VIDEO| ಮಳೆ ನೀರಿನಂತೆ ಚರಂಡಿಗೆ ಹರಿಯಿತು ಮೆಥೆನಾಲ್! ಬೆಚ್ಚಿಬಿದ್ದ ಜನ

Diesel tanker Accident
Published on

ಹಾಸನ: ಆಲೂರು ತಾಲೂಕು ಪಾಳ್ಯ ಸಮೀಪದ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಮೆಥೆನಾಲ್ ತುಂಬಿದ್ದ ಟ್ಯಾಂಕರ್ ಪಲ್ಟಿಯಾಗಿ ಬರೋಬ್ಬರಿ 16 ಸಾವಿರ ಲೀಟರ್​ ಮೆಥೆನಾಲ್ ಮಣ್ಣು ಪಾಲಾಗಿದೆ.

ಮಂಗಳೂರಿನಿಂದ ಹಾಸನಕ್ಕೆ ಮೆಥೆನಾಲ್ ಸಾಗಿಸುತ್ತಿದ್ದ ಟ್ಯಾಂಕರ್ ಶುಕ್ರವಾರ ಬೆಳಗ್ಗೆ ರಸ್ತೆಗೆ ಉರುಳಿತ್ತು. ಈ ವೇಳೆ ಟ್ಯಾಂಕರ್​ನಿಂದ ಹೊರ ಬಂದ ಮೆಥೆನಾಲ್ ರಸ್ತೆಯಲ್ಲಿ ಮಳೆ ನೀರಿನಂತೆ ಹರಿದಿದೆ.

ಟ್ಯಾಂಕ್​ನಿಂದ ಸೋರಿಕೆಯಾದ ಮೆಥೆನಾಲ್​ ಅನ್ನು ಸ್ಥಳೀಯರು ತಾ ಮುಂದು-ನಾ ಮುಂದು ಎಂಬಂತೆ ತುಂಬಿಕೊಳ್ಳಲು ಬಕೆಟ್​ ಹಿಡಿದು ಬಂದ ಘಟನೆಯೂ ಸಂಭವಿಸಿತು. ಬೆಂಕಿ ಅವಘಡ ಸಂಭವ ಅರಿಯುತ್ತಿದ್ದಂತೆ ಎಚ್ಚೆತ್ತ ಜನರು ದೂರ ಸರಿದರು. ಕೆಲ ಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಬಳಿಕ ಸ್ಥಳೀಯರು ಗುದ್ದಲಿ ಬಳಸಿ ಮೆಥೆನಾಲ್ ಅನ್ನು ಚರಂಡಿಗೆ ಹರಿಯುವಂತೆ ಮಾಡಿದರು.

ಆಲೂರು ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿದ್ದು, ಅಗ್ನಿ ಅವಘಡ ಸಂಭವಿಸದಂತೆ ಎಚ್ಚರ ವಹಿಸಿದ್ದಾರೆ. ಹೆದ್ದಾರಿಯಲ್ಲಿ ಸಂಚಾರ ಸ್ಥಗಿತಗೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net