ಮನೆ ಮನೆಗೆ ಬರಲಿದ್ದಾರೆ ಮೀಟರ್ ರೀಡರ್ಸ್; ಈ ಬಾರಿ ಇಲ್ಲ ಸರಾಸರಿ ಬಿಲ್​ ಗೊಂದಲ...

Vidyut 2 May 20
Published on

ಹುಬ್ಬಳ್ಳಿ: ಲಾಕ್​ಡೌನ್​ನಲ್ಲಿ ವಿನಾಯಿತಿ ನೀಡಿರುವುದ ರಿಂದ ಈ ತಿಂಗಳು ವಿದ್ಯುತ್ ಮೀಟರ್ ರೀಡರ್​ಗಳು ಮನೆ ಮನೆಗೆ ಬರಲಿದ್ದಾರೆ. ಬಳಕೆ ಮಾಡಿದಷ್ಟು ಯುನಿಟ್​ಗೆ ಬಿಲ್ ಪಾವತಿಸುವ ಸಮಾಧಾನ ಗ್ರಾಹಕರದ್ದಾಗಲಿದೆ. ಸರಾಸರಿ ಬಿಲ್ ಗೊಂದಲ ಇರುವುದಿಲ್ಲ.

ಮೇ ಮತ್ತು ನಂತರದ ತಿಂಗಳಿನಲ್ಲಿ ಮೀಟರ್ ರೀಡಿಂಗ್ ಮಾಡಿಯೇ ಎಲ್ಲ ವರ್ಗದ ವಿದ್ಯುತ್ ಗ್ರಾಹಕರಿಗೆ ಬಿಲ್ ನೀಡಬೇಕೆಂದು ಇಂಧನ ಇಲಾಖೆ, ವಿದ್ಯುತ್ ಸರಬರಾಜು ಕಂಪನಿ (ಎಸ್ಕಾಂ)ಗಳಿಗೆ ಸೂಚಿಸಿದೆ. ಇದೇ ವೇಳೆ ಸಂಪೂರ್ಣ ಸೀಲ್​ಡೌನ್ ಆಗಿರುವ ಪ್ರದೇಶದ ಹಾಗೂ ಕ್ವಾರಂಟೈನ್​ನಲ್ಲಿರುವ ವಿದ್ಯುತ್ ಬಳಕೆದಾರರಿಗೆ ಇದು ಅನ್ವಯವಾಗುವುದಿಲ್ಲ. ಅಲ್ಲಿ ಸರಾಸರಿ ಲೆಕ್ಕಾಚಾರ ಮುಂದುವರಿಯಲಿದೆ.

ಏಪ್ರಿಲ್ ತಿಂಗಳಲ್ಲಿ ಸಾಕಷ್ಟು ಗ್ರಾಹಕರು ಸರಾಸರಿ ಬಳಕೆ ಲೆಕ್ಕದಲ್ಲಿ ವಿದ್ಯುತ್ ಶುಲ್ಕ ಪಾವತಿಸಿದ್ದರು. ಆದರೆ, ಮೇ ತಿಂಗಳಲ್ಲಿ ಹಾಗೇ ಇರುವುದಿಲ್ಲ. ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್​ಸಿ)ದ ಮಾರ್ಗಸೂಚಿಯಂತೆ ಏಪ್ರಿಲ್ ತಿಂಗಳ ನಿಜವಾದ ಬಿಲ್ ಸೃಜಿಸಿ ಗ್ರಾಹಕರು ಸಂದಾಯ ಮಾಡಿರುವ ಹೆಚ್ಚುವರಿ ಅಥವಾ ಕೊರತೆ ಬಿಲ್ ಮೊತ್ತವನ್ನು ಮೇ ತಿಂಗಳಲ್ಲಿ ಹೊಂದಾಣಿಕೆ ಮಾಡಿ ಬಿಲ್ ನೀಡಬೇಕೆಂದು ಇಲಾಖೆ ಸೂಚಿಸಿದೆ. ಇ-ಮೇಲ್, ಎಸ್​ಎಂಎಸ್, ವಾಟ್ಸ್ ಆಪ್ ಮೂಲಕ ಗ್ರಾಹಕರಿಗೆ ಬಿಲ್ ನೀಡಬಹುದು.

ಲಾಕ್​ಡೌನ್ ಕಾರಣಕ್ಕೆ ಏಪ್ರಿಲ್ ತಿಂಗಳಲ್ಲಿ ಕೈಗಾರಿಕೆ ಹಾಗೂ ವಾಣಿಜ್ಯ ಘಟಕಗಳು ಉತ್ಪಾದನೆ, ಕಾರ್ಯನಿರ್ವಹಣೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿವೆ. ಈ ಅವಧಿಯಲ್ಲಿ ಕನಿಷ್ಠ ಶುಲ್ಕ ಮಾತ್ರ ಆಕರಣೆ ಮಾಡಬಹುದೇ ಹೊರತು ಸರಾಸರಿ ಬಿಲ್ ಪಡೆಯುವುದು ಸಮಂಜಸವಲ್ಲ. ಬೇಸಿಗೆ ಕಾರಣಕ್ಕೆ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಗೃಹ ಬಳಕೆ ವರ್ಗದಲ್ಲಿ ವಿದ್ಯುತ್ ಬಳಕೆ ಅಧಿಕವಾಗಿರುತ್ತದೆ. ಇವರಿಂದಲೂ ಸರಾಸರಿ ಬಿಲ್ ಪಡೆಯುವುದು ತಾಂತ್ರಿಕ ಸಮಸ್ಯೆ ತಂದೊಡ್ಡುತ್ತದೆ ಎಂದು ಎಸ್ಕಾಂಗಳು ಮನವಿ ಮಾಡಿದ್ದವು.

ಬಿಲ್ ಪಾವತಿ ವಿಧಾನ

ಗ್ರಾಹಕರು ಸಹಾಯವಾಣಿ (ಸಂಖ್ಯೆ 1912)ಗೆ ಕರೆ ಮಾಡಿ ತಮ್ಮ ಖಾತೆ ಸಂಖ್ಯೆ ಹಾಗೂ ಮೊಬೈಲ್ ನಂಬರ್ ನೀಡಿ ಇ-ಮೇಲ್, ಎಸ್​ಎಂಎಸ್, ವಾಟ್ಸ್​ಆಪ್ ಮೂಲಕ ಬಿಲ್ ಪ್ರತಿ ಪಡೆಯಬಹುದು. ಆಯಾ ಎಸ್ಕಾಂ ಮೊಬೈಲ್ ಆಪ್ ಅಥವಾ ವೆಬ್​ಸೈಟ್​ನಲ್ಲಿ ನೋಂದಣಿ ಮಾಡಿ ಬಿಲ್ ವಿವರಗಳನ್ನು ಪಡೆಯಬಹುದು. ಕರ್ನಾಟಕ ಒನ್ ವೆಬ್​ಸೈಟ್, ಆಪ್, ಬ್ಯಾಂಕ್​ಗಳ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಇಂಟರ್​ನೆಟ್ ಬ್ಯಾಂಕಿಂಗ್, ವ್ಯಾಲೆಟ್ ಪೇಮೆಂಟ್ಸ್, ಯುಪಿಐ ಪೇಮೆಂಟ್ಸ್, ಪೇ ಯು ಆಪ್ ಮೂಲಕ, ಉಪ ವಿಭಾಗೀಯ ಕಚೇರಿಯ ಕ್ಯಾಷ್ ಕೌಂಟರ್, ಎಟಿಪಿ ಕೌಂಟರ್​ನಲ್ಲಿ ವಿದ್ಯುತ್ ಬಿಲ್ ಸಂದಾಯ ಮಾಡಬಹುದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net