೇವರಾಜ ಮಾರುಕಟ್ಟೆಯ ವರ್ತಕರು ನೆಮ್ಮದಿಯಾಗಿ ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ. ಈ ನಡುವೆ ಕೆಲವು ಜೋಡಿಗಳು ಮಾರುಕಟ್ಟೆಗೆ ಫೋಟೋ ಶೂಟ್‌ಗೆ ಆಗಮಿಸಿದ್ದು, ಅವರಿಗೆ ವರ್ತಕರು ತಿಳಿ ಹೇಳಿ ವಾಪಾಸ್ ಕಳುಹಿಸಿದ್ದಾರೆ.

ಈ ಹಿಂದೆ ಮಾರುಕಟ್ಟೆಗೆ ಬರುತ್ತಿದ್ದ ಕೆಲವು ಜೋಡಿಗಳು ವ್ಯಾಪಾರ ವಹಿವಾಟಿಗೆ ಅವಕಾಶ ನೀಡುತ್ತಿರಲಿಲ್ಲ. ಫೋಟೋ ಶೂಟ್‌ಗೆ ಅಡ್ಡ ಬರುತ್ತಿದ್ದಾರೆ ಎಂದು ಕೆಲವು ಕ್ಯಾಮರಮನ್‌ಗಳು ವರ್ತಕರ ವಿರುದ್ಧ ಜಗಳವಾಡಿದ್ದೂ ಉಂಟು. ಇದರಿಂದ ವರ್ತಕರಿಗೆ ವ್ಯಾಪಾರ ವಾಗದೆ ನಷ್ಟ ಉಂಟಾಗುತಿತ್ತು. ದಿನೇ ದಿನೇ ಮಾರುಕಟ್ಟೆಯಲ್ಲಿ ಫೋಟೋ ಶೂಟ್ ಮಾಡಿಸಿಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದ್ದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ನಿಷೇಧ ಹೇರುವ ಪರಿಸ್ಥಿತಿ ನಿರ್ಮಾಣವಾಯಿತು.

ಟ್ರಾಫಿಕ್ ಸಮಸ್ಯೆ: ಕೇವಲ ದೇವರಾಜ ಮಾರುಕಟ್ಟೆ ಮಾತ್ರವಲ್ಲ ನಗರದ ವಿವಿಧೆಡೆ ನಡೆಯುತ್ತಿರುವ ಫೋಟೋ ಶೂಟ್‌ನಿಂದ ಸಾಕಷ್ಟು ಸಮಸ್ಯೆಗಳನ್ನು ಸಾರ್ವಜನಿಕರು ಎದುರಿಸುತ್ತಿದ್ದಾರೆ. ಫೋಟೋ ಶೂಟ್‌ನಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಟ್ರಾಫಿಕ್ ಸಮಸ್ಯೆ ಕಂಡು ಬರುತ್ತಿದೆ. ಸಾಕಷ್ಟು ಜೋಡಿಗಳು ರಸ್ತೆಯ ಮಧ್ಯದಲ್ಲಿ, ರಸ್ತೆ ಬದಿಯಲ್ಲಿ ಫೋಟೋ ಶೂಟ್ ಮಾಡಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಅಪಘಾತ ಸಂಭವಿಸುವ ಸಾಧ್ಯತೆ ಹೆಚ್ಚು ಇದೆ.

ಫೋಟೋ ಶೂಟ್‌ಗೆ ಆಗಮಿಸುವ ಜೋಡಿಯ ಜತೆಗೆ ಅವರ ಸಂಬಂಧಿಕರು, ಸ್ನೇಹಿತರು ಸಹ ಇರುತ್ತಾರೆ. ಚಾಮರಾಜ ವೃತ್ತವೊಂದರಲ್ಲೇ ಬೆಳಗ್ಗೆ ಪ್ರತಿನಿತ್ಯ ಕನಿಷ್ಠ ನಾಲ್ಕೈದು ಜೋಡಿಗಳನ್ನು ಕಾಣಬಹುದು. ಇದರಿಂದ ಸುಗಮ ವಾಹನ ಸಂಚಾರಕ್ಕೂ ಸಮಸ್ಯೆ ಎದುರಾಗುತ್ತಿದೆ. ಪ್ರೀ ವೆಡ್ಡಿಂಗ್ ಶೂಟ್‌ನಲ್ಲಿ ಭಾಗವಹಿಸುವ ಜೋಡಿಗಳು ತಮ್ಮ ಸುರಕ್ಷತೆಯ ಕಡೆಗೂ ಹೆಚ್ಚಿನ ಗಮನ ಹರಿಸುವ ಅವಶ್ಯಕತೆ ಇದೆ.

ಕೆಲವೆಡೆ ನಿಷೇಧ: ದೇವರಾಜ ಮಾರುಕಟ್ಟೆ ಮಾದರಿಯಲ್ಲಿಯೇ ರಾಜ್ಯ ಹಾಗೂ ದೇಶದ ವಿವಿಧೆಡೆ ಫೋಟೋ ಶೂಟ್‌ಗೆ ನಿಷೇಧ ಹೇರಿದ ಉದಾಹರ ಣೆಗಳು ಇವೆ. ಉಡುಪಿಯ ಶ್ರೀ ಕೃಷ್ಣ ಮಠದ ರಥಬೀದಿಯಲ್ಲಿ ಫೋಟೋ ಶೂಟ್ ನಿಷೇಧಿಸಲಾಗಿದೆ. ಬೆಂಗಳೂರಿನ ಲಾಲ್‌ಬಾಗ್‌ನಲ್ಲೂ ನಿಷೇಧ ಹೇರಲು ಪ್ರಸ್ತಾವನೆ ಸಿದ್ಧಪಡಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆಗಳು ಹೆಚ್ಚಾಗುವ ಸಾಧ್ಯತೆ ಇದ್ದು, ಸರ್ಕಾರ ಫೋಟೋ ಶೂಟ್‌ಗೆ ನಿಯಮಾವಳಿಗಳನ್ನು ರೂಪಿಸುವ ಅನಿವಾರ್ಯತೆ ನಿರ್ಮಾಣವಾಗಿದೆ.

ದುರಂತವೂ ನಡೆದಿತ್ತು: ಮುಡುಕುತೊರೆಯ ಕಾವೇರಿ ನದಿಯಲ್ಲಿ 2020ರಲ್ಲಿ ಫೋಟೋ ಶೂಟ್‌ನಲ್ಲಿ ಭಾಗವಹಿಸಿದ್ದ ನವಜೋಡಿ ತೆಪ್ಪ ಮುಳುಗಿದ ಪರಿಣಾಮ ಮೃತಪಟ್ಟಿದ್ದರು. ಕೆಲವು ವರ್ಷಗಳ ಹಿಂದೆ ಚಾಮರಾಜ ವೃತ್ತದಲ್ಲಿ ಫೋಟೋ ಶೂಟ್‌ನಲ್ಲಿ ಭಾಗವಹಿಸಿದ್ದ ಜೋಡಿ ಕೂದಲೆಳೆ ಅಂತರದಲ್ಲಿ ಅಪಘಾತದಿಂದ ಪಾರಾಗಿತ್ತು. ಹಾಗಾಗಿ ಫೋಟೋ ಶೂಟ್ ಸಂದರ್ಭ ಅಗತ್ಯ ಮುನ್ನೆಚ್ಚರಿಕೆ ಕ್ರಮ ವಹಿಸುವ ಅವಶ್ಯಕತೆ ಇದೆ. ನದಿ, ಕೆರೆ ಹಾಗೂ ಅಪಾಯಕಾರಿ ಸ್ಥಳಗಳಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಂಡರೆ ಮಾತ್ರ ಫೋಟೋ ಶೂಟ್‌ಗೆ ಅನುಮತಿ ನೀಡುವ ನಿಯಮಾವಳಿ ಜಾರಿಗೊಳಿಸುವ ಅವಶ್ಯಕತೆ ಇದೆ.

ದೇವರಾಜ ಮಾರುಕಟ್ಟೆಯಲ್ಲಿ ಪ್ರೀ ವೆಡ್ಡಿಂಗ್ ಫೋಟೋ ಶೂಟ್‌ನಿಂದ ಸಾಕಷ್ಟು ಸಮಸ್ಯೆಗಳು ಎದುರಾಗುತಿತ್ತು. ಫೋಟೋ ಶೂಟ್‌ಗೆ ಬರುವ ಜೋಡಿಗಳು ವ್ಯಾಪಾರಕ್ಕೆ ಅವಕಾಶ ನೀಡುತ್ತಿರಲಿಲ್ಲ. ಇದರಿಂದ ನಮಗೆ ಪ್ರತಿನಿತ್ಯ ಸಾಕಷ್ಟು ನಷ್ಟ ಉಂಟಾಗುತಿತ್ತು. ಈ ಸಮಸ್ಯೆಯ ಕುರಿತು ನಗರ ಪಾಲಿಕೆಯ ಗಮನ ಸೆಳೆದ ನಂತರ ಇತ್ತೀಚೆಗೆ ಮಾರುಕಟ್ಟೆಯಲ್ಲಿ ಫೋಟೋ ಶೂಟ್ ನಿಷೇಧಿಸಲಾಗಿದೆ. ಹೀಗಾಗಿ ಇದೀಗ ವ್ಯಾಪಾರ ವಹಿವಾಟು ಉತ್ತಮವಾಗಿ ನಡೆಯುತ್ತಿದೆ. ಮಾಹಿತಿ ಇಲ್ಲದ ಕೆಲವು ಜೋಡಿಗಳು ಫೋಟೋ ಶೂಟ್‌ಗೆ ಈಗಲೂ ಆಗಮಿಸುತ್ತಿವೆ. ಅವರಿಗೆ ನಿಷೇಧದ ಮಾಹಿತಿ ನೀಡಿ ವಾಪಾಸ್ ಕಳುಹಿಸಲಾಗುತ್ತಿದೆ. ಇನ್ನು ಮುಂದೆ ಯಾವುದೇ ಕಾರಣಕ್ಕೆ ಮಾರುಕಟ್ಟೆಯಲ್ಲಿ ಫೋಟೋ ಶೂಟ್‌ಗೆ ಅವಕಾಶ ನೀಡುವುದಿಲ್ಲ.

ಮಹದೇವ್, ಅಧ್ಯಕ್ಷ, ದೇವರಾಜ ಮಾರುಕಟ್ಟೆ ವರ್ತಕರ ಸಂಘ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net