ಹೆಚ್ಚಿನ ರಕ್ತದ ಒತ್ತಡ ನಿಯಂತ್ರಣಕ್ಕೆ ಮಿಯಾ ಮುದ್ರೆ ಸಹಕಾರಿ

miya mudre
Published on

ಇದು ಒಂದು ಕುತೂಹಲಕಾರಿ ಮುದ್ರೆಯಾಗಿದೆ. ಈ ಮುದ್ರೆಯ ಪ್ರಾಮುಖ್ಯತೆ ಹೆಚ್ಚು ಮತ್ತು ಕಡಿಮೆ ರಕ್ತದ ಒತ್ತಡವನ್ನು ಸಮತೋಲನದಲ್ಲಿ ಇರಿಸಲು ಸಹಾಯ ಮಾಡುತ್ತದೆ. ಈ ಮುದ್ರೆಯು ಇಲ್ಲಿ ಕಡಿಮೆ ರಕ್ತದ ಒತ್ತಡವನ್ನು ನಿಯಂತ್ರಿಸುತ್ತದೆ ಹಾಗೂ ಹೆಚ್ಚಿನ ರಕ್ತದ ಒತ್ತಡವನ್ನು ನಿಯಂತ್ರಿಸುತ್ತದೆ.

ವಿಧಾನ: ಎರಡು ಕೈಗಳಲ್ಲಿನ ಮಧ್ಯದ ಬೆರಳು ಉಂಗುರ ಬೆರಳನ್ನು ಅಲ್ಲಿಯೇ ಹಸ್ತದ ಬುಡಕ್ಕೆ ಮಡಿಸಿ ಒತ್ತಿಡಬೇಕು (ಚಿತ್ರದಲ್ಲಿರುವಂತೆ) ಉಳಿದ ಬೆರಳುಗಳು ನೇರವಾಗಿರಲಿ. ಈ ಮುದ್ರೆಯನ್ನು ಸುಮಾರು 10 ರಿಂದ 30 ನಿಮಿಷದವರೆಗೆ ಅಭ್ಯಾಸ ಮಾಡಿ. ಅನಂತರ ಕೊನೆಯಲ್ಲಿ 10 ನಿಮಿಷ ಪ್ರಾಣ ಮುದ್ರೆ ಅಭ್ಯಾಸ ಮಾಡಿ. ಸಾಧ್ಯವಾದರೆ ಈ ಮುದ್ರೆಯನ್ನು ಸುಖಾಸನ ಯಾ ಪದ್ಮಾಸನದಲ್ಲಿ ಅಭ್ಯಾಸ ಮಾಡಿದರೆ ಬಲು ಪ್ರಯೋಜನವಾಗುತ್ತದೆ. ಇಷ್ಟ ದೇವರ ಮಂತ್ರ 108 ಬಾರಿ ಪಠಿಸಿ.

ಪ್ರಯೋಜನಗಳು: ಈ ಮುದ್ರೆಯ ಅಭ್ಯಾಸದಿಂದ ಬ್ಲಡ್ ಪ್ರೆಶರ್ ಸಮಸೆ್ಯಯ ನಿಯಂತ್ರಣಕ್ಕೆ ತುಂಬಾ ಸಹಾಯವಾಗುತ್ತದೆ. ಹೆಚ್ಚಿನ ರಕ್ತದ ಒತ್ತಡ ನಿಯಂತ್ರಣವಾಗುತ್ತದೆ. ಹೆಚ್ಚಿನ ರಕ್ತದ ಒತ್ತಡ ಸಮಸ್ಯೆಯಿದ್ದವರು ಸಾಕಷ್ಟು ಮನಸ್ಸಿಗೆ ವಿಶ್ರಾಂತಿ ನೀಡುವ ಶವಾಸನವನ್ನು ದಿವಸಕ್ಕೆ ಮೂರು ಬಾರಿ ಮಾಡಿ. ಹಾಗೂ ವಿಶ್ರಾಂತಿಯ ವಿಧಾನವನ್ನು ಕಲಿಯಬೇಕು. ಮುಖ್ಯವಾಗಿ ದೇಹ ಮನಸ್ಸುಗಳಿಗೆ ವಿಶ್ರಾಂತಿಯೂ, ನೆಮ್ಮದಿಯೂ ದೊರೆಯುತ್ತದೆ. ಮನಸ್ಸಿನ ಏಕಾಗ್ರತೆ ಹೆಚ್ಚಿಸಲು ಸುಲಭವಾಗುತ್ತದೆ. ಕೆಲಸ ಮಾಡಿ ಆಯಾಸವಾದವರಿಗೆ ಹೊಸ ಹುರುಪು, ಹೊಸ ಚೈತನ್ಯಈ ಶವಾಸನದಿಂದ ಉಂಟಾಗುತ್ತದೆ. ರಕ್ತದೊತ್ತಡ, ಮಾನಸಿಕ ಒತ್ತಡ, ಹೃದಯದ ಕಾಯಿಲೆ, ಶ್ವಾಸಕೋಶ ವಿಕಾರ ಮೊದಲಾದ ರೋಗಗಳ ನಿಯಂತ್ರಣವಾಗುತ್ತದೆ. ಚಿಂತೆಯು ಪರಿಹಾರವಾಗುತ್ತದೆ. ನಿದ್ರೆಯು ಚೆನ್ನಾಗಿ ಬರುತ್ತದೆ.

ಮಾನವನ ಪ್ರತಿಯೊಂದು ಅಂಗಗಳ ಹಾಗೂ ನರಗಳ ನಾಡಿಗಳ ಕೊನೆಯ ಭಾಗ ಕೈ ಬೆರಳುಗಳು ಮತ್ತು ಕಾಲಿನ ಬೆರಳುಗಳು. ಕೈ ಬೆರಳಿನ ತುದಿಗಳ ನರ ತಂತುಗಳು ಹಾಗೂ ಮಿದುಳಿನ ನರ ತಂತುಗಳಿಗೆ ನೇರ ಸಂಪರ್ಕವಿದೆ.

ಇಲ್ಲಿ ಹೆಬ್ಬೆರಳು ಅಗ್ನಿತತ್ವವನ್ನು ಪ್ರತಿನಿಧಿಸುತ್ತದೆ. ಇದು ದೇಹದ ಉಷ್ಣತೆಯನ್ನು ಹತೋಟಿಯಲ್ಲಿಡುತ್ತದೆ. ತೋರು ಬೆರಳು ವಾಯು ತತ್ವವನ್ನು ಹೊಂದಿದೆ. ಇದು ಪಂಚ ಪ್ರಾಣಗಳು ಹಾಗೂ ಪಂಚ ಉಪಪ್ರಾಣಗಳನ್ನು ಹತೋಟಿಯಲ್ಲಿಡುತ್ತದೆ. ನಮ್ಮ ದೇಹದಲ್ಲಿ ವಾಯು ಸಂಚಾರವನ್ನು ಸಮರ್ಪಕವಾಗಿ ನಿರ್ವಹಿಸುತ್ತದೆ. ಮಧ್ಯದ ಬೆರಳು ಆಕಾಶ ತತ್ವ, ಅಂತರಿಕ್ಷ ಎಂದರೆ ಮನಸ್ಸು. ಇಲ್ಲಿ ಮಧ್ಯದ ಬೆರಳು ಮನಸ್ಸನ್ನು ಹತೋಟಿಯಲ್ಲಿಡುತ್ತದೆ. ಉಂಗುರ ಬೆರಳು ವ್ಯಕ್ತಿಯ ಶರೀರಲ್ಲಿರುವ ಮೂಳೆ, ಮಾಂಸ, ಚರ್ಮ, ಕೂದಲು ಇತ್ಯಾದಿಗಳನ್ನು ಸರಿಪಡಿಸಿ ಹತೋಟಿಯಲ್ಲಿಡುತ್ತದೆ. ಕಿರುಬೆರಳು, ಮಲ, ಮೂಲ, ಬೆವರು, ಹಾಗೂ ದೇಹದಲ್ಲಿರುವ ದ್ರವದ ಅಂಶವನ್ನು ಹತೋಟಿಯಲ್ಲಿಡುತ್ತದೆ. ಈ ಪಂಚತತ್ವಗಳು ಅಗ್ನಿ, ವಾಯು, ಆಕಾಶ, ಭೂಮಿ, ವರುಣ, ಇದರಲ್ಲಿ ಏನಾದರೂ ಕೊರತೆಯಾದರೆ ವ್ಯಕ್ತಿಗೆ ಕಾಯಿಲೆಗಳು ಬರುತ್ತದೆ.

ಪಂಚಭೂತಗಳು 365 ದಿನವು ಸಮತೋಲನದಲ್ಲಿ ಇರಬೇಕು. ಅದಕ್ಕೋಸ್ಕರ ನಮ್ಮ ಆರೋಗ್ಯಕ್ಕೆ ಜ್ಞಾನಿಗಳು ಶಾಸ್ತ್ರದಲ್ಲಿ ತಿಳಿಸಿದಂತೆ ಕೈ ಬೆರಳುಗಳ ವ್ಯವಸ್ಥಿತ ಚಲನೆಯಲ್ಲಿ ಮುದ್ರೆಗಳನ್ನು ಮಾಡಬೇಕು. ಮಾನವನ ಶರೀರದಲ್ಲಿ 1008 ಅಂಗಗಳು ಪ್ರಮುಖ 108 ನಾಡಿಗಳಿವೆ ಎಂದು ಚರಕ ಸಂಹಿತೆಯಲ್ಲಿ ಹೇಳಿದೆ. ನಮ್ಮ ಕೈಬೆರಳುಗಳನ್ನು ಹಾಗೂ ಹಸ್ತಗಳನ್ನು ಉಪಯೋಗಿಸಿಕೊಂಡು ವಾತ, ಪಿತ್ತ ಕಫವನ್ನು ನಿಗ್ರಹಿಸಬಹುದು ಎಂದು ಮುದ್ರಾ ಶಾಸ್ತ್ರದಲ್ಲಿ ಹೇಳಿದೆ. ಇಲ್ಲಿ ಮುದ್ರೆ ಪಿಸಿಯೋಥೆರಪಿಯಾಗುತ್ತದೆ. ಮಂತ್ರ ಸೌಂಡ್ ಥೆರಪಿ ಆಗುತ್ತದೆ. ಮುದ್ರೆ, ಅಭ್ಯಾಸ ಮಾಡುವ ಮುಂಚೆ ಮಾಹಿತಿ, ನಿಯಮಗಳನ್ನು ಪಡೆದು ಗುರುಮುಖೇನವೇ ಕಲಿತು, ನಿತ್ಯ ನಿರಂತರವಾಗಿ ಜೀವನದಲ್ಲಿ ಅಳವಡಿಸಿಕೊಳ್ಳಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net